ಬೆಲೆ ಏರಿಕೆ ಬಿಸಿ ನಡುವೆಯೂ ಪಂಚಮಿಗೆ ಸಿದ್ಧತೆ

7

ಬೆಲೆ ಏರಿಕೆ ಬಿಸಿ ನಡುವೆಯೂ ಪಂಚಮಿಗೆ ಸಿದ್ಧತೆ

Published:
Updated:
Deccan Herald

ಲಕ್ಷ್ಮೇಶ್ವರ: "ಪಂಚಮಿ ಹಬ್ಬಕ್ಕ ಉಳದಾವ ನಾಕ ದಿನಾ, ಅಣ್ಣಾ ಬರಲಿಲ್ಲ ಯಾಕ ಕರಿಯಾಕ" ಎಂಬ ಹಾಡಿನೊಂದಿಗೆ ತವರು ಮನೆಯ ಸಂಬಂಧ ನೆನಪಿಸುವ ಪಂಚಮಿ ಹಬ್ಬ ಮತ್ತೆ ಬಂದಿದ್ದು ಹೆಂಗಳೆಯರಲ್ಲಿ ಸಂತಸ ಇಮ್ಮಡಿಸಿದೆ.

ಜಿಟಿ ಜಿಟಿ ಮಳೆ ನಡುವೆ ಊರಲ್ಲೆಲ್ಲ ಕೆಸರು ತುಂಬಿಕೊಂಡಿರುವ ಸಮಯದಲ್ಲೇ ಈ ಹಬ್ಬ ಬರುವುದು ವಿಶೇಷ. ನಾಗರ ಪಂಚಮಿಗೆ ವಿವಿಧ ರೀತಿಯ ಉಂಡಿಗಳನ್ನು ಕಟ್ಟಿ ನಾಗಪ್ಪನಿಗೆ ಎಡೆ ಹಿಡಿಯುವುದು ಸಾಮಾನ್ಯ. ಹೀಗಾಗಿ ಕಳೆದ ಎರಡು ದಿನಗಳಿಂದ ಪೇಟೆಯಲ್ಲಿ ಖರೀದಿ ಜೋರಾಗಿದೆ. ಆದರೆ ಬೆಲೆ ಏರಿಕೆ ಜನಸಾಮಾನ್ಯರನ್ನು ಕಂಗೆಡಿಸಿದೆ.

ಸದ್ಯ ಕೆಜಿ ಬೆಲ್ಲ ₹38-42, ಕಾಬೂಲ್ ಪುಠಾಣಿ ₹65, ಶೇಂಗಾ ₹80, ಕರಿಎಳ್ಳು ಕೆಜಿಗೆ ₹160ಕ್ಕೆ ಮಾರಾಟ ಅಗುತ್ತಿವೆ. ಇನ್ನು ಸೇವು (ಡಾಣಿ) ಹಾಗೂ ಗುಳಿಗಿ ಕೆಜಿಗೆ ₹80 ಇದ್ದರೆ ಸಕ್ಕರೆ ₹35, ಕರಾಚಿ ರವಾ ಬೆಲೆ ₹34 ಇದೆ. ಗಗನಮುಖಿಯಾಗಿರುವ ವಸ್ತುಗಳ ಬೆಲೆ ಬಡವರನ್ನು ಹೈರಾಣಾಗಿಸಿದೆ.

‘ಈ ವರ್ಷ ಎಲ್ಲಾ ಸಾಮಾನುಗಳ ರೇಟ್ ಬಾಳ ದುಬಾರಿ ಆಗ್ಯಾವು. ಆದರ ಎಷ್ಟ ತುಟ್ಟಿ ಆದರೂ ಹಬ್ಬ ಮಾಡಬೇಕಲ್ರೀ’ ಎಂದು ಸೋಮವಾರ ಸಂತೆಗೆ ಬಂದಿದ್ದ ಗೊಜನೂರಿನ ಲಕ್ಷ್ಮಪ್ಪ ಹೇಳಿದರು.

ಇನ್ನು ಪಂಚಮಿ ಹಬ್ಬಕ್ಕೆ ಹೂ ಹಣ್ಣು ಬೇಕೇ ಬೇಕು. ಹೀಗಾಗಿ ಇವುಗಳ ದರದಲ್ಲೂ ಏರಿಕೆ ಕಂಡು ಬಂದಿದೆ. ಡಜನ್ ಬಾಳೆಹಣ್ಣಿನ ಬೆಲೆ ₹35-40 ಇದ್ದರೆ ಮಾರುದ್ದದ ಕಾಕಡಾ ಹೂವಿನ ಮಾಲೆ ₹20 ಇದೆ.

ಈ ವರ್ಷ ಆರಂಭದಲ್ಲಿ ಮುಂಗಾರು ಚೆನ್ನಾಗಿ ಸುರಿದಿತ್ತು. ಹೀಗಾಗಿ ಮುಂಗಾರು ಹಂಗಾಮಿನ ಪ್ರಥಮ ಬೆಳೆ ಹೆಸರಿನ ಇಳುವರಿ ಸ್ವಲ್ಪ ಚೆನ್ನಾಗಿ ಬಂದಿದೆ. ಇದು ರೈತಾಪಿ ಜನರಲ್ಲಿ ಖುಷಿ ತಂದಿದ್ದು ಅವರು ಹುರುಪಿನಿಂದ ಹಬ್ಬ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ನಾಗರಾಜ ಎಸ್. ಹಣಗಿ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !