ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೃದಯಕ್ಕೆ ಮೊಳೆ ಹೊಡೆದ ಸರ್ಕಾರ; ಕರ್ನಾಟದಿಂದ ದೆಹಲಿಗೆ ಕಾಲ್ನಡಿಗೆ ಜಾಥಾ

ಆರಂಭಿಸಿರುವ ನಾಗರಾಜ ಆರೋಪ
Last Updated 5 ಆಗಸ್ಟ್ 2021, 3:02 IST
ಅಕ್ಷರ ಗಾತ್ರ

ಗದಗ: ‘ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ರಸ್ತೆಗೆ ಮೊಳೆ ಹೊಡೆಯಿಸಿದ್ದನ್ನು ಇಡೀ ಜಗತ್ತೇ ನೋಡಿದೆ. ಕೇಂದ್ರ ಸರ್ಕಾರ ಅಂದು ರಸ್ತೆಗಷ್ಟೇ ಅಲ್ಲ; ದೇಶದ ಕೋಟ್ಯಂತರ ಜನರ ಹೃದಯಕ್ಕೆ ಮೊಳೆ ಹೊಡೆಯಿತು’ ಎಂದು ರೈತ ಹೋರಾಟಗಾರ ನಾಗರಾಜ ಅಭಿಪ್ರಾಯಪಟ್ಟರು.

ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿ ಎದುರು ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೃಷಿಕರ ಉತ್ಪನ್ನಗಳಿಗೆ ವೈಜ್ಞಾನಿಕ ಮತ್ತು ಲಾಭದಾಯಕ ಬೆಲೆಯನ್ನು ಕಾನೂನಿನ ಚೌಕಟ್ಟಿನಲ್ಲಿ ದೊರಕಿಸಿಕೊಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಧೋರಣೆ ಸಲ್ಲದು. ಅಧಿಕಾರ ಇದೆ ಎಂಬ ಮಾತ್ರಕ್ಕೆ ದೌರ್ಜನ್ಯ ನಡೆಸಿದರೆ ಜನರು ಸುಮ್ಮನೆ ಕೂರುವುದಿಲ್ಲ, ಸಾಂವಿಧಾನಿಕ ಹಕ್ಕಿನಂತೆ ಬೀದಿಗಿಳಿದು ಪ್ರತಿಭಟನೆ ನಡೆಸಿಯೇ ತೀರುತ್ತಾರೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಕರ್ನಾಟಕದಿಂದ ದೆಹಲಿಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೇನೆ’ ಎಂದು ಹೇಳಿದರು.

‘ರೈತ ಹೋರಾಟಕ್ಕೆ ಬೆದರಿದ ಸರ್ಕಾರ ಒಂದೂವರೆ ವರ್ಷಗಳ ಕಾಲ ಈ ಕಾನೂನುಗಳನ್ನು ಲಾಗೂ ಮಾಡುವುದಿಲ್ಲ ಎಂದು ಹೇಳಿದೆ. ಇದು ರೈತರ ಹೋರಾಟಕ್ಕೆ ಸಿಕ್ಕ ಜಯ’ ಎಂದು ಹೇಳಿದರು.

‘ಎಪಿಎಂಸಿಗಳನ್ನು ರದ್ದು ಮಾಡುವುದಿಲ್ಲ ಎಂದು ಹೇಳುವ ಸರ್ಕಾರ ಹೊಸ ಕಾಯ್ದೆ ಅನ್ವಯ ಖಾಸಗಿ ಮಂಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಿದೆ. ರಕ್ಷಣಾ ಇಲಾಖೆ ಮತ್ತು ರೈಲ್ವೆ ಇಲಾಖೆ ಹೊರತು ಪಡಿಸಿದರೆ ಅತಿ ಹೆಚ್ಚು ಸರ್ಕಾರಿ ಒಡೆತನದ ಆಸ್ತಿ ಇರುವುದು ಎಪಿಎಂಸಿಗಳಲ್ಲಿ. ಅದಾನಿ, ಅಂಬಾನಿ ಈ ಆಸ್ತಿ ಮೇಲೆ ಕಣ್ಣಿಟ್ಟಿದ್ದಾರೆ’ ಎಂದು ಆರೋಪಿಸಿದರು.

‘ಶೇ 65ರಷ್ಟಿರುವ ಕೃಷಿ ಕ್ಷೇತ್ರವನ್ನು ಖಾಸಗೀಕರಣಗೊಳಿಸಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ದೇಶದಲ್ಲಿ ಜನವಿರೋಧಿ ನೀತಿಗಳು ಬಂದಾಗ ವಿರೋಧ ಪಕ್ಷ ಗಟ್ಟಿಯಾಗಿ ನಿಂತು ವಿರೋಧಿಸಬೇಕು. ಮಾಧ್ಯಮಗಳು ಪ್ರಶ್ನಿಸಬೇಕು. ಇವೆರಡು ವಿಫಲವಾದಾಗ ವಿಷಯಗಳು ಬೀದಿಗೆ ಬರುತ್ತವೆ. ಈಗ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ರೈತ ವಿರೋಧಿ ಕಾನೂನುಗಳ ವಿರುದ್ಧ ಧ್ವನಿ ಎತ್ತಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ಪರಮೇಶಪ್ಪ ಜಂತಲಿ, ಡಾ. ರಾಜಶೇಖರ ದಾನರೆಡ್ಡಿ, ಬಸವರಾಜ ಸೂಳಿಭಾವಿ, ಶೇಖಣ್ಣ ಕವಳಿಕಾಯಿ, ಅಶೋಕ ಬರಗುಂಡಿ, ಷರೀಫ್ ಬಿಳಿಯಲಿ, ಮುತ್ತು ಬಿಳಿಯಲಿ, ಯಲ್ಲಪ್ಪ ರಾಮಗಿರಿ ಇದ್ದರು.

ರೈತ, ದಲಿತ ಸಂಘಟನೆಗಳ ಬೆಂಬಲ

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಎಂಟು ತಿಂಗಳಿನಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ರೈತರ ಈ ಹೋರಾಟಕ್ಕೆ ಬೆಂಬಲ ನೀಡಲು ಕರ್ನಾಟಕದ ನಾಗರಾಜ ಅವರು ಪಾದಯಾತ್ರೆ ಆರಂಭಿಸಿದ್ದಾರೆ.

ರೈತ ಚಳವಳಿ ಬೆಂಬಲಿಸಲು ಕರ್ನಾಟಕದಿಂದ ದೆಹಲಿಗೆ ಕಾಲ್ನಡಿಗೆ ಜಾಥಾ ಆರಂಭಿಸಿರುವ ಅವರು ಮಲೆ ಮಹಾದೇಶ್ವರ ಬೆಟ್ಟದಿಂದ 25 ಜಿಲ್ಲೆಗಳಲ್ಲಿ ಸಂಚರಿಸಿ ಬುಧವಾರ ಗದಗ ತಲುಪಿದ್ದರು. ಈ ವೇಳೆ ಜಿಲ್ಲೆಯ ದಲಿತ ಮತ್ತು ರೈತ ಸಂಘಟನೆಗಳು ಅವರನ್ನು ಸ್ವಾಗತಿಸಿ, ಬೆಂಬಲ ವ್ಯಕ್ತಪಡಿಸಿದವು.

ನಾಗರಾಜ ಅವರು ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್‌, ಬಿಜಾಪುರ ಜಿಲ್ಲೆಗಳ ಸಂಚಾರ ಮುಗಿಸಿ ಮಹಾರಾಷ್ಟ್ರ, ಮಧ್ಯಪ್ರದೇಶ ಮಾರ್ಗವಾಗಿ ಉತ್ತರ ಪ್ರದೇಶದ ದೆಹಲಿ ಗಡಿ ಸೇರುವ ಯೋಜನೆ ಹೊಂದಿದ್ದಾರೆ.

ರೈತರಿಗೆ ಪ್ರತಿ ಹಂತದಲ್ಲೂ ಮೋಸ, ವಂಚನೆ ಆಗುತ್ತಿದೆ. ರೈತರು ಬೆಂಬಲ ಬೆಲೆಗಿಂತ ವೈಜ್ಞಾನಿಕ ಬೆಲೆ ಕೇಳಬೇಕು. ಇಲ್ಲವಾದರೆ ರೈತ ಸಮುದಾಯದ ಉದ್ಧಾರ ಸಾಧ್ಯವಿಲ್ಲ

ಮಾರ್ತಾಂಡಪ್ಪ ಹಾದಿಮನಿ, ಮುಖಂಡ


ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಕೇಂದ್ರ ಸರ್ಕಾರ ರೈತರನ್ನು ಅಸಹಾಯಕರನ್ನಾಗಿ ಮಾಡಲಿದ್ದು, ಬಂಡವಾಳಶಾಹಿಗಳಿಗೆ ಅನುಕೂಲ ಒದಗಿಸುವ ಹುನ್ನಾರವಿದೆ ಶ್ರೀಶೈಲಪ್ಪ ಬಿದರೂರು, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT