ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ: ಮಹಿಳೆಯರಿಗೆ ‘ಸಂಜೀವಿನಿ‘ಯಾದ ಹಾಲು ಉತ್ಪಾದಕರ ಸಂಘ

ಗ್ರಾಮೀಣ ಮಹಿಳೆಯರಿಗೆ ನಿಯಮಿತ ಆದಾಯ: ನಿತ್ಯ 400 ಲೀಟರ್‌ಗೂ ಅಧಿಕ ಹಾಲು ಸಂಗ್ರಹ
ನಿಂಗಪ್ಪ ಹಮ್ಮಿಗಿ
Published : 1 ಅಕ್ಟೋಬರ್ 2024, 6:06 IST
Last Updated : 1 ಅಕ್ಟೋಬರ್ 2024, 6:06 IST
ಫಾಲೋ ಮಾಡಿ
Comments

ಶಿರಹಟ್ಟಿ: ಗ್ರಾಮೀಣ ಭಾಗದ ಮಹಿಳೆಯರಿಗೆ ನಿರಂತರ ಆದಾಯ ತಂದುಕೊಡುವ ಹೈನುಗಾರಿಕೆ ಉದ್ಯಮಕ್ಕೆ ತಾಲ್ಲೂಕಿನಲ್ಲಿ ಸಂಜೀವಿನಿ ಹಾಲು ಉತ್ಪಾದಕರ ಸಂಘಗಳು ವರದಾನವಾಗಿವೆ.

ಮಹಿಳೆಯರ ಸ್ವಾವಲಂಬಿ ಬದುಕಿಗೆ ನಾಂದಿ ಹಾಡಿದ ಹಾಲು ಉತ್ಪಾದಕ ಸಂಘಗಳು ಇದೀಗ ತಾಲ್ಲೂಕಿನ ಮಹಿಳೆಯರಿಗೆ ಸಮಾನತೆ ತಂದೊದಗಿಸಿವೆ.

ತಾಲ್ಲೂಕಿನ ಸುಗ್ನಳ್ಳಿ, ಸಾಸಲವಾಡ, ಕೊಂಚಿಗೇರಿ, ದೇವಿಹಾಳ ಮತ್ತು ಕಡಕೋಳ ಗ್ರಾಮಗಳಲ್ಲಿ ಸ್ವ-ಸಹಾಯ ಸಂಘಗಳ ನೇತೃತ್ವದಲ್ಲಿ ಮಹಿಳಾ ಹಾಲು ಉತ್ಪಾದಕರ ಸಂಘಗಳು ಐದು ವರ್ಷಗಳ ಹಿಂದೆ ಸ್ಥಾಪಿತವಾಗಿದ್ದು, ಪ್ರಸ್ತುತ ಭರ್ಜರಿಯಾಗಿ ನಡೆಯುತ್ತಿವೆ.

ಹೈನುಗಾರಿಕೆಯ ಅಚ್ಚುಕಟ್ಟಿನ ತರಬೇತಿ: ತರಬೇತಿಯು ಮಹಿಳೆಯರ ಸಬಲೀಕರಣದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಹಸುವಿನ ವಿವಿಧ ತಳಿಗಳ ಆಯ್ಕೆ, ಸ್ಥಳೀಯವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ಪಶುಗಳಿಗೆ ಸಮತೋಲಿತ ಆಹಾರವನ್ನು ಸಂಯೋಜಿಸುವುದು, ಗರ್ಭಾವಸ್ಥೆಯಲ್ಲಿ ಆಹಾರ ನೀಡುವುದು, ಆರೋಗ್ಯ ರಕ್ಷಣೆ ಹಾಗೂ ಬ್ಯಾಂಕಿಂಗ್ ಮತ್ತು ವಿಮೆಗಳು ಹೈನುಗಾರಿಕೆಯಲ್ಲಿ ತರಬೇತಿಯ ಅತ್ಯಂತ ಆದ್ಯತೆಯ ಕ್ಷೇತ್ರಗಳಾಗಿವೆ. ಇಲ್ಲಿ ನೂರಾರು ಮಹಿಳೆಯರಿಗೆ ಡೈರಿ ಫಾರ್ಮ್ ತರಬೇತಿ ನೀಡಲಾಗಿದೆ.

ಹಾಲು ಉತ್ಪಾದನೆಗೆ ಸಾಲ ಸೌಲಭ್ಯ: ತಾಲ್ಲೂಕು ಪಂಚಾಯಿತಿ ಸಂಜೀವಿನಿ ಎನ್.ಆರ್.ಎಲ್.ಎಂ ಯೋಜನೆಯಡಿ ಮತ್ತು ಕೆ.ಎಂ.ಎಫ್ ಸಹಯೋಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳ ಮಟ್ಟದಲ್ಲಿ ಇರುವ ಮಹಿಳಾ ಗುಂಪುಗಳನ್ನು ರಚನೆ ಮಾಡಿ, ಅವರನ್ನು ಆರ್ಥಿಕ–ಸಾಮಾಜಿಕವಾಗಿ ಮುಂದೆ ತರಲು ಸಹಕಾರಿಯಾಗಿದೆ. ಮಹಿಳಾ ಹಾಲು ಉತ್ಪಾದಕ ಸದಸ್ಯರಿಗೆ ಹೈನುಗಾರಿಕೆ ಉತ್ತೇಜನ ನೀಡಲು ಸಂಜೀವಿನಿ ಮಹಿಳಾ ಒಕ್ಕೂಟ ಮತ್ತು ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರಗಳಲ್ಲಿ ಸಾಲ ಒದಗಿಸಲಾಗುತ್ತಿದೆ.

ಹಾಲು ಸಂಗ್ರಹ ವಿವರ: ತಾಲ್ಲೂಕಿನಲ್ಲಿ ಪ್ರಾರಂಭವಾದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನಿತ್ಯ ಸುಗನಹಳ್ಳಿಯಿಂದ 50 ಲೀಟರ್, ಕೊಂಚಿಗೇರಿಯಿಂದ 100 ಲೀಟರ್, ದೇವಿಹಾಳದಿಂದ 200 ಲೀಟರ್, ಕಡಕೋಳದಿಂದ 25–30ಲೀಟರ್, ಸಾಸಲವಾಡದಿಂದ 60 ಲೀಟರ್ ಹಾಲು ಸಂಗ್ರಹವಾಗುತ್ತಿದೆ.

****

ಸಂಜೀವಿನಿ ಯೋಜನೆಯು ನಿಜಕ್ಕೂ ವರದಾನವಾಗಿದ್ದು ನಾವು ಬೆಳೆಯುವುದರೊಂದಿಗೆ ಇತರೆ‌ ಮಹಿಳೆಯರ ಆರ್ಥಿಕ ಪ್ರಗತಿಗೂ ದಾರಿಯಾಗಿದೆ.

–ಪ್ರೇಮಾ ಗೌಡ್ರ ಕಡಕೋಳ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ

ನೂತನ ಡೈರಿ ಸ್ಥಾಪನೆಗೆ ಸಮೀಕ್ಷೆ

ಈಗಾಗಲೇ ತಾಲ್ಲೂಕಿನಲ್ಲಿ ಹೊಸ ಡೈರಿ ಪ್ರಾರಂಭ ಮಾಡುವ ಉದ್ದೇಶದಿಂದ ಕೆ.ಎಂ.ಎಫ್ ಮತ್ತು ಪಶುಪಾಲನೆ ಇಲಾಖೆಯ ಸಹಯೋಗದಲ್ಲಿ ಕನಕವಾಡ ಜಲ್ಲಿಗೇರಿ ಭಾವನೂರ ಕಲ್ಲಾಗನೂರ ಕಕ್ಕೂರಗುಂದಿ ಪರಸಾಪೂರ ಮತ್ತಿತರ ಗ್ರಾಮಗಳಲ್ಲಿ ‘ಪಶು ಸಖಿ’ಯರ ಮೂಲಕ ಸಮೀಕ್ಷೆ ಕೈಗೊಳ್ಳಲಾಗಿದ್ದು ಶೀಘ್ರದಲ್ಲೇ ಅವುಗಳನ್ನು ಪ್ರಾರಂಭಿಸುವ ನಿರೀಕ್ಷೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಹಾಗೂ ಆದಾಯ ಹೆಚ್ಚಿಸುವ ಸಲುವಾಗಿ ಮಹಿಳೆಯರನ್ನು ಸಂಘಟಿಸಿ ಸಹಕಾರಿ ಹಾಲು ಉತ್ಪಾದಕರ ಮಹಿಳಾ ಸಂಘಗಳನ್ನು ರಚಿಸುವುದು ಉತ್ಪಾದಿತ ಹಾಲಿಗೆ ನಿರಂತರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಮಹಿಳೆಯರ ಅಭ್ಯುದಯ ಸಾಧಿಸುವುದು ಪೌಷ್ಟಿಕ ಆಹಾರ ಆರೋಗ್ಯ ಪಾಲನೆ ಇತ್ಯಾದಿ ಶಿಬಿರ ನಡೆಸುವ ಮೂಲಕ ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಸಿ ಆತ್ಮ ವಿಶ್ವಾಸ ಹೆಚ್ಚಿಸುವುದು ಈ ಯೋಜನೆಯ ಉದ್ದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT