ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ಸೋಮೇಶ್ವರ ದೇವರ ಜಾತ್ರೆ ನಾಳೆಯಿಂದ

Published 16 ಮೇ 2024, 6:29 IST
Last Updated 16 ಮೇ 2024, 6:29 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವರ ಜಾತ್ರೆಯು ಮೇ 17ರಿಂದ 20ವರೆಗೆ ಜರುಗಲಿದೆ. 17ರಂದು ಸಂಜೆ 7ಕ್ಕೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು 18ರಂದು ಸಂಜೆ 5.30ಕ್ಕೆ ರಥೋತ್ಸವ, 19ರಂದು ಕಡುಬಿನ ಕಾಳಗ ಮತ್ತು 20ರಂದು ಸಜೆ 7ಕ್ಕೆ ಓಕಳಿ ಜರುಗಲಿದೆ.

ಸಂಕ್ಷಿಪ್ತ ಇತಿಹಾಸ: ಸೋಮೇಶ್ವರ ದೇವಸ್ಥಾನವು 10ನೇ ಶತಮಾನದಲ್ಲಿ ಕಟ್ಟಲ್ಪಟ್ಟಿದ್ದು ಇದು ಚಾಲುಕ್ಯ ಶಿಲ್ಪಕಲೆಯ ಪರಂಪರೆಯಲ್ಲಿದೆ. ಈಗಿನ ಲಕ್ಷ್ಮೇಶ್ವರಕ್ಕೆ ಹಿಂದೆ ಪುಲಿಗೆರೆ-300 ಎಂದೂ ಕರೆಯುತ್ತಿದ್ದರು. ಅಂದರೆ ಆಗ ಇದು 300 ಪ್ರಾಂತ್ಯಗಳ ಸೀಮೆಯಾಗಿತ್ತು. ದೇವಾಲಯ ಭವ್ಯವಾದ ಬಯಲಿನಲ್ಲಿ ನಿರ್ಮಿಸಲ್ಪಟ್ಟಿದ್ದು ದೇವಾಲಯದ ಸುತ್ತಲೂ ಕಲ್ಲಿನಿಂದ ನಿರ್ಮಿಸಿದ ಎತ್ತರವಾದ ಗೋಡೆ ಇದ್ದು ಇದು ದೇವಸ್ಥಾನಕ್ಕೆ ರಕ್ಷಣೆ ಒದಗಿಸುತ್ತದೆ. ಪೂರ್ವ, ಉತ್ತರ ಹಾಗೂ ದಕ್ಷಿಣ ದಿಕ್ಕುಗಳಿಂದ ದೇವಾಲಯದೊಳಗೆ ಪ್ರವೇಶಿಸಲು ಮುಖ್ಯ ಮೂರು ದ್ವಾರಗಳಿವೆ.

ವಿಶಿಷ್ಠ ಮೂರ್ತಿ: ಸೋಮೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿನ ಮೂರ್ತಿ ಬಹಳ ಅಪರೂಪದ್ದಾಗಿದ್ದು, ಅಷ್ಟೇ ಸುಂದರವಾಗಿದೆ. ಇಲ್ಲಿ ಪರಮೇಶ್ವರನ ಹಿಂದೆ ಪಾರ್ವತಿ ನಂದಿಯನ್ನೇರಿ ಕುಳಿತಿದ್ದಾಳೆ. ಇಂಥ ಅಪರೂಪದ ಮೂರ್ತಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಎನ್ನಲಾಗುತ್ತಿದೆ. ಸೋಮನಾಥ ಮೂರ್ತಿಯು ಸುಮಾರು 4 ಅಡಿ ಎತ್ತರ 3 ಅಡಿ ಅಗಲವಿದ್ದು, ಪೂಜೆ, ಅಲಂಕಾರಗೊಂಡಾಗ ಶಿವ ಪಾರ್ವತಿಯರು ನಂದಿರೂಢರಾಗಿ ನಗರ ಪ್ರದಕ್ಷಿಣೆಗೆ ಹೊರಟಿರುವಂತೆ ಕಾಣಿಸುತ್ತದೆ. ಈ ಮೂರ್ತಿಯನ್ನು ಶಿವಶರಣ ಆದಯ್ಯನು ಸೌರಾಷ್ಟ್ರದಿಂದ ತಂದು ಸ್ಥಾಪಿಸಿದನೆಂದು ದಾಖಲೆಗಳಲ್ಲಿ ಉಲ್ಲೇಖ ಇದೆ.

21 ಎಕರೆ ವಿಸ್ತಿರ್ಣದಲ್ಲಿರುವ ದೇವಸ್ಥಾನದಲ್ಲಿ ಸೋಮತೀರ್ಥ, ಓಕಳಿ ಹೊಂಡ ಸೇರಿದಂತೆ ಅನೇಕ ಚಿಕ್ಕ ಚಿಕ್ಕ ದೇವಾಲಯಗಳು ಇವೆ. ಅವೆಲ್ಲವುಗಳು ಅವಸಾನದ ಅಂಚಿಗೆ ತಲುಪಿದ್ದವು. ಆದರೆ ಇನ್ಫೋಸಿಸ್‍ನ ಸುಧಾಮೂರ್ತಿಯವರು 2014ರಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರಿಂದ ಪಾಳು ಬೀಳುತ್ತಿದ್ದ ದೇವಾಲಯದೊಳಗಿನ ಸಣ್ಣ ಸಣ್ಣ ದೇವಸ್ಥಾನಗಳು ಇದೀಗ ಹೊಸ ಕಳೆಯೊಂದಿಗೆ ಭಕ್ತರನ್ನು ಆಕರ್ಷಿಸುತ್ತಿವೆ. ಕಲ್ಲಿನಿಂದಲೇ ನಿರ್ಮಿಸಿದ ಬೃಹತ್‌ ಬಾವಿ ಇದೀಗ ದುರಸ್ಥಿಗೊಂಡಿದ್ದು ಅದರ ಸುತ್ತಲೂ ಉದ್ಯಾನ ನಿರ್ಮಾಣಗೊಂಡಿದೆ.

ದೇವಸ್ಥಾನದ ವಾಸ್ತುಶಿಲ್ಪವು ನಕ್ಷತ್ರಾಕಾರದಲ್ಲಿ ಇದ್ದು ಮೇಲ್ಚಾವಣಿಯಲ್ಲಿ ಭೈರವಿ, ಶಿವ, ವಿಷ್ಣು, ಶಕ್ತಿ, ನಟರಾಜ ಗಣೇಶ, ವೀರಭದ್ರ, ವೇಣುಗೋಪಾಲರ ಶಿಲ್ಪಗಳನ್ನು ಅಲ್ಲಲ್ಲಿ ಕೆತ್ತಲಾಗಿದೆ. ಶಿಖರದ ದಕ್ಷಿಣ ಭಾಗದಲ್ಲಿ ಬ್ರಹ್ಮ, ಯಕ್ಷರನ್ನು, ಪಶ್ಚಿಮ ಭಾಗದಲ್ಲಿ ಶಕ್ತಿ-ಸರಸ್ವತಿಯರನ್ನು, ಉತ್ತರದಲ್ಲಿ ಶಿವನ ಮೂರ್ತಿಗಳು ಕಂಡು ಬರುತ್ತವೆ.

ಆಗಬೇಕಾದ ಕೆಲಸಗಳು: ದೇವಸ್ಥಾನದ ಉತ್ತರ ಭಾಗದ ಪ್ರವೇಶ ದ್ವಾರ ಸಂಪೂರ್ಣ ಕುಸಿದು ಬೀಳುತ್ತಿದೆ. ಅದರ ಜೀರ್ಣೋದ್ಧಾರಕ್ಕೆ ಈವರೆಗಾದರೂ ಪ್ರಯನತ್ನಗಳು ನಡೆದಿಲ್ಲ. ಮತ್ತು ಪ್ರತಿದಿನ ಬೇರೆ ಬೇರೆ ಊರುಗಳಿಂದ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಅವರಿಗಾಗಿ ಒಂದು ಶೌಚಾಲಯ ಕೂಡ ಇಲ್ಲ. ಇದರಿಂದಾಗಿ ಭಕ್ತರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಆದಷ್ಟು ಬೇಗನೇ ಶೌಚಾಲಯ ನಿರ್ಮಿಸುವ ಅಗತ್ಯ ಇದೆ.

ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಗರ್ಭ ಗುಡಿಯಲ್ಲಿನ ನಂದಿರೂಢ ಶಿವ -ಪಾರ್ವತಿಯರ ಮೂರ್ತಿ
ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಗರ್ಭ ಗುಡಿಯಲ್ಲಿನ ನಂದಿರೂಢ ಶಿವ -ಪಾರ್ವತಿಯರ ಮೂರ್ತಿ
ಸೂರ್ಯರಶ್ಮಿ ಸ್ಪರ್ಶ
ಪ್ರತಿವರ್ಷ ವೈಶಾಖ ಕೃಷ್ಣ ಪಕ್ಷದ ಶುಭದಿನದಂದು ಸೂರ್ಯೋದಯದ ಹೊಂಬಣ್ಣದ ಕಿರಣಗಳು ನೇರವಾಗಿ ಪೂರ್ವಾಭಿಮುಖವಾಗಿರುವ ಸೋಮನಾಥನ ಮೇಲೆ ಬೀಳುವುದು ಇಲ್ಲಿನ ವಿಶೇಷವಾಗಿದೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುವ ಸಂದರ್ಭದಲ್ಲಿ ಈ ಅದ್ಭುತ ಜರುಗುತ್ತದೆ. ಮೇ 25ರಿಂದ 30ರವರೆಗೂ ಪ್ರತಿದಿನ ಮುಂಜಾನೆ 5.58ಕ್ಕೆ ಸೂರ್ಯನ ನೇರ ಕಿರಣಗಳು ಬೀಳುವ ಸುಂದರ ದೃಶ್ಯವನ್ನು ಈಗಲೂ ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT