ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧೇಶ್ವರ ಶ್ರೀ ಜ್ಞಾನ ಸೂರ್ಯನಿದ್ದಂತೆ: ನೀಲಮ್ಮ ತಾಯಿ ಅಸುಂಡಿ

ಗುರು ಸ್ಮರಣೆ ಕಾರ್ಯಕ್ರಮ: ಭಕ್ತರಿಗೆ ಶ್ರೀಗಳ ಮುದ್ರಿತ ಸಂದೇಶದ ಕಾರ್ಡ್‌ ವಿತರಣೆ
Published 26 ಫೆಬ್ರುವರಿ 2024, 14:25 IST
Last Updated 26 ಫೆಬ್ರುವರಿ 2024, 14:25 IST
ಅಕ್ಷರ ಗಾತ್ರ

ಗದಗ: ‘ಸಿದ್ಧೇಶ್ವರ ಶ್ರೀಗಳ ಬದುಕಿನ ಕ್ಷಣಗಳನ್ನು ಶಬ್ದಗಳಲ್ಲಿ ಜೋಡಿಸಿ ಹೇಳುವುದು ಕಷ್ಟ. ಅಸಾಮಾನ್ಯ ವ್ಯಕ್ತಿತ್ವದ ಅವರ ಸಾಧನೆಗಳು ಲೋಕಮಾನ್ಯವಾಗಿವೆ. ಸಿದ್ಧೇಶ್ವರ ಶ್ರೀ ಜ್ಞಾನ ಸೂರ್ಯನಿದ್ದಂತೆ’ ಎಂದು ಅಧ್ಯಾತ್ಮ ವಿದ್ಯಾಶ್ರಮದ ನೀಲಮ್ಮ ತಾಯಿ ಅಸುಂಡಿ ತಿಳಿಸಿದರು.

ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಕೆ.ಎಚ್‌.ಪಾಟೀಲ ಸಭಾಭವನದಲ್ಲಿ ಸೋಮವಾರ ನಡೆದ ಸಿದ್ಧೇಶ್ವರ ಶ್ರೀ ಗುರು ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಿದ್ಧೇಶ್ವರ ಶ್ರೀ ಮೋಹ, ಮಮಕಾರ, ಮಾಯೆಯ ಸ್ಪರ್ಶವಿಲ್ಲದೇ ಬದುಕಿದರು. ಈ ಕಾರಣಕ್ಕಾಗಿಯೇ ಅವರು ಅತೀತರಾಗಿದ್ದರು’ ಎಂದು ತಿಳಿಸಿದರು.

‘ಜ್ಞಾನಕ್ಕೆ ಮನಸ್ಸು ಎಳೆಯಬೇಕೇ ಹೊರತು; ವಿಷಯಕ್ಕೆ ಅಲ್ಲ ಎಂಬುದು ಅವರ ಬದುಕಿನ ನಿಲುವಾಗಿತ್ತು. ಎಲ್ಲ ಜಾತಿ, ಮತ, ಪಂಥಗಳ ವಿಚಾರಧಾರೆಗಳನ್ನು ಓದಿಕೊಂಡರು. ಆದರೆ, ಯಾವುದಕ್ಕೂ ಅಂಟಿಕೊಳ್ಳಲಿಲ್ಲ’ ಎಂದು ತಿಳಿಸಿದರು.

ಗದಗ– ವಿಜಯಪುರ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ಸಿದ್ಧೇಶ್ವರ ಶ್ರೀ ಬಗ್ಗೆ ಎಲ್ಲರಿಗೂ ತಕ್ಕಮಟ್ಟಿಗೆ ತಿಳಿದಿದೆ. ಉಳಿದವರು ಅವರ ವಿಚಾರಧಾರೆಗಳಿಂದ ಸ್ಫೂರ್ತಿ ಪಡೆಯುವುದಷ್ಟೇ ಬಾಕಿ ಇದೆ. ಸಿದ್ಧೇಶ್ವರ ಶ್ರೀ ಜ್ಞಾನದ ಹಿಮಾಲಯವನ್ನೇ ಹತ್ತಿದರು. ನಾವು ಒಂದು ಬೆಟ್ಟವನ್ನಾದರೂ ಹತ್ತಬೇಕು’ ಎಂದು ತಿಳಿಸಿದರು.

‘ಜಗತ್ತಿನಲ್ಲಿ ಇರುವುದನ್ನೆಲ್ಲಾ ನಾವು ಕೇಳಬೇಕಿಲ್ಲ; ಎಲ್ಲರನ್ನೂ ಆರಾಧಿಸಬೇಕಿಲ್ಲ. ಆದರೆ, ಜಗತ್ತಿನಲ್ಲಿ ಕೆಲವೊಂದಿಷ್ಟು ಮಂದಿಯ ಬಗ್ಗೆ ತಿಳಿದುಕೊಳ್ಳಲೇ ಬೇಕಿರುತ್ತದೆ. ಸಿದ್ಧೇಶ್ವರ ಶ್ರೀ ಅಂತಹ ವರ್ಗಕ್ಕೆ ಸೇರಿದವರು. ನುಡಿದಂತೆ ನಡೆದು, ಮನುಜಮತ, ವಿಶ್ವಪಥ ಸಾರಿ ವಿಶ್ವಮಾನವರಾದವರು ಸಿದ್ಧೇಶ್ವರ ಶ್ರೀ. ಜೀವನದ ಪ್ರತಿಕ್ಷಣವೂ ಯೋಗಿಯಂತೆ ಕಂಡರು. ಅವರದ್ದು ಸೀಮಾತೀತ ವ್ಯಕ್ತಿತ್ವ. ಆ ಕಾರಣಕ್ಕಾಗಿಯೇ ಅವರು ಖಾವಿ ಧರಿಸಲಿಲ್ಲ. ಇದು ಮಹಾ ತಪಸ್ವಿಗೆ ಮಾತ್ರ ಸಾಧ್ಯ’ ಎಂದು ತಿಳಿಸಿದರು.

ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಶಿವಾನಂದ ಮಠದ ಹಿರಿಯ ಶ್ರೀಗಳು ಕಳುಹಿಸಿದ ಆಡಿಯೊ ಸಂದೇಶ ಭಿತ್ತರಿಸಲಾಯಿತು. ಶಿವಾನಂದ ಮಠದ ಕಿರಿಯ ಶ್ರೀಗಳಾದ ಸದಾಶಿವಾನಂದ ಸ್ವಾಮೀಜಿ ಮಾತನಾಡಿದರು.

ಸಿದ್ಧೇಶ್ವರ ಶ್ರೀಗಳ ಗುರು ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದ ಮಾಜಿ ಶಾಸಕ ಡಿ.ಆರ್‌.ಪಾಟೀಲ ಅವರನ್ನು ವಿಜಯಪುರ ಜ್ಞಾನಯೋಗಾಶ್ರಮದ ಬಸವರಾಜ ಸ್ವಾಮೀಜಿ ಅಭಿನಂದಿಸಿದರು.

ಜೆ.ಕೆ.ಜಮಾದಾರ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಶಾಸಕ ಗಡ್ಡದ್ದೇವರಮಠ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ವಿರೋಧ ಪಕ್ಷದ ನಾಯಕ ಎಲ್‌.ಡಿ.ಚಂದಾವರಿ, ಕಾಂಗ್ರೆಸ್‌ ಹಿರಿಯ ಮುಖಂಡ ಗುರಣ್ಣಾ ಬಳಗಾನೂರ, ದಲಾರ ಸಂಘದ ಅಧ್ಯಕ್ಷ ಚಂದ್ರು ಬಾಳೆಹಳ್ಳಿಮಠ ಇದ್ದರು.

‘ಶ್ರೀಗಳ ನೆನಪೇ ಸ್ಫೂರ್ತಿದಾಯಕ’

‘ಸಿದ್ಧೇಶ್ವರ ಶ್ರೀಗಳನ್ನು ಸ್ಮರಿಸಿದರೆ ಜ್ಞಾನದ ಬೆಳಕನ್ನು ನೆನಪಿಸಿಕೊಂಡಂತೆ’ ಎಂದು ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು. ‘ಸಿದ್ಧೇಶ್ವರ ಶ್ರೀ ನುಡಿದಂತೆ ಬದುಕಿ ಲಕ್ಷಾಂತರ ಜನರ ಮನದೊಳಗಿನ ಕತ್ತಲೆಯನ್ನು ಕಳೆದ ಮಹಾಗುರು. ಮಾತಿಗೆ ಮೀರಿದ; ಶಬ್ದಕ್ಕೆ ನಿಲುಕದ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವುದೇ ಸ್ಫೂರ್ತಿದಾಯಕ’ ಎಂದು ಹೇಳಿದರು. ಬಳಿಕ ಸಿದ್ಧೇಶ್ವರ ಶ್ರೀ ಕುರಿತು ತಾವು ರಚಿಸಿದ ಕವನ ವಾಚಿಸಿದರು.

‘ಸಿದ್ಧೇಶ್ವರ ಶ್ರೀಗಳ ಬದುಕು ಎಲ್ಲರಿಗೂ ಆದರ್ಶ’

‘ಯಾರ ಸ್ಮರಣೆ ಮಾಡಿದರೆ ಜ್ಞಾನ ವಿಸ್ತಾರ ಆಗುತ್ತದೆಯೋ ಅಂಥವರನ್ನು ಸದಾಕಾಲ ಸ್ಮರಿಸಬೇಕು. ಸಿದ್ಧೇಶ್ವರ ಶ್ರೀಗಳ ಜ್ಞಾನ ವಿಚಾರ ತತ್ವಗಳು ವಿಸ್ತಾರವಾಗಿದ್ದವು. ಅವರ ಸ್ಮರಣೆ ಮಾಡುವುದು ನಮ್ಮ ಭಾಗ್ಯ’ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಬಸವರಾಜ ಸ್ವಾಮೀಜಿ ತಿಳಿಸಿದರು. ‘ಸಿದ್ಧೇಶ್ವರ ಶ್ರೀಗಳ ಮನಸ್ಸಿನಲ್ಲಿ ‘ನಾನು’ ಎಂಬ ಭಾವ ಯಾವತ್ತೂ ಸುಳಿಯಲಿಲ್ಲ. ಮನುಷ್ಯರ ಅಂತರಂಗದ ಅಜ್ಞಾನ ಕಳೆಯುವಂತಹ ಮಾತುಗಳನ್ನು ಆಡಿದರು. ಅವರು ತಮ್ಮ ಬದುಕಿನುದ್ದಕ್ಕೂ ಕೆಟ್ಟದ್ದನ್ನು ಕಾಣಲಿಲ್ಲ. ಎಲ್ಲರಲ್ಲೂ ಒಳ್ಳೆಯದ್ದನ್ನೇ ಕಂಡರು. ಅದಕ್ಕೆ ಅವರು ವಿಶ್ವ ಸಂತರಾದರು. ಅವರ ಬದುಕು ಎಲ್ಲರಿಗೂ ಆದರ್ಶ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT