ಸೋಮವಾರ, ಆಗಸ್ಟ್ 15, 2022
22 °C
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ಎರಡು ದಿನಗಳ ಜಿಲ್ಲಾ ಪ್ರವಾಸ

ಸಕ್ರಿಯವಾಗಿ ಕೆಲಸ ನಿರ್ವಹಿಸಿ– ನಾಯ್ಡು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಜಿಲ್ಲೆಯಲ್ಲಿರುವ ಉಜ್ವಲ, ಸಾಂತ್ವನ, ಸ್ವಾಧಾರ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಲಾಗಿದೆ. ಅಲ್ಲಿರುವ ಸಣ್ಣಪುಟ್ಟ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಹೇಳಿದರು.

ಗದಗ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ದೂರು ನಿವಾರಣಾ ಸಮಿತಿಯಿಂದ ಸಕ್ರಿಯ ಕೆಲಸಗಳು ಆಗಬೇಕು. ಇದರಿಂದ ನೊಂದ ಮಹಿಳೆಯರಿಗೆ ಶೀಘ್ರ ನ್ಯಾಯ ದೊರಕುತ್ತದೆ’ ಎಂದು ಅವರು ಹೇಳಿದರು.

‘ಸರ್ಕಾರದ ವಸತಿ ಯೋಜನೆಯಡಿ ಲೈಂಗಿಕ ಅಲ್ಪಸಂಖ್ಯಾತರಿಗೂ ಸಹ ವಸತಿ ಸೌಲಭ್ಯ ದೊರಕಿಸಿಕೊಡಬೇಕು. ಇದರಿಂದ ಅವರಿಗೆ ಉದ್ಯೋಗಿನಿ ಯೋಜನೆ ಅಡಿ ಸಾಲ ಸೌಲಭ್ಯ ಮಂಜೂರಾತಿ ಮಾಡಲು ಅನುಕೂಲವಾಗುತ್ತದೆ. ಹೀಗೆ ಮಾಡಿದಲ್ಲಿ  ಅವರು ಆರ್ಥಿಕವಾಗಿ ಸಬಲರಾಗುವುದರ ಜತೆಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ದೊರಕುವಂತೆ ಲೈಂಗಿಕ ಅಲ್ಪಸಂಖ್ಯಾತರಿಗೂ ಸರ್ಕಾರದಿಂದ ಶೇ 50ರಷ್ಟು ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಲೈಂಗಿಕ ಅಲ್ಪಸಂಖ್ಯಾತರು ಸಮಾಜದಲ್ಲಿ ಗೌರವಯುತ ಜೀನವ ಸಾಗಿಸಬೇಕು’ ಎಂದು ಅವರು ಹೇಳಿದರು.

ಕೊರೊನಾ ಕಾರಣದಿಂದಾಗಿ ದೇಶದಾದ್ಯಂತ ಲಾಕ್‍ಡೌನ್ ಜಾರಿಗೊಳಿಸಿದ ಸಂದರ್ಭದಲ್ಲಿ ಅನೇಕ ಪಿಂಚಣಿದಾರರಿಗೆ ಮಾಸಾಶನ ದೊರೆತಿಲ್ಲ. ತಾಂತ್ರಿಕ ಕಾರಣದಿಂದಾಗಿ ಅವರಿಗೆ ಆರ್ಥಿಕವಾಗಿ ತೊಂದರೆ ಎದುರಾಗಿತ್ತು. ಈ ಸಂದರ್ಭದಲ್ಲಿ ಆಯೋಗದಿಂದ ನಿರಾಶ್ರಿತ, ನಿರ್ಗತಿಕ, ನಿರುದ್ಯೋಗಿ ಮಹಿಳೆಯರಿಗೆ ಆಹಾರ ಕಿಟ್ ಸೇರಿದಂತೆ ಮತ್ತಿತರ ಸೌಕರ್ಯ ಒದಗಿಸಲಾಗಿದೆ. ಹಲವೆಡೆ ಜಿಲ್ಲಾಡಳಿತಗಳಿಗೆ ಸೂಚಿಸಿ ವಸತಿ ಆಹಾರ ಕಿಟ್ ತಲುಪಿಸುವ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

‘ಕಾನೂನಿನಲ್ಲಿ ಎಲ್ಲರಿಗೂ ಬದುಕುವ ಹಕ್ಕು ಕಲ್ಪಿಸಲಾಗಿದೆ. ಗೌರವಯುತವಾಗಿ ಜೀವನ ನಡೆಸಲು ಮೂಲಭೂತ ಹಕ್ಕುಗಳು ಸಹಕಾರಿಯಾಗಿವೆ. ದೌರ್ಜನ್ಯಕ್ಕೊಳಗಾದ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಬದಲಾಗಿ, ದೌರ್ಜನ್ಯ ಎಸಗಿದ  ವ್ಯಕ್ತಿಗೆ ಕಾನೂನಿನನ್ವಯ ಶಿಕ್ಷೆ ಕೊಡಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಮಹಿಳಾ ಆಯೋಗ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಸಫಲವಾಗಿದೆ’ ಎಂದು ಹೇಳಿದರು.

ದೇವದಾಸಿ ಮಹಿಳೆಯರಿಗೆ ಇರುವ ಕಾನೂನಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಅವರು ಶೈಕ್ಷಣಿಕವಾಗಿ ಮುಂದುವರಿದಲ್ಲಿ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆತು, ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಚ್.ಎಚ್.ಕುಕನೂರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಇದ್ದರು.

ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ

‘ಗ್ರಾಮೀಣ ಮಟ್ಟದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲು ಮಹಿಳೆಯರಿಗೆ ಜಾಗೃತಿ ಅಗತ್ಯವಾಗಿದೆ’ ಎಂದು ಆರ್. ಪ್ರಮೀಳಾ ನಾಯ್ಡು ಹೇಳಿದರು.

ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳಿಗೆ ಜಾಗೃತಿ ಮೂಡಿಸಲು ಸೂಚನೆ ನೀಡಲಾಗಿದೆ. ಸೆ.19ರಂದು ರಾಜ್ಯದಾದ್ಯಂತ ಇ–ಲೋಕ್‌ ಅದಾಲತ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.