ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಿಸದವರಿಗೆ ನೋಟಿಸ್ ಕೊಡಿ

ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಚಿವ ಆರ್‌.ಅಶೋಕ ಸೂಚನೆ
Last Updated 18 ಸೆಪ್ಟೆಂಬರ್ 2020, 6:21 IST
ಅಕ್ಷರ ಗಾತ್ರ

ಗದಗ: ‘ಗುಂಟೆವಾರು ಭೂಮಿ ಖರೀದಿಗೆ ಅವಕಾಶ ಕಲ್ಪಿಸಿದರೆ ನಗರ ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ನಿವೇಶನಗಳು ತಲೆಎತ್ತುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ 5 ಗುಂಟೆಗೂ ಅಧಿಕ ಭೂಮಿಗೆ ಮಾತ್ರ ನೋಂದಣಿಗೆ ಅವಕಾಶ ನೀಡಲಾಗುವುದು’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಾಕೃತಿಕ ವಿಕೋಪ ಹಾಗೂ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ಸಂತ್ರಸ್ತರು ನಿಗದಿತ ಸಮಯದೊಳಗೆ ಮನೆ ನಿರ್ಮಿಸುವಂತೆ ನೋಡಿಕೊಳ್ಳಬೇಕು. ಮನೆ ನಿರ್ಮಿಸದವರಿಗೆ ನೋಟಿಸ್ ಜಾರಿ ಮಾಡಿ ‘ಎ’ ಮತ್ತು ‘ಬಿ’ ಕೆಟಗೆರಿಯಿಂದ ‘ಸಿ’ ಕೆಟಗೆರಿಗೆ ತರಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಪ್ರತಿ ಗ್ರಾಮಕ್ಕೊಂದು ಸ್ಮಶಾನ ವ್ಯವಸ್ಥೆ ಮಾಡಬೇಕು. ನರೇಗಾ ಯೋಜನೆ ಅಡಿ ರಸ್ತೆ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

‘ಕೋವಿಡ್-19 ನಿಯಂತ್ರಿಸಲು ಹಣಕಾಸಿನ ಸಮಸ್ಯೆ ಇಲ್ಲ. ಆರೋಗ್ಯ ಸೌಲಭ್ಯದ ಉಪಕರಣಗಳ ಖರೀದಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ, ಖರೀದಿಯ ಬಗ್ಗೆ ಸರಿಯಾದ ಲೆಕ್ಕ ಇಡಬೇಕು’ ಎಂದು ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ‘ನರಗುಂದ ತಾಲ್ಲೂಕಿನ ಲಖಮಾಪುರ ಗ್ರಾಮ ಸ್ಥಳಾಂತರಕ್ಕೆ ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿದ್ದು, ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು’ ಎಂದರು.

‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಂಟೆವಾರು ಭೂಮಿ ಖರೀದಿಗೆ ಅವಕಾಶವಿದ್ದು, ಗದಗ ಜಿಲ್ಲೆಯಲ್ಲಿಯೂ ಇದೇ ರೀತಿ ಖರೀದಿಗೆ ಅನುಕೂಲ ಮಾಡಿಕೊಡಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಳೆದ ವರ್ಷ ₹560 ಕೋಟಿ ಬಿಡುಗಡೆಯಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ₹3 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು’ ಎಂದು ಅವರು ಸಚಿವರನ್ನು ಕೋರಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಾತನಾಡಿ, ‘ಗದಗ ತಾಲ್ಲೂಕಿನಲ್ಲೇ ಶೇ 50ರಷ್ಟು ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿವೆ. ತಾಲ್ಲೂಕು ಆಸ್ಪತ್ರೆಗಳಲ್ಲಿ 50 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್‌ ನಿರ್ವಹಣೆಗಾಗಿ ₹5 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ಉಪಾಧ್ಯಕ್ಷೆ ಶೋಭಾ ಮೇಟಿ, ಶಾಸಕ ರಾಮಣ್ಣ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಸಿಇಒ ಡಾ.ಆನಂದ್ ಕೆ., ಎಸ್‌ಪಿ ಯತೀಶ್ ಎನ್. ಇದ್ದರು.

‘ಮನೆ ಬಾಗಿಲಿಗೆ ಪಿಂಚಣಿ ಹಣ’

‘ರಾಜ್ಯದಾದ್ಯಂತ ಪಿಂಚಣಿದಾರರಿಗೆ ಪ್ರತಿವರ್ಷ ₹7 ಸಾವಿರ ಕೋಟಿ ಪಿಂಚಣಿ ನೀಡಲಾಗುತ್ತಿದೆ. ಇನ್ನು ಮುಂದೆ ಪಿಂಚಣಿ ಹಣವನ್ನು ಕೈಯಿಂದ ಕೈಗೆ ಕೊಡುವ ಬದಲು, ನೇರವಾಗಿ ಅರ್ಹ ಪಿಂಚಣಿದಾರರ ಬ್ಯಾಂಕ್ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.‌

‘ಪಿಂಚಣಿದಾರರ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡುವ ಮೂಲಕ ಬ್ಯಾಂಕ್ ವಿವರ ಪಡೆದುಕೊಳ್ಳಬೇಕು. ಹೀಗೆ ಮಾಡಿದರೆ ಅನರ್ಹ ಫಲಾನುಭವಿಗಳನ್ನು ಸುಲಭವಾಗಿ ಗುರುತಿಸಬಹುದು. ಇದರಿಂದ ಸರ್ಕಾರಕ್ಕೆ ಪ್ರತಿವರ್ಷ ₹600 ಕೋಟಿಯಷ್ಟು ಹಣ ಉಳಿತಾಯವಾಗಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT