ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರಿಗೆ ಬೆಳಕು ನೀಡಿದ ಶ್ರೀಗಳು

ವೀರೇಶ್ವರ ಪುಣ್ಯಾಶ್ರಮದ ಉಭಯ ಗುರುಗಳ ಸ್ಮರಣೋತ್ಸವದಲ್ಲಿ ಉಜ್ಜಯಿನಿ ಶ್ರೀ
Last Updated 15 ಜೂನ್ 2022, 6:39 IST
ಅಕ್ಷರ ಗಾತ್ರ

ಗದಗ: ‘ಬಹಳಷ್ಟು ಜನರು ಬೆಳಕನ್ನು ಪ್ರೀತಿಸುತ್ತಾರೆ. ಆದರೆ, ಉಭಯ ಶ್ರೀಗಳು ಕತ್ತಲನ್ನು ಪ್ರೀತಿ ಮಾಡಿ ಅಂಧ –ಅನಾಥ ಮಕ್ಕಳಿಗೆ ಬೆಳಕು ನೀಡಿದ್ದಾರೆ’ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಶಿವಯೋಗಿ ಪಂ. ಪಂಚಾಕ್ಷರ ಗವಾಯಿಗಳವರ 78ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 12ನೇ ಪುಣ್ಯಸ್ಮರಣೋತ್ಸವ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಜಗತ್ತಿನಲ್ಲಿ ತ್ಯಾಗಿ, ಯೋಗಿ ಹಾಗೂ ಭೋಗಿಗಳಿದ್ದರೂ ಜನರು ತ್ಯಾಗಿ, ಯೋಗಿಗಳನ್ನು ಮರೆತಿಲ್ಲ. ಭಗವಂತ ನೀಡಿದ ಕಷ್ಟಗಳಿಗೆ ಸಾಕಷ್ಟು ಜನರು ನರಳುತ್ತಾರೆ. ಉಭಯ ಗುರುಗಳು ತಮ್ಮ ಅಂಧತ್ವವನ್ನು ಮರೆತು ನಕಾರಾತ್ಮಕವಾದ ಜೀವನವನ್ನು ಸಕಾರಾತ್ಮಕವಾಗಿ ಬದಲಾಯಿಸಿದ ಧೀಮಂತರಾಗಿದ್ದಾರೆ’ ಎಂದು ಹೇಳಿದರು.

‘ಉಭಯ ಗುರುಗಳು ಅಂಗ ಪೂಜೆ ಮಾಡದೆ, ಲಿಂಗ, ಸಂಗೀತ, ಕಲೆಗಳನ್ನು ಪೂಜೆ ಮಾಡಿ ಅಂಧ-ಅನಾಥರಿಗೆ ದಾರಿ ತೋರಿಸುವ ಕೆಲಸ ಮಾಡಿದ್ದಾರೆ. ಬಹಳ ವರ್ಷಗಳ ನಂತರ ಪಂಚಾಕ್ಷರ ಗವಾಯಿಗಳವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ, ನೂತನವಾಗಿ ನಿರ್ಮಾಣಗೊಂಡ ರಥೋತ್ಸವ ಜರುಗುತ್ತಿರುವುದು ಸಂತಸ ತರಿಸಿದೆ. ಉಭಯ ಗುರುಗಳ ಕನಸನ್ನು ಕಲ್ಲಯ್ಯಜ್ಜನವರು ನನಸಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಸೂಡಿ ಜುಕ್ತಿಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಯಲಬುರ್ಗಾದ ಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀಗಳು, ಅಡ್ನೂರ ಬೃಹನ್ಮಠದ ಪಂಚಾಕ್ಷರ ಶಿವಾಚಾರ್ಯರು, ಮೈನಳ್ಳಿಯ ಸಿದ್ಧೇಶ್ವರ ಶಿವಾಚಾರ್ಯರು, ಸವಣೂರಿನ ಚನ್ನಬಸವ ಶ್ರೀಗಳು, ಶಿಗ್ಗಾವಿಯ ಸಂಗನಬಸವ ಶ್ರೀಗಳು, ಬೈಲಹೊಂಗಲದ ಡಾ. ಮಹಾಂತಯ್ಯಸ್ವಾಮಿಗಳು ಆರಾದ್ರಿಮಠ, ಅಡವೇಂದ್ರಮಠದ ಮಹೇಶ್ವರ ಸ್ವಾಮೀಜಿ ಸಮ್ಮುಖವಹಿಸಿದ್ದರು.

ಪಂ. ರಾಜಗುರು ಗುರುಸ್ವಾಮಿ ಕಲಕೇರಿ, ಚಂದ್ರು ಬಾಳೀಹಳ್ಳಿಮಠ, ವೀರೇಶ ಕೂಗು, ಡಾ. ಸಂಗಮೇಶ್ ಕೊಳ್ಳಿಯವರ, ನಿಂಗಪ್ಪ ಕೆಂಗಾರ, ವಸಂತಗೌಡ್ರು ಪೋಲಿಸ್‍ಪಾಟೀಲ, ಅನಿಲ್‌ ಅಬ್ಬಿಗೇರಿ, ಪ್ರಶಾಂತ ಬಿ. ಶಾಬಾದಿಮಠ, ಜಯಕುಮಾರ ಹಿರೇಮಠ, ವಿ. ಎಸ್. ಮಾಳೇಕೊಪ್ಪಮಠ, ಪಿ. ಸಿ. ಹಿರೇಮಠ, ರಾಜಣ್ಣ ಹಂಗರಿಗಿ, ನಾಗಪ್ಪ ಚಿನಗೂಡಿ, ಪ್ರಶಾಂತ ನಾಯ್ಕರ ಅವರನ್ನು ಸನ್ಮಾನಿಸಲಾಯಿತು.

ಮಠದ ವ್ಯವಸ್ಥಾಪಕ ಹೇಮರಾಜ ಶಾಸ್ತ್ರೀ ಹೆಡಿಗ್ಗೊಂಡ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ‘ಗದುಗಿನ ಗುರುವರ್ಯ’ ಹಾಗೂ ‘ಮತ್ತೊಮ್ಮೆ ಹುಟ್ಟಿ ಬಾ ಗುರು ಪುಟ್ಟರಾಜ’ ಸೀಡಿಗಳು ಲೋಕಾರ್ಪಣೆಗೊಂಡವು.

ಡಾ. ಪಂ.ಪುಟ್ಟರಾಜ ಕವಿಗವಾಯಿಗಳವರ ಸಂಸ್ಕೃತ ಪಾಠ ಶಾಲೆ ವಿದ್ಯಾರ್ಥಿಗಳು ವೇದಘೋಷ ಮೊಳಗಿಸಿದರು. ಮಲ್ಲಯ್ಯಸ್ವಾಮಿ ಹಿರೇಮಠ ಪ್ರಾರ್ಥಿಸಿದರು. ನಾಗಯ್ಯಶಾಸ್ತ್ರಿ ವಡಗೇರ ನಿರೂಪಿಸಿದರು. ವೀರೇಶ ಕೂಗು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT