ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಗೇರಿಯಲ್ಲಿ ಪ್ರೀತಿಯ ಇಫ್ತಾರ್

ಸರ್ವಜನಾಂಗದ ಶಾಂತಿಯ ತೋಟ
Last Updated 2 ಮೇ 2022, 10:50 IST
ಅಕ್ಷರ ಗಾತ್ರ

ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದಲ್ಲಿ ಹಲವು ದಶಕಗಳಿಂದ ಜಾತ್ರೆ, ಉರುಸ್‌, ಮೊಹರಂ ಸೇರಿದಂತೆ ಎಲ್ಲ ಹಬ್ಬಗಳನ್ನು ಹಿಂದೂ-ಮುಸ್ಲಿಮರು ಒಟ್ಟಾಗಿ ಭಾವೈಕ್ಯತೆಯಿಂದ ಆಚರಿಸುತ್ತಿದ್ದಾರೆ.

ಶನಿವಾರ ಗ್ರಾಮದ ವೀರಶೈವ ಲಿಂಗಾಯತ ಸಮಾಜದ ವತಿ ಯಿಂದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಸೌಹಾರ್ದಯುತ ಇಫ್ತಾರ್ ಕೂಟ ನಡೆಯಿತು.

ಗ್ರಾಮದಲ್ಲಿ ಪ್ರತಿವರ್ಷ ಶರಣ ಬಸವೇಶ್ವರ ಜಾತ್ರೆ, ಅನ್ನದಾನೇಶ್ವರ ಜಾತ್ರೆ, ಹೊನಕೇರಿ ಮಲ್ಲಯ್ಯನ ಜಾತ್ರೆ ತುಳಜಾ ಭವಾನಿ ಜಾತ್ರೆ, ಹುಸೇನ್ ಪೀರಾ ದರ್ಗಾದ ಉರುಸ್‌, ರಂಜಾನ್, ಮೊರಹಂ ಹಬ್ಬಗಳು ನಡೆಯುತ್ತವೆ. ಈ ಎಲ್ಲ ಹಬ್ಬ ಆಚರಣೆಗಳಲ್ಲಿ ಎಲ್ಲ ಜನಾಂಗದವರು ಒಟ್ಟಾಗಿ ಆಚರಿಸುವುದು ವಿಶೇಷ.

ಗ್ರಾಮದಲ್ಲಿ ರಂಜಾನ್ ತಿಂಗಳಲ್ಲಿ ಹಿಂದೂಗಳು ಮನೆಯಲ್ಲಿ ಸಿಹಿ ಮಾಡಿ ಬುತ್ತಿ ಕಟ್ಟಿ ಮಸೀದಿಗೆ ಕಳುಹಿಸುತ್ತಿದ್ದರು. ರಂಜಾನ್ ದಿನ ಮುಸ್ಲಿಮರು ಪಾಯಸ ಸೇರಿದಂತೆ ಸಿಹಿ ತಿನಿಸುಗಳನ್ನು ಹಿಂದೂ ಗಳ ಮನೆಗೆ ಕೊಟ್ಟು ಬರುವುದು ಹಿಂದಿ ನಿಂದಲೂ ನಡೆದುಕೊಂಡು ಬಂದಿದೆ.

‘ನಮ್ಮ ಊರಾಗ ಹಿಂದೂ, ಮುಸ್ಲಿಮರು ಅಂತ ಏನಿಲ್ರಿ. ಎಲ್ಲಾರೂ ರೂಢಿಯಲ್ಲಿ ಕಾಕಾ, ಚಿಗವ್ವ, ದೊಡ್ಡವ್ವ, ದೊಡ್ಡಪ್ಪ, ಮಾಮಾ ಅನಕೊಂತ ಒಗ್ಗಟ್ಟಿನಿಂದ ಅದಿವಿ. ಮೊದಲ ರಂಜಾನ್ ಹಬ್ಬಕ್ಕ ಹಿಂದೂಗಳು ಮನಿ, ಮನಿಯಿಂದ ಊಟದ ಬುತ್ತಿ ಕಟ್ಟಿ ಮಸೀದಿಗೆ ಕಳಸ್ತಿದ್ವಿ. ರಂಜಾನ್ ಹಬ್ಬದ ದಿನ ನಮ್ಮ ಮನಿಗೆ ಸಿಹಿ ಊಟ ಕಳಸ್ತಾರ. ಈ ಸಲ ಸಮಾಜದ ವತಿಯಿಂದ ಇಫ್ತಾರ್ ಕೂಟ ಏರ್ಪಡಿಸಿವಿ’ ಎನ್ನುತ್ತಾರೆ ಗ್ರಾಮದ ವೀರಶೈವ ಸಮಾಜದ ಅಧ್ಯಕ್ಷ ಶೇಖರಪ್ಪ ಎಗರಿ.

ಮಠಕ್ಕೆ ಮುಸ್ಲಿಮರು, ದರ್ಗಾಕ್ಕೆ ಹಿಂದೂಗಳು ಅಧ್ಯಕ್ಷರು

ಗೋಗೇರಿ ಗ್ರಾಮದಲ್ಲಿರುವ ಹಾಲಕೆರೆ ಅನ್ನದಾನೇಶ್ವರ ಶಾಖಾ ಮಠಕ್ಕೆ ಮುಸಲ್ಮಾನರು ಹಾಗೂ ಹುಸೇನ್ ಪೀರಾ ದರ್ಗಾಕ್ಕೆ ಹಿಂದೂಗಳು ಅಧ್ಯಕ್ಷರು ಈ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಈ ಹಿಂದೆ ಅನ್ನದಾನೇಶ್ವರ ಮಠಕ್ಕೆ ಹಾಲಕೇರಿ ಶ್ರೀಗಳು ಮೌಲಾಸಾಬ ಬಾಗವಾನ್ ಅವರನ್ನು ನೇಮಿಸಿ ಮಠದ ಜೀರ್ಣೋದ್ಧಾರದ ಜವಾಬ್ದಾರಿ ನೀಡಿದ್ದರು. ಅದರಂತೆ ಮಠ ಜೀರ್ಣೋದ್ಧಾರವಾಗಿ, ಸದ್ಯ ಮಠಕ್ಕೆ ಕೆ.ಕೆ.ಬಾಗವಾನ್ ಅಧ್ಯಕ್ಷರಾಗಿದ್ದಾರೆ. ಹುಸೇನ್ ಪೀರಾ ದರ್ಗಾಕ್ಕೆ ಹಿಂದೂಗಳು ಮೇಲುಸ್ತುವಾರಿ ವಹಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ.

ಗ್ರಾಮದಲ್ಲಿ ಜಾತಿ, ಧರ್ಮ ಅವರವರ ಮನೆಯಲ್ಲಿ ಆಚರಿಸುತ್ತಾರೆ. ಮನೆಯಿಂದ ಹೊರಗೆ ಬಂದರೆ ಎಲ್ಲರೂ ಒಂದಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುತ್ತೇವೆ. ಈ ಸಂಪ್ರದಾಯ ಹಿಂದಿನಿಂದಲೂ ಇದೆ
ರಾಜೇಸಾಬ ಇಮಾಮಸಾಬ ಬಾಗವಾನ, ಉರ್ದು ಶಾಲೆ ಮುಖ್ಯ ಶಿಕ್ಷಕರು, ಗೋಗೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT