ಗುರುವಾರ , ಸೆಪ್ಟೆಂಬರ್ 23, 2021
24 °C
ಮಕ್ಕಳ ಆರೋಗ್ಯ ಮಾಹಿತಿಗೆ ವಾಟ್ಸ್ಆ್ಯಪ್‌ ಗ್ರೂಪ್‌ ರಚನೆ

ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ ಶೂನ್ಯದತ್ತ..

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದ 243 ಮಕ್ಕಳ ಆರೋಗ್ಯ ಕಾಳಜಿಗಾಗಿ ಜಿಲ್ಲಾಡಳಿತ ಆಯೋಜಿಸಿದ್ದ ಸುಧಾರಣಾ ಶಿಬಿರಗಳು ಮುಕ್ತಾಯಗೊಂಡಿದ್ದು, ಮುಂದಿನ ದಿನಗಳಲ್ಲಿ ಆ ಮಕ್ಕಳ ಪ್ರತಿದಿನದ ಆರೋಗ್ಯ ಮಾಹಿತಿ ಪಡೆದುಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಗಿದೆ.

ಸುಧಾರಣಾ ಶಿಬಿರದಲ್ಲಿ ಪಾಲ್ಗೊಂಡ ನಂತರ ಮಕ್ಕಳ ತೂಕ ಮತ್ತು ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಆ ಮಕ್ಕಳ ಆರೋಗ್ಯ ಕಾಳಜಿಯ ಮುಂದಿನ ಹೆಜ್ಜೆಯಾಗಿ ‘ಸ್ಯಾಮ್‌’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಗಿದ್ದು, ಇದರಲ್ಲಿ ಮಕ್ಕಳ ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರು, ಸಿಡಿಪಿಒ, ಕಾರ್ಯಕ್ರಮ ಅಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಇದ್ದಾರೆ.

‘ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ 14 ದಿನಗಳ ಕಾಲ ನಡೆದ ಸುಧಾರಣಾ ಶಿಬಿರದಲ್ಲಿ ಪಾಲ್ಗೊಂಡಿದ್ದ ತೀವ್ರ ಅಪೌಷ್ಟಿಕ ಮಕ್ಕಳ ಆರೋಗ್ಯ ಗಣನೀಯವಾಗಿ ಸುಧಾರಿಸಿದೆ. ಶಿಬಿರ ಮುಗಿಸಿ ಮನೆಗೆ ತೆರಳಿದ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಲು ತಾಲ್ಲೂಕುವಾರು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಗಿದೆ. ಮಗು ವಾಸಿಸುವ ಸ್ಥಳದ ಅಂಗನವಾಡಿ ಕಾರ್ಯಕರ್ತೆಯರು ಮಗುವಿನ ತೂಕ, ಎತ್ತರ ಹಾಗೂ ಆರೋಗ್ಯದ ಬಗ್ಗೆ ಈ ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ. ಮಗುವಿಗೆ ಅನಾರೋಗ್ಯ ಕಂಡುಬಂದಲ್ಲಿ ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ನೀಡಲು ಕ್ರಮವಹಿಸುತ್ತಾರೆ’ ಎಂದು ಗದಗ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್‌ ಎ. ತಿಳಿಸಿದ್ದಾರೆ.

‌ಜಿಲ್ಲೆಯಲ್ಲಿ ಸಾಧಾರಣ ಅ‍ಪೌಷ್ಟಿಕತೆಯಿಂದ ಬಳಲುತ್ತಿರುವ 14 ಸಾವಿರ ಮಕ್ಕಳಿದ್ದು, ಮುಂದಿನ ಹಂತದಲ್ಲಿ ಈ ಮಕ್ಕಳ ಆರೋಗ್ಯ ಸುಧಾರಣೆಗೂ ಜಿಲ್ಲಾಡಳಿತ ಯೋಜನೆ ರೂಪಿಸಲಿದೆ.

‘ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಿದೆ. ಹಾಗಾಗಿ, ಅವರಿಗೆ ಶಿಬಿರಗಳನ್ನು ನಡೆಸುವುದು ಕಷ್ಟಸಾಧ್ಯ. ಆದರೆ, ಆ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಉತ್ತಮ ಆಹಾರ ಪದ್ಧತಿ ತಿಳಿಸಿಕೊಡಲು ನೆರವಾಗುವಂತೆ ಅಂಗನವಾಡಿ ಮೇಲ್ವಿಚಾರಕಿಯರಿಗೆ ಮೊದಲು ತರಬೇತಿ ನೀಡಿ, ಅವರಿಂದ ಕಾರ್ಯಕರ್ತೆಯರಿಗೆ ತರಬೇತಿ ಕೊಡಿಸಿ ಮಕ್ಕಳ ಪೋಷಕರಿಗೆ ತಿಳಿವಳಿಕೆ ಮೂಡಿಸುವ ಉದ್ದೇಶ ಹೊಂದಲಾಗಿದೆ’ ಎಂದು ಅವರು ಹೇಳಿದರು.

ಶಿಬಿರಕ್ಕೆ ದಾಖಲಾದ ಮಕ್ಕಳಲ್ಲಿ 180 ಮಕ್ಕಳು ಉತ್ತಮ ತೂಕ ಗಳಿಸಿದ್ದಾರೆ. 47 ಮಕ್ಕಳು ಸಾಧಾರಣಕ್ಕೆ ಬಂದಿದ್ದಾರೆ. ತೀವ್ರ ಅಪೌಷ್ಟಿಕ ಮಕ್ಕಳ ಮೇಲೆ ನಿಗಾ ವಹಿಸಲಾಗುವುದು

ಉಸ್ಮಾನ್‌ ಎ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.