ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ಗದಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗದುಗಿನ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು), ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವವರ ಸಂಘ (ಎಐಟಿಯುಸಿ) ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಬಗೆಹರಿಯದ ಬಹುಕಾಲದ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ತಪ್ಪಿದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಗದುಗಿನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಹಾಸಂಘದ ಅಧ್ಯಕ್ಷ ಎಂ.ಐ.ನವಲೂರ ಮಾತನಾಡಿ, ‘ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ಸರ್ಕಾರ ₹3 ಸಾವಿರ ಪರಿಹಾರಧನ ಘೋಷಿಸಿದೆ. ಆದರೆ, ಕೆಲವು ಕಾರ್ಮಿಕರಿಗೆ ಈ ಹಣ ತಲುಪಿಲ್ಲ. ಆಧಾರ್ ಸಂಖ್ಯೆ ಗೊಂದಲ, ಬ್ಯಾಂಕ್‌ಗಳ ವಿಲೀನ ಹಾಗೂ ಕೆಲವು ಕಾರ್ಮಿಕರು ತಮ್ಮ ಖಾತೆಗಳನ್ನು ಚಾಲ್ತಿಯಲ್ಲಿ ಇರಿಸದ ಕಾರಣದಿಂದ ಹಣ ದೊರೆತಿಲ್ಲ. ಈ ಸಮಸ್ಯೆ ಬಗೆಹರಿಸಿ ಕಾರ್ಮಿಕರಿಗೆ ಶೀಘ್ರವೇ ಹಣ ಒದಗಿಸಬೇಕು. ಜತೆಗೆ ಪರಿಹಾರ ಹಣದ ಮೊತ್ತವನ್ನು ₹10 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.
‘ದಿನಸಿ ಕಿಟ್, ಟೂಲ್ ಕಿಟ್, ಸುರಕ್ಷತಾ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಇಲ್ಲ. ಇವುಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ದಿನಸಿ ಕಿಟ್‌ಗೆ ಸಂಬಂಧಿಸಿದ ವಸ್ತುಗಳನ್ನು ದುಪ್ಪಟ್ಟು ಹಣ ನೀಡಿ ಖರೀದಿಸಲಾಗಿದೆ. ಜತೆಗೆ ಕಳಪೆ ಆಹಾರ ಸಾಮಗ್ರಿ ನೀಡಿದ್ದಾರೆ. ಕಾರ್ಮಿಕ ಮಂಡಳಿ ನೀಡಿರುವ ಕಿಟ್‍ಗಳ ಮೇಲೆ ರಾಜಕೀಯ ಪಕ್ಷದ ಕಾರ್ಯಕರ್ತರು ತಮ್ಮ ಪೋಟೊಗಳನ್ನು ಅಂಟಿಸಿ ಹಂಚಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವವರ ಸಂಘದ ಅಧ್ಯಕ್ಷ ಎಂ.ಬಿ.ಬನ್ನೂರ ಮಾತನಾಡಿ, ‘ಕಾರ್ಮಿಕರಿಗೆ ನೀಡುವ ಮದುವೆ ಸಹಾಯಧನವನ್ನು ಶೀಘ್ರವಾಗಿ ಒದಗಿಸುವುದರ ಜತೆಗೆ ಮೊತ್ತವನ್ನು ₹1 ಲಕ್ಷಕ್ಕೆ ಹೆಚ್ಚಿಸಬೇಕು. ಕಾರ್ಮಿಕರ ಸಹಜ ಮರಣದ ಪರಿಹಾರಧನದ ಮೊತ್ತವನ್ನು ₹2 ಲಕ್ಷಕ್ಕೆ ಹೆಚ್ಚಿಸಬೇಕು. ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ ನೀಡಬೇಕು’ ಎಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡರಾದ ಯೇಸುಜಾನ ಶೌರಿ, ಜೆ.ಐ.ಹಣಗಿ, ಅಲ್ಲಾಸಾಬ ನದಾಫ, ಮಾರುತಿ ಚಿಟಗಿ, ಪೀರು ರಾಥೋಡ್, ಮಂಜುನಾಥ ಚಲವಾದಿ, ಲಕ್ಷ್ಮಣ ವಡ್ಡರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.