ಗದಗ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಸಾರ್ವಜನಿಕ ಸಂಪತ್ತಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮಳೆಯ ರಭಸಕ್ಕೆ ಕೆಲವೆಡೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಸೇತುವೆಗಳು ಮುರಿದು ಬಿದ್ದಿವೆ. ವಿದ್ಯುತ್ ಕಂಬಗಳು ವಾಲಿಕೊಂಡು ಭೀತಿ ಸೃಷ್ಟಿಸುತ್ತಿವೆ. ರಸ್ತೆ ಸಂಪರ್ಕ ಜಾಲ ಕಡಿತಗೊಂಡಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆ ನಿಂತ ಮರುದಿನವೇ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಲಾಗುವುದು ಎಂಬ ಭರವಸೆಯನ್ನೇನೋ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ನೀಡಿದ್ದಾರೆ. ಆದರೆ, ಮಳೆ ಸದ್ಯಕ್ಕಂತೂ ಬಿಡುವು ನೀಡುವ ಸೂಚನೆ ಕೊಡುತ್ತಿಲ್ಲ. ಇದರಿಂದಾಗಿ, ಸಾರ್ವಜನಿಕರು ಇನ್ನೂ ಹಲವು ದಿನಗಳ ಕಾಲ ರಸ್ತೆ ವ್ಯವಸ್ಥೆ ಇಲ್ಲದೇ ಪರದಾಡಬೇಕಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಗದಗ ಬೆಳಧಡಿಗೆ ಸಂಪರ್ಕ ಕಲ್ಪಿಸುವ ನಾಗಾವಿ ಹತ್ತಿರದ ರಸ್ತೆಯಲ್ಲಿ ಸುಮಾರು 30 ಅಡಿಯಷ್ಟು ಕಂದಕ ಉಂಟಾಗಿದ್ದು ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿದೆ’ ಎಂದು ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ, ಸಾಮಾಜಿಕ ಹೋರಾ ಟಗಾರ ಬಸವಣ್ಣೆಯ್ಯ ಹಿರೇಮಠ ಅಲವತ್ತುಕೊಂಡಿದ್ದಾರೆ.

ಮಳೆಯಿಂದ ಆಗಿರುವ ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾಮಗಾರಿ ಆರಂಭಿಸಬೇಕಿದೆ. ಜನರ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಕೈಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

‘ಗದಗ ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ 58.87 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 202.87 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳು ಹಾಳಾಗಿವೆ. 82 ಸೇತುವೆಗಳಿಗೆ ಹಾನಿಯಾಗಿದೆ. ಇವುಗಳ ತಾತ್ಕಾಲಿಕ ದುರಸ್ತಿಗೆ ₹15.56 ಕೋಟಿ ಅವಶ್ಯಕತೆ ಇದೆ. ಶಾಶ್ವತ ದುರಸ್ತಿಗೆ ₹122.50 ಕೋಟಿ ಅಗತ್ಯವಿದೆ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎನ್.ಪಾಟೀಲ ತಿಳಿಸಿದ್ದಾರೆ.

ಭಾರಿ ಮಳೆಗೆ 70 ಕಿ.ಮೀ. ರಸ್ತೆ ಹಾಳು
ಲಕ್ಷ್ಮೇಶ್ವರ: ತಿಂಗಳಾನುಗಟ್ಟಲೆ ಸುರಿದ ಮಳೆ ತಾಲ್ಲೂಕಿನಲ್ಲಿ ಭಾರಿ ಅನಾಹುತ ಸೃಷ್ಟಿ ಮಾಡಿದೆ. ಮುಖ್ಯವಾಗಿ ರಸ್ತೆಗಳಿಗೆ ಮಳೆ ಮರಣ ಮೃದಂಗವನ್ನೇ ಬಾರಿಸಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಅಂದಾಜು 70 ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ಅದರಂತೆ 7 ಕಿ.ಮೀ.ನಷ್ಟು ಉದ್ದದ ರಾಜ್ಯ ಹೆದ್ದಾರಿಯೂ ಹದಗೆಟ್ಟು ಸಂಚಾರಕ್ಕೆ ಸಂಚಕಾರ ತಂದಿದೆ.

ಲಕ್ಷ್ಮೇಶ್ವರ ಸಮೀಪದ ಶೆಟ್ಟಿಕೇರಿ ಗ್ರಾಮದ ಹತ್ತಿರ ಒಂದು ಸೇತುವೆ ಮತ್ತು ಲಕ್ಷ್ಮೇಶ್ವರದ ಮಾನ್ವಿ ಪೆಟ್ರೋಲ್ ಬಂಕ್ ಹತ್ತಿರದ ಸೇತುವೆಗಳು ಕುಸಿದಿವೆ. ನೆಲೂಗಲ್ಲ-ಬೆಳ್ಳಟ್ಟಿ ಮಧ್ಯದ ಫೆವ್‍ಡಿಪ್ ಸಂಪೂರ್ಣ ಕಿತ್ತು ಹಾಳಾಗಿದೆ.

‘ರಸ್ತೆ ಹಾಳಾಗಿದ್ದರ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಅನುದಾನ ಬಂದ ತಕ್ಷಣ ಹಾಳಾದ ರಸ್ತೆಗಳನ್ನು ನಿರ್ಮಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಮನೋಹರ ರಾಠೋಡ ಮಾಹಿತಿ ನೀಡಿದರು.

‘ತಾಲ್ಲೂಕಿನಲ್ಲಿ ಒಟ್ಟು 12 ವಿದ್ಯುತ್ ಕಂಬಗಳು ಗಾಳಿ-ಮಳೆಗೆ ಮುರಿದು ಬಿದ್ದಿದ್ದು ಈಗಾಗಲೇ ಮುರಿದ ಕಂಬಗಳ ಜಾಗದಲ್ಲಿ ಹೊಸ ಕಂಬಗಳನ್ನು ಅಳವಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೆಸ್ಕಾಂನ ಎಇಇ ಎಂ.ಟಿ. ದೊಡ್ಡಮನಿ ತಿಳಿಸಿದರು.

ಅಪಾರ ಮಳೆ: ಆಸ್ತಿ ಪಾಸ್ತಿಗಳಿಗೆ ಹಾನಿ
ಮುಂಡರಗಿ: ಎರಡು ತಿಂಗಳ ಅವಧಿಯ ನಡುವೆ ಸುರಿದ ಭಾರಿ ಮಳೆಯಿಂದಾಗಿ ಖಾಸಗಿ ಹಾಗೂ ಸರ್ಕಾರಿ ಆಸ್ತಿ ಪಾಸ್ತಿಗಳಿಗೆ ತೀವ್ರ ಹಾನಿಯಾಗಿದೆ. ಪಟ್ಟಣವೂ ಸೇರಿದಂತೆ ಗ್ರಾಮೀಣ ಭಾಗದ ಮುಖ್ಯರಸ್ತೆ ಹಾಗೂ ಕಿರುರಸ್ತೆಗಳು ಸಂಪೂರ್ಣ ಹಾಳಾಗಿವೆ.

ತಾಲ್ಲೂಕಿನ ಜಾಲವಾಡಿಗಿ ಹಾಗೂ ಮುಂಡವಾಡ ಗ್ರಾಮಗಳ ಮಧ್ಯದಲ್ಲಿರುವ ಹಳ್ಳವು ತುಂಬಿ ಹರಿದಿದ್ದರಿಂದ ರಸ್ತೆ ಕೊಚ್ಚಿ ಹೋಗಿದೆ. ಇದರಿಂದಾಗಿ ನಾಲ್ಕು ದಿನಗಳಿಂದ ಬಸ್ ಸೇರಿದಂತೆ ಎಲ್ಲ ಕಿರು ಹಾಗೂ ಭಾರಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಗಳೆಲ್ಲವೂ ಕೆಸರುಗದ್ದೆಗಳಂತಾಗಿದ್ದು,ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ.

ಯಕ್ಲಾಸಪುರ ಗ್ರಾಮದ ಬಳಿ ಹರಿದಿರುವ ಕೋತಿಹಳ್ಳದ ಪ್ರವಾಹದಿಂದ ಯಕ್ಲಾಪುರ ಹಾಗೂ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದರಿಂದಾಗಿ ಅದೇ ರಸ್ತೆಯನ್ನು ನಂಬಿದ್ದ ವಿವಿಧ ಗ್ರಾಮಗಳ ಜನರು ಈಗ ಪರದಾಡುವಂತಾಗಿದೆ. ರಸ್ತೆಯ ಪಕ್ಕದಲ್ಲಿ ಹಾಯ್ದು ಹೋಗಿರುವ ಹಳ್ಳಕ್ಕೆ ತಡೆಗೋಡೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಹಾಯ್ದು ಹೋಗಿರುವ ಹಿರೇಹಳ್ಳಕ್ಕೆ ಹಲವು ಭಾಗಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಅಕ್ಕಪಕ್ಕದಲ್ಲಿದ್ದ ಜಮೀನುಗಳಲ್ಲಿ ಕೊರಕಲುಗಳು ಉಂಟಾಗಿವೆ. ಜಮೀನಿನ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಸರ್ಕಾರ ಎಲ್ಲ ಚೆಕ್‌ಡ್ಯಾಂಗಳಿಗೆ ತಡೆಗೋಡೆ ನಿರ್ಮಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ವಾಹನ ಸವಾರರು ಹೈರಾಣ
ಡಂಬಳ: ನಿರಂತರವಾಗಿ ಮಳೆ ಸುರಿದ ಪರಿಣಾಮ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತಗ್ಗು ಗುಂಡಿಗಳು ಬಿದ್ದಿವೆ. ಬಸ್, ಲಾರಿ, ಟ್ರ್ಯಾಕ್ಟರ್, ಕಾರು, ಬೈಕ್ ಸೇರಿದಂತೆ ಇತರೆ ವಾಹನ ಸವಾರರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ವಾಹನಗಳ ಬಿಡಿಭಾಗಗಳಿಗೆ ಹಾನಿಯಾಗಿ ವಾಹನಗಳು ಅಲ್ಲಲ್ಲ ಕೆಟ್ಟು ನಿಲ್ಲುತ್ತಿವೆ.

ಡಂಬಳ ಹೋಬಳಿ ವ್ಯಾಪ್ತಿಯ ಕೆಲವೊಂದು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು ಹೋಗಿವೆ. ಹಳ್ಳದಲ್ಲಿ ವೇಗವಾಗಿ ಹರಿಯುತ್ತಿರುವ ನೀರಿನ ರಭಸಕ್ಕೆ ಕೆಲವೊಂದು ವಿದ್ಯುತ್ ನಿರ್ವಾಹಕ ಘಟಕಗಳು ನೀರಿನಲ್ಲೇ ನಿಂತಿವೆ. ಮಳೆಯಿಂದ ಸಾಕಷ್ಟು ಹಾನಿ ಯಾಗಿದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಡಂಬಳ ಗ್ರಾಮದ ಮಹೇಶ ಗುಡ್ಡದ ಹಾಗೂ ವಿರುಪಾಕ್ಷಪ್ಪ ಯಲಿಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಚ್ಚಿ ಹೋದ ರಸ್ತೆ
ರೋಣ: ದೊಡ್ಡ ಪ್ರಮಾಣದ ಮಳೆ ಸುರಿಗಾಗಲೆಲ್ಲವೂ ಹಿರೇಹಳ್ಳ ಉಕ್ಕಿ ಹರಿದು ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಹಾಗೂ ರಸ್ತೆ ಕೊಚ್ಚಿ ಹೋಗುತ್ತದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಎರಡು ಕಿ.ಮೀ. ನಡದೇ ಪ್ರಯಾಣ ಬೆಳೆಸುವ ಪರಿಸ್ಥಿತಿ ತಲೆದೋರುತ್ತದೆ.

ತಾಲ್ಲೂಕಿನ ಹುಲ್ಲೂರ ಮುಖ್ಯ ರಸ್ತೆಯ ಆವಸ್ಥೆಗೆ ಗ್ರಾಮಸ್ಥರ ನಿಲ್ದಾಣ, ಮುದೇನಗುಡಿಯೇ ಆಗಿಬಿಟ್ಟಿದೆ. ಇದು ಒಂದು ದಿನದ ಮಾತಲ್ಲ. ಹಳ್ಳದ ತುಂಬಾ ಆವರಿಸಿಕೊಂಡ ಸರ್ಕಾರಿ ಜಾಲಿ ತೆರವುಗೊಳಿಸದೇ ಇರುವುದು ಈ ಎರಡು ದಂಡೆಯ ರೈತರು ಹಾಗೂ ಗ್ರಾಮಸ್ಥರು ಕೆಟ್ಟ ಪರಿಸ್ಥಿತಿ ಅನುಭವಿಸುವಂತಾಗಿದೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಳೆಯಿಂದ ಹಾಳಾಗಿರುವ ರಸ್ತೆ ದುರಸ್ಥಿಗೆ ಕ್ರಮವಹಿಸಬೇಕು.ಇಲ್ಲವಾದರೆ ನಾವು ಸೋಮವಾರ ಹಳ್ಳಕ್ಕೆ ಹೊಂದಿಕೊಂಡಂತೆ ಜಮೀನು ಇರುವ ರೈತರು ಹಾಗೂ ಗ್ರಾಮಸ್ಥರು ಸೇರಿ ತಹಶೀಲ್ದಾರ್ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ ಗಟ್ಟಿ ಎಚ್ಚರಿಸಿದ್ದಾರೆ.

ಕೊಚ್ಚಿಹೋದ ರಸ್ತೆಗೆ ಪ್ರತಿ ಬಾರಿ ಲಕ್ಷ ಲಕ್ಷ ಹಣ ವ್ಯಯ ಮಾಡುವ ಸರ್ಕಾರ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಿದರೆ ಇಲ್ಲಿ ಹಾನಿ ತಪ್ಪಿಸಬಹುದು. ಹಳ್ಳದ ತುಂಬೆಲ್ಲಾ ಬೆಳೆದ ಸರ್ಕಾರಿ ಜಾಲಿ ತೆರವು ಗೊಳಿಸುವುದು ಮುಖ್ಯವಾಗಿ ಆಗಬೇಕಿದೆ’ ಎಂದು ಸ್ಥಳೀಯ ನಿವಾಸಿಗಳಾದ ಶಿವಪ್ಪ ಕೆಂಧೂರು,ರವಿ ಸೋಮನಕಟ್ಟಿ ಭೀಮಪ್ಪ ಪೂಜಾರಿ ಆಗ್ರಹಿಸಿದ್ದಾರೆ.

ವರುಣಾರ್ಭಟಕ್ಕೆ ಅಪಾರ ಹಾನಿ
ಶಿರಹಟ್ಟಿ: ತಾಲ್ಲೂಕಿನಾದ್ಯಂತ ಬೆಂಬಿಡದೆ ಸುರಿದ ಮಳೆಯಿಂದ ಬೆಳೆಹಾನಿ, ಜಾನುವಾರುಗಳ ಸಾವು ನೋವು ಹಾಗೂ ಸಾರ್ವಜನಿಕರ ಅಸ್ತಿಗೆ ಸಾಕಷ್ಟು ಹಾನಿಯಾಗಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ 60 ರಿಂದ 75 ಕಿ.ಮೀ. ರಸ್ತೆ ಹಾಗೂ ಪಿಆರ್‌ಇಡಿ 90 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ಜತೆಗೆ 40 ಸೇತುವೆಗಳು ಹಾಳಾಗಿವೆ.

ಸದ್ಯ ತಾಲ್ಲೂಕಿನಾದ್ಯಂತ ಮಳೆ ಕಡಿಮೆಯಾಗಿ ಹಳ್ಳ ಕೊಳ್ಳದಲ್ಲಿನ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಅತಿವೃಷ್ಟಿಯಿಂದ ಹಾನಿಯಾದ ರಸ್ತೆ ದುರಸ್ತಿ ಕೆಲಸಗಳು ಶೀಘ್ರವಾಗಿ ಆಗಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ರಸ್ತೆ ಜಾಲಕ್ಕೆ ಹಾನಿ
ಹೊಳೆಆಲೂರ: ಸತತ ಮಳೆಯಿಂದಾಗಿ ಹೊಳೆಆಲೂರ ಭಾಗದಲ್ಲಿ ಮಲಪ್ರಭೆ, ಬೆಣ್ಣೆಹಳ್ಳ ಮತ್ತು ಬೆನಹಾಳ ಬಳಿಯ ಹಳ್ಳಗಳು ಉಕ್ಕಿ ಹರಿದಿದ್ದು ಅಪಾರ ಹಾನಿ ಸಂಭವಿಸಿದೆ.

ಹೊಳೆಆಲೂರ ಭಾಗದ ಪ್ರಮುಖ ಹಳ್ಳಿಗಳ ರಸ್ತೆ ಸಂಪರ್ಕ ಜಾಲ ಹಾಳಾಗಿದ್ದು, ಅಧಿಕಾರಿಗಳು ಇನ್ನಷ್ಟೇ ಹಾನಿಯ ಪ್ರಮಾಣ ಅಂದಾಜಿಸಬೇಕಿದೆ.

ಹಳ್ಳಗಳಲ್ಲಿ ಉಂಟಾದ ಪ್ರವಾಹದಿಂದ ಹಲವು ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮಳೆ ನಿರಂತರವಾಗಿ ಮುಂದುವರಿದಿರುವ ಕಾರಣ ದುರಸ್ತಿ ಕಾರ್ಯಕ್ಕೂ ಹಿನ್ನಡೆಯಾಗಿದೆ.

ಹಾನಿಗೊಳಗಾದ ಪ್ರದೇಶಗಳಿಗೆ ನರಗುಂದ ಮತಕ್ಷೇತ್ರದ ಶಾಸಕ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಭೇಟಿ ನೀಡಿದ್ದು ಹಾನಿ ಕುರಿತು ಪರಿಶೀಲಿಸಿ ಅಧಿಕಾರಿಗಳಿಗೆ ವರದಿ ನೀಡುವಂತೆ ತಾಕೀತು ಮಾಡಿದ್ದಾರೆ.

ಭಾರಿ ಮಳೆಯಿಂದಾಗಿ ಜಾಲವಾಡಿಗೆ, ಮುಂಡವಾಡ, ಬಿದರಳ್ಳಿ, ವಿಠಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಅವುಗಳನ್ನು ದುರಸ್ತಿಗೊಳಿಸಬೇಕು.
-ಯಲ್ಲಪ್ಪ ಮಡಿವಾಳರ, ಜಾಲವಾಡಿಗೆ ಗ್ರಾಮಸ್ಥ

ನಾಗಾವಿ ಭಾಗದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಿ ಇಡೀ ಗ್ರಾಮ ಜಲಾವೃತಗೊಂಡಿದ್ದು, ದುರಸ್ತಿಗಾಗಿ ಸರ್ಕಾರ ಗ್ರಾಮ ಪಂಚಾಯ್ತಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು.
-ಬಸವಣ್ಣೆಯ್ಯ ಹಿರೇಮಠ, ಸಾಮಾಜಿಕ ಹೋರಾಟಗಾರ

ನಿರ್ವಹಣೆ: ಕೆ.ಎಂ.ಸತೀಶ್ ಬೆಳ್ಳಕ್ಕಿ

ಪ್ರಜಾವಾಣಿ ತಂಡ: ಉಮೇಶ ಬಸನಗೌಡರ, ನಾಗರಾಜ ಹಣಗಿ, ಲಕ್ಷ್ಮಣ ದೊಡ್ಡಮನಿ, ಪ್ರಕಾಶ್ ಗುದ್ನೆಪ್ಪನವರ, ನಾಗರಾಜ ಹಮ್ಮಿಗಿ, ಕಾಶೀನಾಥ ಬಿಳಿಮಗ್ಗದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.