ಶನಿವಾರ, ಡಿಸೆಂಬರ್ 5, 2020
25 °C
ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ರಮ್ಯ ಪರಿಸರದಲ್ಲಿ ನಿರ್ಮಾಣ

ಗದುಗಿನಲ್ಲೊಂದು ಸಾಬರಮತಿ ಆಶ್ರಮ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ಕಪ್ಪತ್ತಗುಡ್ಡದ (ನಾಗಾವಿ ಗುಡ್ಡ) ಸೆರಗಿನಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ರಮ್ಯ ಪರಿಸರದಲ್ಲಿ ಸಾಬರಮತಿ ಆಶ್ರಮ ನಿರ್ಮಾಣವಾಗಿದ್ದು, ಗಾಂಧೀಜಿ ಗದುಗಿಗೆ ಭೇಟಿ ನೀಡಿ 100 ವರ್ಷಗಳು ತುಂಬುತ್ತಿರುವ ಐತಿಹಾಸಿಕ ದಿನದಂದು (ನ.11) ಲೋಕಾರ್ಪಣೆಗೆ ಸಜ್ಜಾಗಿದೆ.

ಇಲ್ಲಿಯ ಪಂಚಾಯತ್ ರಾಜ್‌ ವಿಶ್ವವಿದ್ಯಾಲಯದಲ್ಲಿ ಗಾಂಧಿಯವರ ವಿಚಾರಧಾರೆಗಳಿಗೆ ಮರುಜೀವ ನೀಡುವ ಪ್ರಯತ್ನ ಸಾಬರಮತಿ ಆಶ್ರಮದ ಪ್ರತಿಕೃತಿ ನಿರ್ಮಾಣದ ಮೂಲಕ ನಡೆದಿದೆ.

‘ಗಾಂಧೀಜಿ ಅವರ ವಿಚಾರಧಾರೆಗಳು, ಕಲ್ಪನೆಗಳನ್ನು ಜನರಿಗೆ ಮುಟ್ಟಿಸಲು ಸಾಂಕೇತಿಕವಾಗಿ ಏನಾದರೂ ಮಾಡಬೇಕು ಅಂತ ಅನ್ನಿಸಿತು. ಆಗ ನೆನಪಿಗೆ ಬಂದಿದ್ದೇ ಗಾಂಧಿ ಅವರಿಗೆ ಪ್ರೇರಣೆಯ ತಾಣವಾಗಿದ್ದ ಸಾಬರಮತಿ ಆಶ್ರಮ. ಇಲ್ಲಿನ ಸಾಬರಮತಿ ಆಶ್ರಮ ಕೂಡ ವಿವಿಧ ನೆಲೆಗಟ್ಟಿನಲ್ಲಿ ಇಂದಿನ ಯುವಜನತೆಗೆ ಪ್ರೇರಣೆ ತುಂಬಲಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ಹೇಳಿದರು.

‘2020ರ ನವೆಂಬರ್‌ 11ಕ್ಕೆ ಗಾಂಧೀಜಿ ಅವರು ಗದುಗಿಗೆ ಭೇಟಿ ನೀಡಿ 100 ವರ್ಷಗಳು ತುಂಬಲಿವೆ. ಅಂದಿನ ದಿನವೇ ಆಶ್ರಮ ಲೋಕಾರ್ಪಣೆ ಮಾಡುತ್ತಿದ್ದೇವೆ. ರಾಷ್ಟ್ರೀಯ, ಸಾಮಾಜಿಕ, ಆರ್ಥಿಕ ಮತ್ತು ಕೌಶಲಾಭಿವೃದ್ಧಿ ಚಟುವಟಿಕೆಗಳನ್ನು ನಡೆಸುವ ಯೋಚನೆ ಇದೆ’ ಎಂದರು.

ಸಾಬರಮತಿ ಆಶ್ರಮದಲ್ಲಿ ಗಾಂಧಿ ಅವರ ಜನಪ್ರಿಯ ನುಡಿಗಳು ಮತ್ತು ಚಿತ್ರಗಳ ಮೂಲಕ ಅವರ ವಿಚಾರಧಾರೆಗಳನ್ನು ಜನರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.


ಅಂತಿಮ ಸಿದ್ಧತೆಯಲ್ಲಿ ತೊಡಗಿರುವ ಕಲಾವಿದರು

‘ಸಾಬರಮತಿ ಆಶ್ರಮ ಶ್ರೀಸಾಮಾನ್ಯರ ಆಶ್ರಮ ಎಂದೆನಿಸಲಿದೆ. ಜತೆಗೆ ಸುತ್ತಮುತ್ತಲಿನ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಮಾಹಿತಿಯ ಖಜಾನೆ ಆಗಲಿದೆ. ಪ್ರವಾಸಿಗರ ಪಾಲಿಗೆ ಗಾಂಧಿ ನೆನಪುಗಳನ್ನು ಕಟ್ಟಿಕೊಡುವ ಪ್ರಶಾಂತ ತಾಣವಾಗಲಿದೆ’ ಎಂದೂ ಪ್ರೊ.ಚಟಪಲ್ಲಿ ಅಭಿಮಾನದಿಂದ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.