ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಮಲ್ಲಪ್ಪ ಶಹನಾಯಿ ಮುನ್ನುಡಿ: ಪುಲಿಗೆರೆ ಉತ್ಸವಕ್ಕೆ ಚಾಲನೆ

ಆಲಾಪದ ಅಲೆಯಲ್ಲಿ ತೇಲಿದ ಶ್ರೋತೃಗಳು
Last Updated 5 ಜನವರಿ 2019, 17:19 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸಂಗೀತ, ನೃತ್ಯ, ಚಿತ್ರ ಸಂಭ್ರಮ ಸಾರುವ ಮೂರು ದಿನಗಳ ಪುಲಿಗೆರೆ ಉತ್ಸವಕ್ಕೆ ಶುಕ್ರವಾರ ನಸುಕಿನಲ್ಲಿ ಇಲ್ಲಿ ಸಾಂಪ್ರದಾಯಿಕ ಚಾಲನೆ ಸಿಕ್ಕಿತು.

ವಾಸ್ತುಶಿಲ್ಪ ವೈಭವದೊಂದಿಗೆ ಕಣ್ಮನ ಸೆಳೆಯುತ್ತಿರುವ ಸೋಮನಾಥೇಶ್ವರ ದೇವಸ್ಥಾನ ಆವರಣದಲ್ಲಿ ಇನ್ಫೋಸಿಸ್‍ನ ವ್ಯವಹಾರ ನಿರ್ವಹಣೆ (ಬಿಪಿಎಂ) ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಅನಂತ ರಾಧಾಕೃಷ್ಣನ್ ಅವರು ಸೋಮನಾಥೇಶ್ವರ ಪಲ್ಲಕ್ಕಿಗೆ ಪೂಜೆ ಸಲ್ಲಿಸುವ ಮೂಲಕ ಉತ್ಸವ ಉದ್ಘಾಟಿಸಿದರು.

ನಾಡಿನ ಹೆಸರಾಂತ ಶಹನಾಯಿ ವಾದಕ ಗಿರಿಮಲ್ಲಪ್ಪ ಭಜಂತ್ರಿ ಅವರು ಉದಯರಾಗದಲ್ಲಿ ಸಂಗೀತ ಸುಧೆ ಹರಿಸಿದರು. ‌ಬೆಳಿಗ್ಗೆ 5:30ರ ಸುಮಾರಿಗೆ ಚುಮು ಚಳಿಯಲ್ಲೇ ಮಫ್ಲರ್‌ ಸುತ್ತಿಕೊಂಡು ದೇವಸ್ಥಾನ ಆವರಣಕ್ಕೆ ಒಬ್ಬೊಬ್ಬರಾಗಿ ಬರತೊಡಗಿದ ಸ್ಥಳೀಯರು, ಸಂಗೀತಪ್ರೇಮಿಗಳು ಉದಯರಾಗ ಆರಂಭವಾಗುವ ಹೊತ್ತಿಗೆ ಕಿಕ್ಕಿರಿದು ಸೇರಿದ್ದರು.

ಮೋಡಿ ಮಾಡಿದ ಸಿತಾರ್ ವಾದನ
ಲಕ್ಷ್ಮೇಶ್ವರ: ಉತ್ಸವದ ಸಂಜೆಯ ಕಾರ್ಯಕ್ರಮದಲ್ಲಿ ಪಂ.ಛೋಟೆ ರೆಹಮತ್‌ಖಾನ್, ರಯೀಸ್‌ಖಾನ್, ಹಫೀಸ್‌ ಬಾಲೆಖಾನ್ ಇವರ ತ್ರಿವಳಿ ಸಿತಾರ್ ವಾದನ ಕಲಾರಸಿಕರಿಗೆ ರಸದೌತಣ ಉಣಬಡಿಸಿತು.

ರಾಗ ಯಮನ್ ಮತ್ತು ಖಮಾಜ್‍ನಲ್ಲಿ ಮೂವರೂ ಕಲಾವಿದರು ತಮ್ಮ ಕಲಾ ಪ್ರೌಢಿಮೆ ಮೆರೆದರು. ಒಬ್ಬರಿಗೊಬ್ಬರು ಸ್ಪರ್ಧೆಗೆ ಬಿದ್ದವರಂತೆ ಸಿತಾರ್ ತಂತಿಮೀಟಿರಾಗ ಹೊರಹೊಮ್ಮಿಸಿ ಸಂಗೀತ ರಸಿಕರು ಚಪ್ಪಾಳೆ ಗಿಟ್ಟಿಸಿಕೊಂಡರು.

ಕೊನೆಯಲ್ಲಿ ‘ವೈಷ್ಣವ ಜನತೋ’ ಭಜನೆ ಮುಡಿಬಂತು. ತಬಲಾ ಸಾಥ್ ನೀಡಿದ ನಿಸಾರ್ ಅಹಮ್ಮದ್ ಅವರ ಕೈಚಳಕ ಜನರನ್ನು ಮೋಡಿಗೊಳಿಸಿತು.

ಗಮನ ಸೆಳೆದ ಭರತ ನಾಟ್ಯ: ಉತ್ಸವದಲ್ಲಿ ಶುಕ್ರವಾರ ಪುಣೆಯ ಕಲಾಸಕ್ತ ನೃತ್ಯ ತಂಡದ ಕಲಾವಿದೆಯರು ಸಾದರಪಡಿಸಿ ಭರತನಾಟ್ಯ ನೋಡುಗರ ಮನ ಸೂರೆಗೊಂಡಿತು.

ಗಣಪತಿ ಆರಾಧನೆಯೊಂದಿಗೆ ನೃತ್ಯ ಆರಂಭಿಸಿದ ಕಲಾವಿದೆಯರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನೈಪುಣ್ಯ ಮೆರೆದರು. ನಂತರ ಶಿವಶಕ್ತಿ ಸ್ವರೂಪಿಣಿ ಅಂಬಾಭವಾನಿ ಅಷ್ಟಕದಲ್ಲಿ ದೇವಿಯ ವಿವಿಧ ಅವತಾರಗಳನ್ನು ಪ್ರದರ್ಶಿಸಿದರು.

ಶಿವ ತಾಂಡವ ಸ್ತೋತ್ರಕ್ಕೆ ನರ್ತಿಸಿದ ಕಲಾವಿದೆಯರು ವೇದಿಕೆ ಮೇಲೆ ನೃತ್ಯಲೋಕ ಸೃಷ್ಟಿಸಿದರು. ಮೀರಾಬಾಯಿ ರಚಿಸಿದ ‘ಕಮಲ ಲೋಚನ’ ಭಜನೆಯ ನೃತ್ಯ ಪ್ರಸ್ತುತಿಯೂ ಆಕರ್ಷಕವಾಗಿತ್ತು.

6:30ಕ್ಕೆ ಪ್ರಾರಂಭವಾದ ಗಿರಿಮಲ್ಲಪ್ಪ ಅವರ ಶಹನಾಯಿ ವಾದನ ಶ್ರಿಹರಿ ದಿಗ್ಗಾವಿ ಅವರ ತಬಲಾ ಸಾಥ್‌ ಮತ್ತು ನಾರಾಯಣ ಹಿರೇಕೊಳಚಿ ಅವರ ವಯಲಿನ್‌ ಸಾಥ್‌ನೊಂದಿಗೆ ಒಂದು ಗಂಟೆಗಳ ಕಾಲ ಮುಂದುವರಿದು ರಾಗಗಳ ಆಲಾಪದ ಅಲೆಯಲ್ಲಿ ಶ್ರೋತೃಗಳು ತೇಲಿದರು.ಆಗಷ್ಟೇ ಮಂಜಿನ ಪರದೆ ಸರಿದು ಹರಿಯುತ್ತಿರುವ ಬೆಳಕು, ಮೂಡಣದಲ್ಲಿ ಹೊಂಬಣ್ಣ ಚೆಲ್ಲುತ್ತಾ ಸೂರ್ಯ ಮೂಡುವ ಹೊತ್ತಿನಲ್ಲಿ ಶೆಹನಾಯಿ ಮಂಗಳ ವಾದ್ಯ ಶೋತೃಗಳನ್ನು ಸಂಗೀತದ ಮಾಂತ್ರಿಕ ಲೋಕಕ್ಕೆ ಕೊಂಡೊಯ್ಯಿತು.

ಮನಸೂರೆಗೊಂಡ ಗಾಯನ, ನೃತ್ಯ
ಲಕ್ಷ್ಮೇಶ್ವರ:
ಇಲ್ಲಿನ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಪುಲಿಗೆರೆ ಉತ್ಸವದ ಎರಡನೇ ದಿನ ಶನಿವಾರ ಸಂಜೆ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಶೋಭಾ ಹುಯಿಲಗೋಳ ಅವರು ಸಾದರಪಡಿಸಿದ ಹಿಂದೂಸ್ಥಾನಿ ಗಾಯನ ಗಮನ ಸೆಳೆಯಿತು.

ಹುಯಿಲಗೋಳ ನಾರಾಯಣರಾವ್ ಅವರ ಮೊಮ್ಮಗಳಾದ ಶೋಭಾ ಅವರು ಮೊದಲು ರಾಗ ಪುರಿಯಾ ಧರಿಯಲ್ಲಿ ಸಂಗೀತ ಕಚೇರಿ ಆರಂಭಿಸಿದರು. ಛೋಟಾ ಕ್ಯಾಲ್‍ನಲ್ಲಿ ‘ಪಾಯಲಾಯಾ ಝಲರಾಯೇ’ ಭಜನ್ ಹಾಡಿದರು.

ನಂತರ ಸುಗಮ ಸಂಗೀತದ ಮೂಲಕ ನೆರದಿದ್ದ ಸಂಗೀತರಸಿಕರನ್ನು ಮಂತ್ರಮುಗ್ಧಗೊಳಿಸಿದರು. ಪ್ರಥಮ ವಂದಾನ ಗೌರಿ ಸುತನಾ, ಶಿವ ಶಿವ ಮಾಡೊಮ್ಮೆ ಶಿವನಾಮ ಮನದಿ, ಏನೆಂದು ಬಣ್ಣಿಪಿ ನಾರಿಯಾ, ಗೋವಿಂದ ನಿನ್ನ ಆನಂದ, ಉರಿವ ಕೆಂಡದ ಮೇಲೆ ತೃಣವ ನಿರಿಸಿದೊಡೆ, ತುಂಬಿದ್ದು ತುಳುಕದು ನೋಡಾ ವಚನ ಸೇರಿದಂತೆ ರಾಮನಾಥಮ ಅಕ್ಕಮಹಾದೇವಿ, ಬಸವಣ್ಣ ಹಾಗೂ ಪುರಂದರ ದಾಸರ ಹಾಡುಗಳನ್ನು ಹಾಡಿ ರಂಜಿಸಿದರು.

ಇವರಿಗೆ ಕೃಷ್ಣಮೂರ್ತಿ ಕುಲಕರ್ಣಿ ಮತ್ತು ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT