ಗುರುವಾರ , ಮಾರ್ಚ್ 4, 2021
29 °C
ಗದುಗಿನ ಬಾಲವಿನಾಯಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ವಿಶೇಷ

ಮೂರೂವರೆ ಗಂಟೆ ವಿದ್ಯಾರ್ಥಿಗಳೇ ಶಿಕ್ಷಕರಾದರು..!

ಹುಚ್ಚೇಶ್ವರ ಅಣ್ಣಿಗೇರಿ Updated:

ಅಕ್ಷರ ಗಾತ್ರ : | |

Deccan Herald

ಗದಗ: ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಅಂದರೆ ಮೂರೂವರೆ ಗಂಟೆಗಳ ಕಾಲ ಈ ಶಾಲೆಯಲ್ಲಿ ವಿದ್ಯಾರ್ಥಿಗಳೇ ಶಿಕ್ಷಕರಾದರು. ಶಾಲೆಯ ಪ್ರಾಚಾರ್ಯ, ಉಪ ಪ್ರಾಚಾರ್ಯ, ಸಹ ಶಿಕ್ಷಕರ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಅಲ್ಪಾವಧಿಯಲ್ಲೇ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಿಸಲು ಮತ್ತು ಶಾಲೆಯಲ್ಲಿ ಶಿಸ್ತಿನ ವಾತಾವರಣ ಮೂಡಿಸಲು ಪ್ರಯತ್ನಿಸಿದರು. ಶಾಲೆಯ ಶಿಕ್ಷಕರು ಸಹ ತರಗತಿಯಲ್ಲಿ ಹಿಂದಿನ ಸಾಲಿನ ಬೆಂಚಿನಲ್ಲಿ ಕುಳಿತು ಮಕ್ಕಳ ಪಾಠ ಆಲಿಸಿದರು.

ಗದುಗಿನ ಸಂಭಾಪುರ ರಸ್ತೆಯ ಬಾಲವಿನಾಯಕ ಶಾಲೆ, ಶಿಕ್ಷಕರ ದಿನಾಚರಣೆ ಪ್ರಯುಕ್ತ ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು, 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.

‘ಶಿಕ್ಷಕ ಹುದ್ದೆಯ ಮಹತ್ವದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು, ಮತ್ತು ಮಕ್ಕಳಲ್ಲಿನ ವೇದಿಕೆ ಭಯ ಹೋಗಲಾಡಿಸಲು ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು’ ಎಂದು ಶಾಲೆಯ ಕಾರ್ಯದರ್ಶಿ ಎಸ್.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈಸೂರಿನ ರಾಮಕೃಷ್ಣ ವಸತಿಯುತ ಶಾಲೆಯಲ್ಲಿ ಶಿಕ್ಷಕರ ದಿನದಂದು ವಿದ್ಯಾರ್ಥಿಗಳು ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಅವಕಾಶ ಇದೆ. ಅದೇ ಮಾದರಿಯಲ್ಲಿ ನಮ್ಮ ಶಾಲೆಯಲ್ಲೂ, ಮೊದಲ ಬಾರಿಗೆ ಇದನ್ನು ಜಾರಿಗೆ ತಂದಿದ್ದೇವೆ’ ಎಂದು ಉಪ ಪ್ರಾಚಾರ್ಯ ವಿನಾಯಕ ಆರ್. ಹೇಳಿದರು.

ಒಟ್ಟು 40 ವಿದ್ಯಾರ್ಥಿಗಳು ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಪ್ರತಿಯೊಬ್ಬರಿಗೂ 40 ನಿಮಿಷದ ಎರಡು ತರಗತಿಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗಿತ್ತು. ಕಲಿಸಬೇಕಾದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮೊದಲೇ ನೀಡಲಾಗಿತ್ತು. 75ಕ್ಕೂ ಹೆಚ್ಚು ತರಗತಿಗಳು ನಡೆದವು. ರಾಮದಾಸ ವಾರಕರ ಪ್ರಾಚಾರ್ಯ ಹಾಗೂ ರಾಜಾರಾಮಸಿಂಗ್‌ ದೊಡ್ಡಮನಿ ಉಪಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದರು.

‘ಪಾಠ ಮಾಡಲು ಎರಡು ವಾರಗಳಿಂದ ತಯಾರಿ ನಡೆಸಿದ್ದೆವು. ಪ್ರತಿ ಸೆಮಿಷ್ಟರ್‌ನಲ್ಲೂ ಈ ರೀತಿ ಅವಕಾಶ ನೀಡಿದರೆ, ವೇದಿಕೆ ಭಯ ದೂರ ಆಗುತ್ತದೆ. ನಮ್ಮ ಜ್ಞಾನವೂ ವೃದ್ಧಿಯಾಗುತ್ತದೆ’ ಎಂದು ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಹೇಮಂತ ಬಾರಿಕೇರ, ವೀರೇಶ ಹುಬ್ಬಳ್ಳಿ, ದರ್ಶನ ಸಂಕಣ್ಣವರ, ಅಮೃತಾ ಕುಂದಗೋಳ ಸಂತಸ ವ್ಯಕ್ತಪಡಿಸಿದರು.

ಶಾಲೆಯ ಸಂಸ್ಥಾಪಕಿ ಕಮಲಾ ಸೆಲ್ವರಾಜ್, ಆದರ್ಶ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಪಿ.ಆರ್.ಅಡವಿ, ಆರ್.ವಸಂತಕುಮಾರಿ, ಪ್ರಾಚಾರ್ಯ ವಿ.ಎಂ.ಅಡ್ನೂರ, ಆರ್.ಮಲ್ಲಿಕಾ, ಎಂ.ಆರ್.ಪಾಟೀಲ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು