ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಲ್:‌ ಪಕ್ಷಿಗಳ ದಾಹ ತಣಿಸಲು ಮುಂದಾದ ಮಕ್ಕಳು

ಸರ್ಕಾರಿ ಶಾಲೆಯಲ್ಲಿ ಪಕ್ಷಿಗಳಿಗೆ ನೀರು, ಆಹಾರ ಪೂರೈಕೆ
ಚಂದ್ರು ಎಂ. ರಾಥೋಡ್‌
Published 29 ಮಾರ್ಚ್ 2024, 5:06 IST
Last Updated 29 ಮಾರ್ಚ್ 2024, 5:06 IST
ಅಕ್ಷರ ಗಾತ್ರ

ನರೇಗಲ್:‌ ಜಲಮೂಲಗಳಲ್ಲಿ ನೀರು ಕುಡಿದು ಬದುಕುತ್ತಿದ್ದ ಪ್ರಾಣಿ ಪಕ್ಷಿಗಳಿಗೆ ಗದಗ ಜಿಲ್ಲೆಯಾದ್ಯಂತ ಬರಗಾಲದ ಪರಿಣಾಮದಿಂದಾಗಿ ನೀರಿಗೆ ಹಾಹಾಕಾರ ಸೃಷ್ಟಿಯಾಗಿ ತೊಂದರೆ ಎದುರಿಸುತ್ತಿರುವುದು ಸಹಜವಾಗಿದೆ.

ಹೊಲಗದ್ದೆ, ಕೃಷಿಹೊಂಡ, ಬಾವಿ, ಕೆರೆ, ಚೆಕ್‌ ಡ್ಯಾಂಗಳಲ್ಲಿ ನೀರಿಲ್ಲ, ಹೊಲಗಳಲ್ಲಿ, ಗಿಡಗಳಲ್ಲಿ ಆಹಾರ ಪದಾರ್ಥಗಳಿಲ್ಲ ಹಾಗಾಗಿ ಹಸಿವು ನೀಗಿಸಿಕೊಳ್ಳಲು ಪರದಾಡುತ್ತಿವೆ. ಆದರೆ ನಾರಾಯಣಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಸುವ ಮೂಲಕ ಸಂರಕ್ಷಣೆ ಕಾರ್ಯಕ್ಕೆ ಮುಂದಾಗಿದ್ದಾರೆ.

ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ ಅವರ ಮಾರ್ಗದರ್ಶನದಲ್ಲಿ ʼಪಕ್ಷಿಗಳ ಜಲ ಸಂಭ್ರಮʼ ಎನ್ನುವ ಶೀರ್ಷಿಕೆಯಡಿ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇದರಲ್ಲಿ ಶಿಕ್ಷಕರು ಹಾಗೂ ಮಕ್ಕಳು ಒಳಗೊಂಡ ತಂಡಗಳನ್ನು ರಚನೆ ಮಾಡಿ ಪರಿಸರ ಸಂರಕ್ಷಣೆ ಹಾಗೂ ಪರಿಸರ ಸಮತೋಲನ ಕಾಪಾಡುವ ಚಟುವಟಿಕೆಗಳನ್ನು ಆಯೋಜನೆ ಮಾಡುತ್ತಿದ್ದಾರೆ.

ಮನೆಯಲ್ಲಿ ಖಾಲಿಯಾಗಿರುವ, ಅಂಗಡಿಗಳಲ್ಲಿ ಉಚಿತವಾಗಿ ಸಿಗುವ ಹಾಗೂ ರಸ್ತೆ ಪಕ್ಕದಲ್ಲಿ ಕುಡಿದು ಬಸಾಡಿರುವ ಖಾಲಿ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಮರು ಬಳಕೆ ಮಾಡುತ್ತಿದ್ದಾರೆ. ಅವುಗಳಿಗೆ ಮೇಲ್ಭಾಗದಲ್ಲಿ ದಾರ, ತಂತಿಯಿಂದ ಹೆಣೆದು ಗಿಡಗಳ ಟೊಂಗೆಗೆ ನೇತು ಹಾಕಲು ಅನಕೂಲವಾಗುವ ಮಾದರಿಯಲ್ಲಿ ಅಳತೆಗೆ ತಕ್ಕಂತೆ ದಾರದಿಂದ ಕಟ್ಟುತ್ತಾರೆ. ಅದರಲ್ಲಿ ನೀರು, ಆಹಾರ ಹಾಕುವುದಾಗಿ ಶಿಕ್ಷಕಿಯರಾದ ಮಮತಾ.ಟಿ, ಜೆ.ಬಿ.ರಿಸೀಲ್ದಾರ್ ಹೇಳಿದರು.

ಆ ಗ್ರಾಮದ ರೈತರ ಹೊಲದಲ್ಲಿ ರಾಶಿ ಮಾಡಿ ಉಳಿದಿರುವ ಕಾಳುಕಡಿಗಳನ್ನು ಮಕ್ಕಳು ಸಂಗ್ರಹಿಸುತ್ತಾರೆ. ಅದರಲ್ಲೂ ಈ ಶಾಲೆಯಲ್ಲಿ ಕಲಿಯುವ ಎಲ್ಲ  ಮಕ್ಕಳು ರೈತರ ಹಾಗೂ ಕೃಷಿ ಕಾರ್ಮಿಕರ ಮನೆತನದ ಮಕ್ಕಳಾಗಿರುವ ಕಾರಣ ಕಾಳುಕಡಿ ಸಂಗ್ರಹಣೆ ಸುಲಭವಾಗಿದೆ. ಶಾಲಾ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು ಸಹ ಸಾಧ್ಯವಾದಷ್ಟು ಪಕ್ಷಿಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ.

ಶಾಲಾ ಆವರಣದಲ್ಲಿ ಈ ಹಿಂದೆ ನೆಟ್ಟು ಬೆಳಸಲಾಗಿರುವ ನೂರಾರು ಗಿಡಗಳಿವೆ, ಅಲ್ಲಿಯೇ ಕಾಂಪೌಂಡ್‌ ಹತ್ತಿರ ಶುದ್ದ ಕುಡಿಯುವ ನೀರಿನ ಘಟಕವಿದೆ. ಹಾಗಾಗಿ ಪಕ್ಷಿಗಳಿಗೆ ಬೇಕಾದ ಆಹಾರ ನೀರು ಸಂಗ್ರಹಣೆ ಸುಲಭವಾಗಿದೆ ಎನ್ನುತ್ತಾರೆ ಶಿಕ್ಷಕರಾದ ರವಿ ಪಡೇಸೂರ, ಗ್ಯಾನಪ್ಪ ಡೋಣಿ.

ನಾವೇ ತಯಾರಿಸಿ ಗಿಡಗಳಿಗೆ ಕಟ್ಟಿದ ಪೆಟ್ಟಿಗೆ ಸಮೀಪ ಬರುವ ಪಕ್ಷಿಗಳು ಅದರಲ್ಲಿನ ನೀರು ಕುಡಿದು ಕಾಳು ತಿನ್ನುವಾಗ ತುಂಬಾನೆ ಖುಷಿವಾಯಿತು. ಇದೇ ರೀತಿ ಪ್ರಯೋಗವನ್ನು ನಮ್ಮ ಮನೆಯ ಎದುರಿನ ಹಾಗೂ ಓಣಿಯಲ್ಲಿನ ಗಿಡಗಳಿಗೂ ಮಾಡಲು ಪ್ರಯತ್ನಿಸುವೆ ಎಂದು ವಿದ್ಯಾರ್ಥಿನಿ ನಿವೇದಿತಾ ಗದಗಿನಮಠ ಹೇಳಿದರು.

ಗಿಡಕ್ಕೆ ಕಟ್ಟಿರುವ ನೀರು ಆಹಾರದ ಡಬ್ಬಿ
ಗಿಡಕ್ಕೆ ಕಟ್ಟಿರುವ ನೀರು ಆಹಾರದ ಡಬ್ಬಿ
ಪರಿಸರ ನಾಶದಿಂದ ಪ್ರಾಣಿ ಪಕ್ಷಗಳಿಗೆ ಆಗುತ್ತಿರುವ ತೊಂದರೆ ಕುರಿತು ಬಾಲ್ಯದಲ್ಲಿಯೇ ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಅಷ್ಟೇ ಅಲ್ಲದೆ ಬೇಸಿಗೆಯಲ್ಲಿ ಅವುಗಳಿಗೆ ನೀರು ಆಹಾರ ನೀಡುವ ಮಾನವೀಯ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
–ವಿ.ವಿ.ನಡುವಿನಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಗದಗ ಗ್ರಾಮೀಣ ವಲಯ
ಜನ ಬಾಯಾರಿದರೆ ಕುಡಿಯುವ ನೀರು ಖರೀದಿಸಿ ದಾಹ ನೀಗಿಸಿಕೊಳ್ಳುತ್ತಾರೆ. ಆದರೆ ಪಕ್ಷಿಗಳ ರೋಧನೆ ಹೇಳತೀರದು ಆದ್ದರಿಂದ ಸಾಂಘಿಕವಾಗಿ ವಿದ್ಯಾರ್ಥಿಗಳ ಮೂಲಕ ನೀರು ಆಹಾರ ಪೂರೈಸುವ ಪ್ರಯತ್ನ ಮಾಡಿದ್ದೇವೆ.
–ಎಸ್.ಕೆ.ಹೊಟ್ಟಿನ್, ಮುಖ್ಯಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT