ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಲ್‌ : ಮಳೆಗಾಲದ ಅತಿಥಿ ‘ಅಣಬೆ’

Published 31 ಜುಲೈ 2023, 4:55 IST
Last Updated 31 ಜುಲೈ 2023, 4:55 IST
ಅಕ್ಷರ ಗಾತ್ರ

ಚಂದ್ರು ಎಂ. ರಾಥೋಡ್

ನರೇಗಲ್:‌ ಮಳೆಗಾಲವೆಂದರೆ ರೈತರಿಗೆ, ಕೃಷಿ ಕಾರ್ಮಿಕರಿಗೆ ಅದೊಂದು ಹಬ್ಬ, ಪ್ರಕೃತಿ ತನ್ನ ಸೊಬಗನ್ನು ಹೊರಸೂಸುವ ಸುಂದರ ಕ್ಷಣ. ಮುಂಗಾರು ಮಳೆಯ ಆರಂಭದಲ್ಲಿ ನರೇಗಲ್‌ ಭಾಗದ ಹಳ್ಳ, ಸರುವು ಹಾಗೂ ತೋಟದ ಬದುವುಗಳಲ್ಲಿ ಬಿಳಿ ಬಣ್ಣದ ಅಣಬೆಗಳು ತಲೆ ಎತ್ತಿ ನಿಂತಿವೆ.

ಇಲ್ಲಿನ ಗಡ್ಡಿ ಹಳ್ಳ, ಗೋಪಿ ಹಳ್ಳಿ, ಗಂಗೋಜಿ ಹಳ್ಳ, ಲಂಡಕೇನ ಹಳ್ಳ, ಅಬ್ಬಿಗೇರಿ, ಜಕ್ಕಲಿ, ಮಾರನಬಸಿ, ಬೂದಿಹಾಳ ಭಾಗದ ಹಳ್ಳಗಳ ಬದುವಿನಲ್ಲಿ, ಕೊರ್ರಮ್ಮ ಬಿಳ್ಳಿನಲ್ಲಿ ಸೇರಿದಂತೆ ವಿವಿಧೆಡೆ ಮಳೆಗಾಲದ ಅತಿಥಿಗಳು ಹೆಚ್ಚಾಗಿ ಬೆಳೆಯುತ್ತಿವೆ. ಒಂದೇ ದಿನದಲ್ಲಿ ಹುಟ್ಟಿ ಸಾಯುತ್ತವೆ ಹಾಗೂ ಹುಳ ಬೀಳುತ್ತವೆ ಎನ್ನುವ ಕಾರಣಕ್ಕಾಗಿ ಪಟ್ಟಣದಲ್ಲಿ ಮಾಹಿತಿ ಇರುವವರು ಸೂರ್ಯೋದಯಕ್ಕೂ ಮೊದಲು ಅಣಬೆ ಬೆಳೆಯುವ ಜಾಗದಲ್ಲಿ ಹಾಜರಿರುತ್ತಾರೆ. ಹೊಲದ ಬದುವಿನಲ್ಲಿ ಹುಡುಕಿ ಮನೆಗೆ ತೆಗೆದುಕೊಂಡು ಬರುತ್ತಿದ್ದಾರೆ.

ಅಣಬೆಯು ರುಚಿ ಹಾಗೂ ಪೌಷ್ಟಿಕಾಂಶಗಳನ್ನು ಹೇರಳವಾಗಿ ಹೊಂದಿರುವುದರಿಂದ ಕೆಲವರು ಮಾರಾಟಕ್ಕೂ ಮುಂದಾಗಿದ್ದಾರೆ. ಕೆ.ಜಿ.ಗೆ ₹800ಕ್ಕೂ ಹೆಚ್ಚೂ ದುಡ್ಡು ಕೊಟ್ಟು ಅಣಬೆಪ್ರಿಯರು ಖರೀದಿಸುತ್ತಿದ್ದಾರೆ. ಗ್ರಾಮದೊಳಗೆ ಪ್ರವೇಶಿಸುವ ಮೊದಲೇ ಮುಗಿ ಬೀಳುತ್ತಿದ್ದಾರೆ. ಆದ್ದರಿಂದ ಅಣಬೆ ಮಾರಾಟಗಾರು ವಾರದಿಂದ ಉತ್ತಮ ಆದಾಯ ಕಾಣುತ್ತಿದ್ದಾರೆ.

ಪ್ರಕೃತಿಯು ಕಾಲಕ್ಕನುಗುಣವಾಗಿ ಹಲವು ಆಹಾರ ಪದಾರ್ಥಗಳನ್ನು ನೀಡುತ್ತದೆ. ಅಂಥವುಗಳಲ್ಲಿ ಅಣಬೆಗಳು ಒಂದಾಗಿದ್ದು ಸರಿಯಾಗಿ ಸ್ವಚ್ಛಗೊಳಿಸಿ ತಿನ್ನಬೇಕು.
ಮಂಜುನಾಥ ನಾಯಕ, ಜೀವವೈದ್ಯ ಸಂಶೋಧಕ

ಮೊಗ್ಗಿನ ಅಣಬೆಗೆ ಬೇಡಿಕೆ ಹೆಚ್ಚಾಗಿದ್ದು, ಅರಳಿದ ಅಣಬೆಯು ಅರ್ಧ ಬೆಲೆಗೆ ಮಾರಾಟವಾಗುತ್ತಿದೆ. ಅಪರೂಪಕ್ಕೆ ಸಿಗುವ ಅಣಬೆಯನ್ನು ಒಬ್ಬ ಗ್ರಾಹಕ ಇಷ್ಟಪಟ್ಟು 2 ರಿಂದ 3 ಕೆ.ಜಿ.ವರೆಗೆ ಖರೀದಿಸುತ್ತಿದ್ದಾರೆ. ದೂರದ ಊರಿನ ನೆಂಟರಿಷ್ಟರಿಗೆ ಅಣಬೆ ತಲುಪಿಸುತ್ತಿರುವ ಕಾರಣ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಅಣಬೆ ಮಾರಾಟಗಾರ ಧನಶಪ್ಪ ರಾಥೋಡ್.

ಹೊಲ, ಗದ್ದೆ, ಹಳ್ಳ, ತೋಟದ ಅಂಚಿನ ಬದುವುಗಳ ಪೊದೆಗಳಲ್ಲಿ ಹುಟ್ಟುತ್ತಿದ್ದ ಅಣಬೆಗೆ ಕೆಲ ವರ್ಷದಿಂದ ಮೊದಲಿನ ಪ್ರಮಾಣದಷ್ಟು ಬೆಳೆಯುತ್ತಿಲ್ಲ. ರೈತರು ರಾಸಾಯನಿಕ ಸಿಂಪಡಿಸುತ್ತಿರುವ ಕಾರಣ ಸ್ವಾಭಾವಿಕವಾಗಿ ಹುಟ್ಟುತ್ತಿಲ್ಲ. ರಾಸಾಯನಿಕ ಸಿಂಪಡಣೆ ನಿಲ್ಲಬೇಕು ಎನ್ನುತ್ತಾರೆ ಕೋಟುಮಚಗಿಯ ಸಾವಯವ ಕೃಷಿಕ ವೀರೇಶ ನೇಗಲಿ.

ಅಣಬೆಗಳನ್ನು ಹುಡುಕುವಲ್ಲಿ ಹಾಗೂ ಬಳಸುವಲ್ಲಿ ಅನುಭವ ಪ್ರಮುಖ ಪಾತ್ರವಹಿಸುತ್ತದೆ. ಯಾವುದು ಉತ್ತಮ ಯಾವುದು ವಿಷಯುಕ್ತವಾಗಿದೆ ಎಂದು ತಿಳಿದು ಬಳಸುವುದು ಉಪಯುಕ್ತ.
ಪರಸಪ್ಪ ರಾಥೋಡ್‌ , ಅಣಬೆ ಮಾರಾಟಗಾರ

‘ಸ್ವಾಭಾವಿಕವಾಗಿ ಸಿಗುವ ಎಲ್ಲಾ ಅಣಬೆಗಳು ತಿನ್ನಲು ಯೋಗ್ಯವಾಗಿರುವುದಿಲ್ಲ. ಅದರಲ್ಲಿ ಕೆಲವು ವಿಷಕಾರಿಯಾಗಿರುತ್ತವೆ. ಅವುಗಳನ್ನು ತಿನ್ನುವ ಮೊದಲು ಮಣ್ಣು, ಹರಳು ಹೋಗಲು ನೀರಿನಲ್ಲಿ ತೊಳೆಯಬೇಕು. ಇಲ್ಲವಾದರೆ ರೋಗಗಳು ಬರುತ್ತವೆ’ ಎಂದು ಅಣಬೆ ಕುರಿತು ಮಾಹಿತಿಯುಳ್ಳ ಪರಸಪ್ಪ ರಾಥೋಡ್‌ ಹೇಳಿದರು.

ನರೇಗಲ್‌ ಹೋಬಳಿಯಲ್ಲಿ ತಿನ್ನಲು ಯೋಗ್ಯವಾದ ಅಣಬೆಗಳನ್ನು ಹುಡುಕಿಕೊಂಡು ಬಂದ ಪರಸಪ್ಪ ಹಾಗೂ ಧನಶಪ್ಪ
ನರೇಗಲ್‌ ಹೋಬಳಿಯಲ್ಲಿ ತಿನ್ನಲು ಯೋಗ್ಯವಾದ ಅಣಬೆಗಳನ್ನು ಹುಡುಕಿಕೊಂಡು ಬಂದ ಪರಸಪ್ಪ ಹಾಗೂ ಧನಶಪ್ಪ
ನರೇಗಲ್‌ ಹೋಬಳಿಯ ಗಡ್ಡಿಹಳ್ಳದಲ್ಲಿ ಅಣಬೆ ಕಿಳುತ್ತಿರುವ ಧನಶಪ್ಪ
ನರೇಗಲ್‌ ಹೋಬಳಿಯ ಗಡ್ಡಿಹಳ್ಳದಲ್ಲಿ ಅಣಬೆ ಕಿಳುತ್ತಿರುವ ಧನಶಪ್ಪ
ಗಡ್ಡಿಹಳ್ಳದ ಬದುವಿನಲ್ಲಿ ಬೆಳೆದು ನಿಂತಿರುವ ಅಣಬೆಗಳು
ಗಡ್ಡಿಹಳ್ಳದ ಬದುವಿನಲ್ಲಿ ಬೆಳೆದು ನಿಂತಿರುವ ಅಣಬೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT