ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ಮೃದು ಕೋಮುವಾದಿ ಪಕ್ಷ

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಾ. ಎನ್‌.ಮೂರ್ತಿ
Published 21 ಮಾರ್ಚ್ 2024, 16:17 IST
Last Updated 21 ಮಾರ್ಚ್ 2024, 16:17 IST
ಅಕ್ಷರ ಗಾತ್ರ

ಗದಗ: ‘ಭಾರತೀಯ ಜನತಾ ಪಕ್ಷ ಕೋಮುವಾದಿ ಪಕ್ಷವಾದರೆ; ಕಾಂಗ್ರೆಸ್‌ ಮೃದು ಕೋಮುವಾದಿ ಪಕ್ಷ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಾ. ಎನ್‌. ಮೂರ್ತಿ ಆರೋಪ ಮಾಡಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಆಡಳಿತ ನಡೆಸಿದ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಿಂದ ಯಾವುದೇ ಕ್ರಾಂತಿಕಾರಕ ಬದಲಾವಣೆಗಳು ಆಗಿಲ್ಲ. ಈಗ ಬಿಜೆಪಿ ಸಂವಿಧಾನ ಬದಲಾಯಿಸುವ ಕುರಿತು ಮಾತನಾಡುತ್ತಿದೆ. ಇದರಿಂದ ದಲಿತರು ಭೀತಿಗೊಂಡಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಸ್ವಾರ್ಥಕ್ಕಾಗಿ ದೇಶವನ್ನು ದಿವಾಳಿ ಮಾಡುತ್ತಿವೆ’ ಎಂದು ಹರಿಹಾಯ್ದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳು ಚುನಾವಣೆಯಲ್ಲಿ ಮತ ಸೆಳೆಯುವ ಬಾಣಗಳು. ಪರಿಶಿಷ್ಟ ಜಾತಿಯ ಏಳ್ಗೆಗೆ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಹಣವನ್ನು ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿ ದಲಿತರಿಗೆ ಅನ್ಯಾಯ ಮಾಡಿದೆ’ಎಂದು ಕಿಡಿಕಾರಿದರು.

‘ಗಂಗಾ ಕಲ್ಯಾಣ ಯೋಜನೆಯಲ್ಲಿ ಒಂದು ಕೊಳವೆಬಾವಿ ಕೊರೆಯಿಸಿಲ್ಲ. ಐರಾವತ ಯೋಜನೆಯಲ್ಲಿ ಒಂದೂ ಟ್ಯಾಕ್ಸಿ ನೀಡಿಲ್ಲ. ಭೂಒಡೆತನ ಯೋಜನೆಯಲ್ಲಿ ಕೊಳವೆಬಾವಿ ಕೊರೆದಿಲ್ಲ. ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ 36 ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಯೋಜನೆಗಳು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಯಿಂದ ಸ್ಥಗಿತವಾಗಿವೆ’ ಎಂದು ಆರೋಪ ಮಾಡಿದರು.

‘ಬೆಂಗಳೂರಿನ ಜನರು ಕುಡಿಯಲು ನೀರಿಲ್ಲದೇ ಒದ್ದಾಡುತ್ತಿದ್ದಾರೆ. ರಾಜ್ಯ ಸರ್ಕಾರ ರಾಜಕಾರಣ ಮಾಡಲು ತಮಿಳುನಾಡಿಗೆ ನೀರು ಬಿಟ್ಟು ಕನ್ನಡಿಗರಿಗೆ ಅನ್ಯಾಯ ಮಾಡಿದೆ’ ಎಂದು ಹರಿಹಾಯ್ದರು.

‘ನರೇಂದ್ರ ಮೋದಿ ಅವರು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ, ಇದ್ದ ಉದ್ಯೋಗ ಕಸಿದುಕೊಂಡಿದ್ದಾರೆ. ಸರ್ಕಾರದ 23 ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ, ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ 8 ವರ್ಷಗಳಲ್ಲಿ 2.28 ಲಕ್ಷ ಉದ್ಯೋಗಗಳು ಕಡಿತವಾಗಿವೆ. 2013-14ರಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ 2.38 ಲಕ್ಷದಷ್ಟಿದ್ದ ಹುದ್ದೆಗಳು 2021ರ ಆರ್ಥಿಕ ಸಾಲಿನಲ್ಲಿ 1.45 ಲಕ್ಷ ಕಡಿತ ಮಾಡಲಾಗಿದೆ. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2024ರ ಲೋಕಸಭೆ ಚುನಾವಣೆಯಲ್ಲಿ ಮತದಾರರು ದೇಶದ ಭವಿಷ್ಯ ಮತ್ತು ಸಂವಿಧಾನ ರಕ್ಷಣೆಯನ್ನು ಮನಗಂಡು ಪ್ರಬುದ್ಧತೆಯಿಂದ ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ಕಲಕೇರಿ, ಮುಖಂಡರಾದ ಉಮೇಶ್ ಪೂಜಾರ, ಯಮನೂರು ಪೂಜಾರ, ಬಿ.ಜಿ.ಕಟ್ಟಿಮನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT