ಶುಕ್ರವಾರ, ಸೆಪ್ಟೆಂಬರ್ 30, 2022
26 °C
ಪ್ರೊ. ಬಿ.ಗಂಗಾಧರಮೂರ್ತಿ ಶ್ರದ್ಧಾಂಜಲಿ ಸಭೆ: ಸಾಹಿತಿ ಸೂಳಿಭಾವಿ ಅಭಿಮತ

ಶಸ್ತ್ರಾಸ್ತ್ರ ಕಳೆದುಕೊಂಡಷ್ಟೇ ನೋವು: ಸಾಹಿತಿ ಸೂಳಿಭಾವಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ರಾಜ್ಯದಲ್ಲಿ ನಿಜವಾದ ದಮನಿತರ ಇತಿಹಾಸವನ್ನು ಕಟ್ಟಿದವರಲ್ಲಿ ಪ್ರೊ. ಬಿ.ಗಂಗಾಧರಮೂರ್ತಿ ಕೂಡ ಒಬ್ಬರು. ದಮನಿತರಿಗೆ ಶಕ್ತಿ ತುಂಬವ ಕೆಲಸ ಮಾಡಿದ ಮೂರ್ತಿ ಅವರನ್ನು ಕಳೆದುಕೊಂಡಾಗ ಕೈಯಲ್ಲಿನ ಶಸ್ತ್ರಾಸ್ತ್ರ ಕಳೆದುಕೊಂಡಷ್ಟೇ ತೀವ್ರ ನೋವು ಆಯಿತು’ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.

ನಗರದ ನಿಸರ್ಗ ಬಡಾವಣೆಯಲ್ಲಿರುವ ಅಶೋಕ ಬರಗುಂಡಿ ನಿವಾಸದಲ್ಲಿ ಸೋಮವಾರ ನಡೆದ ಪ್ರೊ.ಬಿ.ಗಂಗಾಧರಮೂರ್ತಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ಸಿದ್ಧಲಿಂಗಯ್ಯ, ಚಂಪಾ ಅವರನ್ನು ಕಳೆದುಕೊಂಡಾಗ ಕಾಣಿಸದ ಖಾಲಿತನ ಮೂರ್ತಿ ಅವರನ್ನು ಕಳೆದುಕೊಂಡಾಗ ಕಾಡಿತು. ಸಿದ್ಧಲಿಂಗಯ್ಯ, ಚಂಪಾ ದಿಟ್ಟ ಹೋರಾಟಗಾರರಾದರೂ ಅವರ ಆಳದ ಬೇರುಗಳು ಈ ವ್ಯವಸ್ಥೆಯ ಜತೆಗೆ ಇದ್ದವು. ಸ್ವ ಹಿತಾಸಕ್ತಿಗಳೇ ಪ್ರಧಾನವಾಗಿ, ಸಮುದಾಯದ ಹಿತಾಸಕ್ತಿಗಳು ಕಡೆಗಣನೆಯಾಗಿದ್ದವು. ಆದರೂ ಅವರಿಬ್ಬರ ಮೂಲಚೇತನ ಹೋರಾಟವೇ ಆಗಿದ್ದರಿಂದ ಅವರ ಬಗ್ಗೆ ಗೌರವ ಇದೆ. ಆದರೆ, ಬಿಜಿಎಂ ಕೊನೆವರೆಗೂ ವ್ಯವಸ್ಥೆ ಜತೆಗೆ ಹೊಂದಾಣಿಕೆ ಮಾಡಿಕೊಳ್ಳದೇ ವಿರೋಧಿಸಿಕೊಂಡೇ ಬದುಕಿದರು. ಇದು ಅವರ ಶಕ್ತಿಯಾಗಿತ್ತು’ ಎಂದರು.

‘ಈ ವ್ಯವಸ್ಥೆಯಲ್ಲಿ ಕಡೆಗಣಿಸಲ್ಪಟ್ಟ ಸಮುದಾಯದ ಜನರು ಮೇಲೇಳುವುದು ಸುಲಭದ ವಿಷಯವಲ್ಲ. ಆದರೆ, ಬಿಜಿಎಂ ಬೆಳೆದುಕೊಂಡ ರೀತಿ ಅದ್ಭುತ. ಗಂಗಾಧರಮೂರ್ತಿ ಕಟ್ಟಿದ ಹೋರಾಟಗಳಿಗೆ ಲೆಕ್ಕವಿಲ್ಲ. ಅವರನ್ನು ನಾಗಸಂದ್ರ ಭೂ ಹೋರಾಟದ ಮೂಲಕ ಕಾಣಬೇಕಿದೆ’ ಎಂದು ಹೇಳಿದರು.

ಚಿಂತಕ ಹರಿನಾಥ ಬಾಬು ಮಾತನಾಡಿ, ‘ಮೂರ್ತಿ ಅವರು ಎಚ್ಚರದ ಧ್ವನಿಯಾಗಿದ್ದರು. ಅವರ ನಡೆ ನುಡಿ ಎರಡೂ ಒಂದೇ ಆಗಿತ್ತು. ಸಂವಿಧಾನ ಮಾತ್ರ ನಮ್ಮ‌ ಬದುಕು ಬೆಳಗಿಸಬಲ್ಲದು ಎಂದು ನಂಬಿದ್ದರು. ಅದಕ್ಕಾಗಿ ಶಾಲಾ ಮಕ್ಕಳಲ್ಲಿ ಜಾಗೃತಿಯ ಬೆಳಕು ಪಸರಿಸಲು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದರು’ ಎಂದು ಹೇಳಿದರು.

ಪ್ರೊ. ಬಿ.ಗಂಗಾಧರಮೂರ್ತಿ ಅವರ ಒಡನಾಟಿ ಅಂಜನಾಮೂರ್ತಿ ಮಾತನಾಡಿ, ‘ಪ್ರಗತಿಪರ ಚಿಂತನೆ ಜತೆಗೆ ದಲಿತಪರ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದರು. ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸುತ್ತಿದ್ದ ಅವರು ಸಮಾನತೆ ಹಾದಿಯಲ್ಲಿ ನಡೆದು ಹಲವರಿಗೆ ದಾರಿದೀಪವಾದರು’ ಎಂದು ಹೇಳಿದರು. 

ಚಿಂತಕ ರಾಮಚಂದ್ರ ಹಂಸನೂರ ಮಾತನಾಡಿ, ಪುಸ್ತಕಗಳಿಂದಲೇ ಅವರ ಪರಿಚಯ ಆಯಿತು. ನಾಡಿನ ಅತ್ಯುತ್ತಮ ಅನುವಾದಕರಾಗಿ ಹೆಸರು ಗಳಿಸಿದ್ದ ಅವರು ಇಷ್ಟು ಬೇಗ ಅಗಲಿದ್ದು ನೋವಿನ ಸಂಗತಿ’ ಎಂದರು. 

ಷರೀಪ ಬಿಳಿಯಲೆ ಪ್ರಾರ್ಥನೆ ಹಾಡಿದರು. ಮುತ್ತು ಬಿಳಿಯಲಿ ನಿರೂಪಿಸಿದರು. 

ಪ್ರೊ. ಬಿ.ಗಂಗಾಧರಮೂರ್ತಿ ಅವರು ಸಂವಿಧಾನದ ಮೂಲಕ ಶಾಲಾ ಮಕ್ಕಳಲ್ಲಿ ಬದಲಾವಣೆ ತಂದು ಸಾಮಾಜಿಕ ಪರಿವರ್ತನೆಯ ಕನಸು ಕಂಡಿದ್ದರು.

ಬಸವರಾಜ ಸೂಳಿಭಾವಿ, ಸಾಹಿತಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.