ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರಗುಂದ | ಉದ್ಯಾನ ಸಿರಿಯತ್ತ ತ್ಯಾಜ್ಯ ವಿಲೇವಾರಿ ಘಟಕ

ಪುರಸಭೆ ವಿನೂತನ ಹೆಜ್ಜೆ: ಪರಿಸರ ಪ್ರೇಮಿಗಳ ಹರ್ಷ
Published 21 ಜೂನ್ 2024, 8:09 IST
Last Updated 21 ಜೂನ್ 2024, 8:09 IST
ಅಕ್ಷರ ಗಾತ್ರ

ನರಗುಂದ: ತ್ಯಾಜ್ಯ ವಿಲೇವಾರಿ ಘಟಕ ಎಲ್ಲೇ ಇರಲಿ ಅಲ್ಲಿ ದುರ್ವಾಸನೆ. ಮೂಗು ಮುಚ್ಚಿಕೊಂಡೇ ಹೊಗುವ ಸ್ಥಿತಿ ಸಹಜ. ಆದರೆ ಅದಕ್ಕೆ ಅಪವಾದ ಎಂಬಂತೆ ಪಟ್ಟಣದ ತ್ಯಾಜ್ಯ ವಿಲೇವಾರಿ ಘಟಕವು ಉದ್ಯಾನ ಸಿರಿಯಾಗಿ ಕಂಗೊಳಿಸುತ್ತಿದೆ. ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದ್ದು, ಆದಾಯವನ್ನೂ ಹೆಚ್ಚಿಸಿಕೊಂಡಿದೆ.ವಿವಿಧ ನಮೂನೆಯ ಸಸ್ಯರಾಶಿ ಹಾಗೂ ಗಿಡಮರಗಳಿಂದ ದಾರಿ ಹೋಕರ ಕಣ್ಮನ ಸೆಳೆಯುತ್ತಿದೆ.

ಈ ಘಟಕವು ಪಟ್ಟಣದ ಹೊರವಲಯದ ಸವದತ್ತಿ ಯಲ್ಲಮ್ಮದೇವಿ ಗುಡ್ಡಕ್ಕೆ ಹೋಗುವ ಮಾರ್ಗದಲ್ಲಿ ಎರಡು ಕಿ.ಮೀ ದೂರದಲ್ಲಿ ಇದೆ. 9 ಎಕರೆ ವಿಸ್ತೀರ್ಣ ಹೊಂದಿರುವ ಈ ಘಟಕಕ್ಕೆ ನಿತ್ಯವೂ ನಗರದಲ್ಲಿನ 13 ಟನ್ ತ್ಯಾಜ್ಯ ಬಂದು ಬೀಳುತ್ತದೆ. ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕವು ಕಸ ವಿಲೇವಾರಿ ಮಾಡಲು ಅಷ್ಟೇ ಸೀಮಿತವಾಗದೇ ಉದ್ಯಾನವಾಗಿ ಮಾರ್ಪಟ್ಟಿದೆ.

ಕಸ ಸದುಪಯೋಗ: ನಗರದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಒಣ ಮತ್ತು ಹಸಿ ಕಸವನ್ನಾಗಿ ಬೇರ್ಪಡಿಸಿ ಹಸಿ ಕಸವನ್ನು ಎರೆಹುಳು ಗೊಬ್ಬರವನ್ನಾಗಿ ತಯಾರಿಸುವ ಕಾರ್ಯ ಕಳೆದ 4 ತಿಂಗಳಿಂದ ನಡೆಯುತ್ತಿದೆ. ಈಗಾಗಲೇ 4 ಟನ್ ಎರೆಹುಳು ಗೊಬ್ಬರ ತಯಾರಿಸಲಾಗಿದೆ. 1 ಕೆ.ಜಿಗೆ ₹7 ರಂತೆ 25 ಕೆ.ಜಿ ತೂಕವುಳ್ಳ 169 ಬ್ಯಾಗ್‌ಗಳನ್ನು ತಯಾರು ಮಾಡಲಾಗಿದ್ದು, ರೈತರು ಪಡೆದುಕೊಳ್ಳಬಹುದು.

ಒಣ ಕಸಕ್ಕಾಗಿ ಬೇಲಿಂಗ್ ಮಷಿನ್ ತರಿಸಲಾಗಿದ್ದು, ಪ್ಲಾಸ್ಟಿಕ್ ಸೇರಿದಂತೆ ಇತರೆ ಒಣ ಕಸವನ್ನು ರೀ ಸೈಕ್ಲಿಂಗ್‌ನೊಂದಿಗೆ ಬೇಲ್ ಮಾಡಲಾಗಿದೆ. ಇವುಗಳನ್ನು ಮಾರಾಟ ಮಾಡಲಾಗುತ್ತದೆ. ಇದೇ ಘಟಕದಲ್ಲಿ 6 ತಿಂಗಳಿಂದ ಬಯೋಗ್ಯಾಸ್ ಉತ್ಪಾದಿಸಲಾಗುತ್ತಿದೆ. ಉತ್ಪಾದನೆಗೊಂಡ ಗ್ಯಾಸ್‌ನ್ನು ಬಲೂನ್ ಮೂಲಕ ಅಥವಾ ಗ್ಯಾಸ್ ಮೂಲಕ ತುಂಬಿಸಿ ಹಾಸ್ಟೆಲ್‌ಗಳಿಗೆ ವಿತರಣೆ ಮಾಡುವ ಉದ್ದೇಶವನ್ನು ಪುರಸಭೆ ಹೊಂದಿದೆ. ಇದರಿಂದ ಪುರಸಭೆಗೆ ಆದಾಯವೂ ಹೆಚ್ಚಿದೆ.

ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗದಗ ಜಿಲ್ಲಾಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿಯೇ ನರಗುಂದ ತ್ಯಾಜ್ಯ ಘಟಕವೇ ವಿಶೇಷವಾಗಿದೆ. ನರಗುಂದ ಪುರಸಭೆ ಸ್ವಚ್ಛತೆ ಹಾಗೂ ಸೌಂದರ್ಯೀಕರಣದಲ್ಲಿ ರಾಜ್ಯದಲ್ಲಿಯೇ 8ನೇ ಸ್ಥಾನದಲ್ಲಿದೆ ಎಂದು ಕೆಲ ತಿಂಗಳ ಹಿಂದೆ ಸರ್ಕಾರ ಘೋಷಣೆ ಮಾಡಿದೆ. ಇದು ಪುರಸಭೆ ಸಿಬ್ಬಂದಿಗೆ ಪ್ರೇರಣೆಯಾಗಿದ್ದು ತ್ಯಾಜ್ಯ ವಿಲೇವಾರಿ ಘಟಕ ಉದ್ಯಾನಸಿರಿಯಾಗುತ್ತಿರುವುದು ಪಟ್ಟಣದ ಪರಿಸರ ಪ್ರೇಮಿಗಳಿಗೆ ಹರ್ಷವನ್ನುಂಟು ಮಾಡಿದೆ.

ಹಸಿರಿನಿಂದ ಕಂಗೋಳಿಸುತ್ತಿರುವ.ನರಗುಂದ ದದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕ
ಹಸಿರಿನಿಂದ ಕಂಗೋಳಿಸುತ್ತಿರುವ.ನರಗುಂದ ದದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕ
ನರಗುಂದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದ ಉದ್ಯಾನ
ನರಗುಂದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದ ಉದ್ಯಾನ
ಘನತ್ಯಾಜ್ಯ ವಿಲೇವಾರಿ ಘಟಕವು ಪುರಸಭೆ ಸಿಬ್ಬಂದಿ ನಿರಂತರ ಶ್ರಮದ ಫಲವಾಗಿ ಉದ್ಯಾನವಾಗಿ ಮಾರ್ಪಡುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡಿ ಹಸಿರಿನ ವಾತಾವರಣ ನಿರ್ಮಿಸಲಾಗುತ್ತಿದೆ
ಅಮಿತ ತಾರದಾಳೆ ಮುಖ್ಯಾಧಿಕಾರಿ ಪುರಸಭೆ
ಸಸ್ಯರಾಶಿಯಿಂದ ಕಂಗೊಳಿಸುವ ಉದ್ಯಾನ
ಪುರಸಭೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ದೂರದೃಷ್ಟಿ ಪರಿಣಾಮ ಇಲ್ಲಿ ವಿವಿಧ ರೀತಿಯ ಬಹುಪಯೋಗಿ ಸಸ್ಯಗಳನ್ನು ನೆಡಲಾಗಿದೆ. 570 ಸಾಗವಾನಿ 12 ಮಹಾಗನಿ 10 ಹುಣಸೆ 40 ಬೇವಿನಮರ 6 ಬಿದಿರು 20 ತೆಂಗಿನ ಮರಗಳು ಬೆಳೆದು ನಿಂತಿವೆ. ಹಲವಾರು ವಿಧದ ಹೂವಿನ ಅಲಂಕಾರಿಕ ಸಸಿಗಳನ್ನು ಮತ್ತು ತೋಟಗಾರಿಕೆ ಗಿಡಗಳನ್ನು ಸಹ ನೆಡಲಾಗಿದೆ. ಹಸಿರಿನಿಂದ ಕಂಗೊಳಿಸುತ್ತಿರುವ ಉದ್ಯಾನವು ಈ ಮಾರ್ಗದಲ್ಲಿ ಹಾದು ಹೋಗುವ ಜನತೆಯನ್ನು ಕೈ ಬೀಸಿ ಕರೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT