ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ | ಹದ ಮಳೆ: ರೈತರ ಮೊಗದಲ್ಲಿ ಮೂಡಿದ ಮಂದಹಾಸ

ಡಂಬಳ, ಲಕ್ಷ್ಮೇಶ್ವರ ಭಾಗದಲ್ಲಿ ಉತ್ತಮ ಮಳೆ: ರೋಣ, ನರಗುಂದ ಸಾಧಾರಣ
Published 21 ಮೇ 2024, 15:38 IST
Last Updated 21 ಮೇ 2024, 15:38 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ತಾಲ್ಲೂಕಿನ ಗೋವನಾಳ, ರಾಮಗೇರಿ, ಹುಲ್ಲೂರು, ದೊಡ್ಡೂರು, ಗುಲಗಂಜಿಕೊಪ್ಪ, ಅಡರಕಟ್ಟಿ, ಆದರಹಳ್ಳಿ, ಹರದಗಟ್ಟಿ, ಅಕ್ಕಿಗುಂದ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಸೋಮವಾರ ತಡರಾತ್ರಿ ಉತ್ತಮ ಮಳೆ ಸುರಿದಿದೆ.

ಮಧ್ಯ ರಾತ್ರಿ ಎರಡು ಗಂಟೆಗೆ ಜೋರಾಗಿ ಸುರಿದ ಮಳೆ ನಂತರ ಬೆಳೆತನಕ ಸಣ್ಣದಾಗಿ ಸುರಿಯಿತು. ಮಳೆಯಿಂದಾಗಿ ಕಾದು ಕಾವಲಿಯಾಗಿದ್ದ ಭೂಮಿ ಸ್ವಲ್ಪ ತಂಪಾಗಿದ್ದು ಸೆಕೆಯಿಂದ ಕಂಗೆಟ್ಟಿದ್ದ ಜನತೆಯಲ್ಲಿ ನೆಮ್ಮದಿ ಮೂಡಿದೆ.

ಜೋರಾದ ಮಳೆಗೆ ಹೊಲ ಗದ್ದೆಗಳಲ್ಲಿ ನೀರು ನಿಂತಿದ್ದು, ಕೆರೆಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕೆರೆ ಕಟ್ಟೆಗಳಿಗೆ ನೀರು ಬಂದಿರುವುದರಿಂದ ಪಶು, ಪ್ರಾಣಿ, ಪಕ್ಷಿಗಳಿಗೆ ಜೀವ ಜಲ ದೊರೆತಂತಾಗಿದೆ. ಮಳೆಗಾಗಿ ಕಾದಿದ್ದ ರೈತರು ಈಗಾಗಲೇ ಹೊಲ ಹಸನು ಮಾಡಿ ಬಿತ್ತನೆಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಧ್ಯ ಮಳೆ ಆಗಿರುವುದರಿಂದ ಹೆಸರು, ಗೋವಿನಜೋಳ, ಹೈಬ್ರೀಡ್ ಜೋಳದ ಬಿತ್ತನೆ ನಡೆಯಲಿದೆ.

ಉತ್ತಮ ಮಳೆ

ನರೇಗಲ್:‌ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ನಸುಕಿನಜಾವ ಉತ್ತಮ ಮಳೆಯಾಗಿದೆ.

ಎಂದಿನಂತೆ ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬಿಸಿಲು ಇತ್ತು. ಆದರೆ ಮಂಗಳವಾರ ಮಧ್ಯರಾತ್ರಿ ಗುಡುಗ, ಸಿಡಿಲು, ಗಾಳಿ ಸಹಿತ ಆರಂಭವಾದ ಮಳೆ ಎರಡು ತಾಸು ಜೋರಾಗಿ ಸುರಿದಿದೆ.

ನಂತರ ಬೆಳಿಗಿನವರೆಗೆ ಜಿಟಿಜಿಟಿಯಾಗಿ ಸುರಿದಿದೆ. ಮಳೆ ಆರಂಭವಾದ ನಂತರ ವಿದ್ಯುತ್‌ ಪೂರೈಕೆಯನ್ನು ನಿಲ್ಲಿಸಲಾಗಿತ್ತು.

ಭಾರಿ ಮಳೆ

ಡಂಬಳ: ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗುತ್ತಿದ್ದು, ರೈತ ಸಮುದಾಯ ಹರ್ಷಗೊಂಡಿದೆ. ರೈತರ ಜಮೀನುಗಳಲ್ಲಿನ ಬದು ಮತ್ತು ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹವಾಗಿದ್ದು ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಯ ವೇಗವನ್ನು ಪಡೆಯುವ ಸಾಧ್ಯತೆ ಇದೆ.

ಜಮೀನುಗಳಲ್ಲಿ ಬಿತ್ತನೆ ಮಾಡುವ ಉದ್ದೇಶದಿಂದ ರೈತರು ಭೂಮಿಯನ್ನು ಸಿದ್ದ ಮಾಡಿಕೊಳ್ಳುತ್ತಿದ್ದಾರೆ. ಸೋಮವಾರ ಮಧ್ಯರಾತ್ರಿ ಸುರಿದ ಜೋರಾದ ಮಳೆಗೆ ಮಳೆಮಾಪಕದಲ್ಲಿ ಮಳೆ ಪ್ರಮಾಣ 15.1 ಮೀಲಿ ಮೀಟರ್ ಮಳೆ ದಾಖಲಾಗಿದೆ.

ಡಂಬಳ ಹೋಬಳಿ ಕೇಂದ್ರಸ್ಥಾನ ಸೇರಿದಂತೆ ಹೋಬಳಿ ವ್ಯಾಪ್ತಿಯ ಬರದೂರ. ಮೇವುಂಡಿ, ಯಕಲಾಸಪುರ, ಹೈತಾಪುರ, ಪೇಠಾಲೂರ, ಹಳ್ಳಿಕೇರಿ, ಡೋಣಿ, ಅತ್ತಿಕಟ್ಟಿ, ವೆಂಕಟಾಪುರ, ಜಂತಲಿಶಿರೂರ, ಹಾರೂಗೇರಿ, ಶಿಂಗಟರಾಯನಕೇರಿ, ಕದಾಂಪುರ, ಚಿಕ್ಕವಡ್ಡಟ್ಟಿ ಸೇರಿದಂತೆ ಮುಂತಾದ ಗ್ರಾಮದಲ್ಲಿ ಉತ್ತಮವಾಗಿ ಮಳೆ ಆಗಿದೆ.

ರೈತರ ಬದುಗಳಲ್ಲಿ ಜಮೀನುಗಳ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರವಾಗಿದೆ. ಅಲ್ಲದೆ ಭೂಮಿ ಮಳೆ ಪರಿಣಾಮ ಹದವಾಗಿದ್ದರಿಂದ ತಂಪು ಆಗಿದ್ದು ಕೃಷಿ ಚಟುವಟಿಕೆಯನ್ನು ಮಾಡದಂತ ಸ್ಥಿತಿ ಇದೆ. ಮಂಗಳವಾರ ಸಹ ಮೋಡ ಕವಿದ ವಾತಾವರಣ ಮುಂದುವರಿದಿದೆ. ಬರುವ ದಿನಗಳಲ್ಲಿಯು ಮಳೆ ಉತ್ತಮವಾಗಿ ಆಗಲಿದೆ ಎನ್ನುವ ನಿರೀಕ್ಷೆಯನ್ನು ರೈತ ಸಮುದಾಯ ಹೊಂದಿದೆ.

ರಸ್ತೆ ಮೆಲೆ ಹರಿದ ಕೊಳಚೆ: ಜನರ ಆಕ್ರೋಶ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಬಜಾರದಲ್ಲಿನ ಚರಂಡಿಗಳು ತುಂಬಿ ಕೊಳಚೆ ನೀರು ಸಿಸಿ ರಸ್ತೆ ಮೇಲೆ ಹರಿದ ಘಟನೆ ಜರುಗಿದೆ. ಶಿಗ್ಲಿ ಕ್ರಾಸ್‍ನಿಂದ ಬಜಾರದಲ್ಲಿನ ಹಾವಳಿ ಹನುಮಪ್ಪನ ದೇವಸ್ಥಾನದವರೆಗೆ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಸುಸಜ್ಜಿತ ಚರಂಡಿ ಇಲ್ಲದಿರುವುದರಿಂದ ಚರಂಡಿ ತುಂಬಿ ಗಲೀಜು ರಸ್ತೆ ಮೇಲೆ ಹರಿದಿತ್ತು.

ಮಂಗಳವಾರ ಬೆಳಿಗ್ಗೆ ವ್ಯಾಪಾರಸ್ಥರು ನಿವಾಸಿಗಳು ಬಜಾರದಲ್ಲಿ ಬಂದಾಗ ಕೊಳಚೆ ಕಂಡು ರೋಸಿ ಹೋಗಿ ಪುರಸಭೆ ವಿರುದ್ಧ ಹರಿಹಾಯ್ದರು. ರಸ್ತೆ ನಿರ್ಮಿಸುವ ಮೊದಲು ಎರಡೂ ಕಡೆ ಸುಸಜ್ಜಿತ ಚರಂಡಿ ನಿರ್ಮಿಸಿದ್ದರೆ ಈ ಆವಾಂತರ ಸಂಭವಿಸುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವ್ಯಾಪಾರಸ್ಥರು ತಮ್ಮ ಅಂಗಡಿ ಎದುರು ಅರ್ಧ ಅಡಿಯಷ್ಟು ಕೊಳಚೆ ನಿಂತಿರುವುದನ್ನು ನೋಡುತ್ತಲೇ ಪುರಸಭೆಗೆ ಮಾಹಿತಿ ನೀಡಿದರು. ತಕ್ಷಣ ಹತ್ತಾರು ಪೌರ ಕಾರ್ಮಿಕರು ರೋಡಿಗೆ ಇಳಿದು ಕೊಳಚೆಯನ್ನು ಬಳಿದು ಸ್ವಚ್ಛಗೊಳಿಸಿದರು.

‘ಬಜಾರ ರಸ್ತೆಯನ್ನು ನಿರ್ಮಿಸುವ ಮೊದಲು ಚರಂಡಿ ನಿರ್ಮಿಸುವಂತೆ ಒತ್ತಾಯ ಮಾಡಿದ್ದೆವು. ಆದರೆ ಜನರ ಮಾತನ್ನು ಗಮನಕ್ಕೆ ತೆಗೆದುಕೊಳ್ಳದೆ ಪುರಸಭೆಯವರು ಚರಂಡಿ ನಿರ್ಮಿಸದೆ ರಸ್ತೆ ನಿರ್ಮಿಸಿದ್ದರಿಂದ ಈ ಅವಾಂತರ ಸಂಭವಿಸಿದೆ’ ಎಂದು ಪಟ್ಟಣದ ಯುವ ಮುಖಂಡ ನಾಗರಾಜ ಚಿಂಚಲಿ ಹೇಳಿದರು. ‘ಅಗತ್ಯ ಇರುವಲ್ಲಿ ಚರಂಡಿ ನಿರ್ಮಿಸಿ ಮತ್ತೆ ಬಜಾರದಲ್ಲಿ ಕೊಳಚೆ ನೀರು ಬಾರದಂತೆ ಪುರಸಭೆಯವರು ವ್ಯವಸ್ಥೆ ಮಾಡಬೇಕು’ ಎಂದು ತಾಲ್ಲೂಕು ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT