ಗದಗ: ಎಸ್‌ಸಿ, ಎಸ್‌ಟಿ ನಕಲಿ ಜಾತಿ ಪ್ರಮಾಣಪತ್ರದ ವಿರುದ್ಧ ಹೋರಾಟ ನಡೆಸುತ್ತಿರುವ ಎಸ್‌ಸಿ, ಎಸ್‌ಟಿ ನಕಲಿ ಜಾತಿ ಪ್ರಮಾಣಪತ್ರ ತಡೆ ಸಮಿತಿಯ ಸದಸ್ಯರಿಗೆ ಭದ್ರತೆ ಒದಗಿಸುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕದ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಸಿದ್ದಮ್ಮನಹಳ್ಳಿ ಒತ್ತಾಯಿಸಿದರು.
ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿ ಮಾತನಾಡಿದ ಅವರು, ರಾಜ್ಯ ಘಟಕದ ಅಧ್ಯಕ್ಷ ಶ್ರವಣಕುಮಾರ ನಾಯಕ ಹಾಗೂ ಉತ್ತರ ಕರ್ನಾಟಕ ಮಹರ್ಷಿ ವಾಲ್ಮೀಕಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮರೆಪ್ಪ ನಾಯಕ ಮಗ್ದಂಪುರ ಅವರ ಆತ್ಮಸ್ಥೆರ್ಯ ಕುಗ್ಗಿಸಲು ಕೆಲವು ಸಂಘಟನೆಗಳು ಅವರನ್ನು ಗಡಿಪಾರು ಮಾಡಲು ಆಗ್ರಹಿಸಿವೆ. ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ವಾಲ್ಮೀಕಿ ಸಮಾಜ ತೀವ್ರವಾಗಿ ಖಂಡಿಸುತ್ತದೆ’ ಎಂದರು.
‘ಇಬ್ಬರು ಹೋರಾಟಗಾರರು ಸಾಕಷ್ಟು ತಿರುಗಾಡಿ ನಕಲಿ ಪ್ರಮಾಣಪತ್ರ ಪಡೆದಿರುವವರನ್ನು ಪತ್ತೆ ಹಚ್ಚಿದ್ದಾರೆ. ಇದನ್ನು ಸಹಿಸದ ಕೆಲವರು ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಶ್ರವಣಕುಮಾರ ಹಾಗೂ ಮರೆಪ್ಪ ಅವರಿಗೆ ಗೃಹ ಇಲಾಖೆಯಿಂದ ರಕ್ಷಣೆ ಒದಗಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.