ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಆರ್ಭಟ; ಮನೆಗಳಿಗೆ ನುಗ್ಗಿದ ನೀರು

ಉಕ್ಕಿ ಹರಿದ ಹಳ್ಳಗಳು; ದವಸ ಧಾನ್ಯಗಳನ್ನು ರಕ್ಷಿಸಲು ಹರಸಾಹಸ
Last Updated 20 ಸೆಪ್ಟೆಂಬರ್ 2019, 5:54 IST
ಅಕ್ಷರ ಗಾತ್ರ

ಹೊಳೆಆಲೂರು: ಸಮೀಪದ ಬೆನಹಾಳ ಗ್ರಾಮದಲ್ಲಿ ಧಾರಾಕಾರವಾಗಿ ಮಳೆಯಿಂದಾಗಿ ಚಿಗೆ ಹಳ್ಳ ಉಕ್ಕಿ ಹರಿದು, ಗ್ರಾಮದ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡವು. ಮನೆಯಲ್ಲಿದ್ದ ದವಸ ಧಾನ್ಯಗಳು ನೀರಿನಲ್ಲಿ ಸಿಕ್ಕು ನಾಶವಾದವು.

ಬೆನಹಾಳದಲ್ಲಿ ಚಿಗೆ ಹಳ್ಳದಲ್ಲಿ ಮುಳ್ಳಿನ ಕಂಟಿಗಳು ಬೆಳೆದು ನಿಂತಿವೆ. ಹೂಳು ತುಂಬಿದೆ. ಹೀಗಾಗಿ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲ. ಈ ನೀರು 2 ನೇ ವಾರ್ಡಿನ ಮನೆಗಳಿಗೆ ನುಗ್ಗಿದೆ. ತಡರಾತ್ರಿ ಮನೆಯೊಳಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ರಾತ್ರಿ ಪೂರ್ತಿ ನಿದ್ರೆಯಿಲ್ಲದೆ, ಕೆಸರು ನೀರು ಹೊರ ಹಾಕುವುದರಲ್ಲಿ ಕಳೆದರು.

ಗುರುವಾರ ಬೆಳಿಗ್ಗೆ ತಹಶೀಲ್ದಾರ್ ಶರಣಮ್ಮ ಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಗೆ ಬಿದ್ದಿರುವ ಹಾಗೂ ಹಾನಿಯಾಗಿರುವ ಮನೆಗಳ ವರದಿ ಸಲ್ಲಿಸುವಂತೆ ಗ್ರಾಮ ಲೆಕ್ಕಾಧಿಕಾರಿಗೆ ಸೂಚಿಸಿದರು. ಹಳ್ಳದ ಹೂಳು ತೆಗೆಯಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಮರಪ್ಪಗೌಡ ಗೌಡರ ಮನವಿ ಮಾಡಿದರು. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್‌ ಭರವಸೆ ನೀಡಿದರು.

ನುಗ್ಗಿದ ಬೆಣ್ಣಿಹಳ್ಳದ ನೀರು: ಹೊಳೆಆಲೂರ ಸಮೀಪದ ಅಸೂಟಿ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಬೆಣ್ಣಿಹಳ್ಳದ ನೀರು ಗ್ರಾಮ ಪಂಚಾಯ್ತಿ ಕಾರ್ಯಾಲಯದ ಸಮೀಪ ಇರುವ ಅನೇಕ ಮನೆಗಳಿಗೆ ನುಗ್ಗಿತು. ರಾತ್ರೋ ರಾತ್ರಿ ಮನೆಗೆ ನುಗ್ಗಿದ ನೀರು ನೋಡಿ ಕಂಗಾಲಾದ ಗ್ರಾಮಸ್ಥರು, ಆಹಾರ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ರಕ್ಷಣೆ ಮಾಡಲು ಹರಸಾಹಸ ಪಟ್ಟರು.

ಗುರುವಾರ ಸಚಿವ ಸಿ ಸಿ ಪಾಟೀಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಗ್ರಾಮಸ್ಥರಿಗೆ ಮಳೆಹಾನಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಸರ್ಕಾರ ನೆರೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ’ ಎಂದರು.

ಗಜೇಂದ್ರಗಡ: ಗಜೇಂದ್ರಗಡ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ರಾತ್ರಿ ಸಾಧಾರಣೆ ಸುರಿಯಿತು.ರಾತ್ರಿ 7.30ರ ಸುಮಾರಿಗೆ ಆರಂಭವಾಗಿ ಒಂದು ಗಂಟೆ ಮಳೆ ಆರ್ಭಟಿಸಿತು. ಮಳೆಯಿಲ್ಲದೇ ಬಾಡಿದ್ದ ಗೋವಿನಜೋಳ, ಸಜ್ಜೆ ಬೆಳೆಗಳಿಗೆ ಮಳೆಯಿಂದ ಮರು ಜೀವ ಬಂದಂತಾಗಿದ್ದು, ರೈತರು ಸಂತಸಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT