ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಸ್ಪಟಿಕದಂತೆ ಶುಭ್ರವಾದ ತುಂಗೆಯ ಒಡಲು..!

ಗದಗ–ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ಜನರ ದಾಹ ತಣಿಸುವ ಜೀವನದಿ
Last Updated 29 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ಒಂದು ಬದಿಯಿಂದ ಹರಿದುಹೋಗಿರುವ ತುಂಗಭದ್ರಾ ನದಿ ನೀರು ಈಗ ಸ್ಪಟಿಕದಂತೆ ಶುಭ್ರವಾಗಿದೆ. ನದಿ ನೀರಿನ ತಳದಲ್ಲಿರುವ ಬೆಣಚು ಕಲ್ಲು, ಮರಳು, ಕಪ್ಪೆಚಿಪ್ಪು, ಶಂಖ ಮೊದಲಾದವುಗಳು ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸುವಷ್ಟರ ಮಟ್ಟಿಗೆ ನೀರು ಸ್ವಚ್ಛವಾಗಿದೆ.

ಲಾಕ್‌ಡೌನ್‌ ಘೋಷಣೆಯಾದ ನಂತರ, ತುಂಗಭದ್ರಾ ನದಿದಂಡೆಯ ಮೇಲಿದ್ದ ಹಲವು ಕಾರ್ಖಾನೆಗಳು ಬಾಗಿಲು ಮುಚ್ಚಿದ್ದವು. ಮರಳು ಅಕ್ರಮ ಸಾಗಾಣೆಗೆ ಕಡಿವಾಣ ಬಿದ್ದಿತ್ತು. ನದಿ ದಂಡೆಯ ಮೇಲಿನ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಒಂದೂವರೆ ತಿಂಗಳು ತುಂಗಭದ್ರಾ ನದಿಯಲ್ಲಿ ಮಾನವ ಹಸ್ತಕ್ಷೇಪ ಸಂಪೂರ್ಣ ನಿಂತಿದ್ದರಿಂದ, ಈಗ ನದಿ ನೀರು ಸ್ವಚ್ಛ, ಶುಭ್ರವಾಗಿದೆ. ಜುಳು ಜುಳು ಹರಿಯುವ ನೀರಿನಲ್ಲಿ ಮೀನುಗಳು, ಇತರೆ ಜಲಚರಗಳು ನೆಮ್ಮದಿಯಿಂದ ಉಸಿರಾಡುತ್ತಿವೆ.

ಪ್ರತಿ ವರ್ಷದ ಬೇಸಿಗೆಯಲ್ಲಿ ತುಂಗಭದ್ರಾ ಒಡಲು ಬತ್ತುತ್ತದೆ. ಸಂಕ್ರಾಂತಿಯ ನಂತರ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ನದಿಪಾತ್ರದುದ್ದಕ್ಕೂ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತದೆ.ನದಿಯ ಒಡಲು ಬಗೆದು ಮರಳು ತೆಗೆಯುವುದರಿಂದ, ದೊಡ್ಡ ದೊಡ್ಡ ಗುಂಡಿಗಳು ಕಾಣಿಸುತ್ತಿದ್ದವು. ಮಳೆಗಾಲದಲ್ಲಿ ಮಳೆಯಾದರೂ, ಈ ಗುಂಡಿಗಳು ಭರ್ತಿಯಾಗಿ, ನೀರು ಮುಂದಕ್ಕೆ ಹರಿಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ನದಿ ನೀರೂ ಕಲುಷಿತಗೊಳ್ಳುತ್ತಿತ್ತು. ಜಲಚರಗಳಿಗೂ ಇದು ಕುತ್ತಾಗಿತ್ತು.

ಈ ಬಾರಿ ಬೇಸಿಯಲ್ಲಿ ನದಿಪಾತ್ರದಲ್ಲಿ ಜೆಸಿಬಿ, ಟ್ರ್ಯಾಕ್ಟರ್‌ಗಳ ಓಡಾಟ ಕಂಡುಬಂದಿಲ್ಲ. ಹಾವೇರಿ, ಹರಿಹರ ಭಾಗಗಳಲ್ಲಿದ್ದ ಕೈಗಾರಿಕೆ ಘಟಕಗಳಿಂದ ನದಿಯನ್ನು ಸೇರುತ್ತಿದ್ದ ಮಲಿನ ನೀರು ನಿಂತಿದೆ. ಹೀಗಾಗಿ ತುಂಗಭದ್ರಾ ನದಿಯ ನೀರು ಕನ್ನಡಿಯಂತೆ ಸ್ವಚ್ಛವಾಗಿದೆ.

ಕಳೆದ ಮುಂಗಾರು ಮತ್ತು ಮುಂಗಾರು ನಂತರದಲ್ಲಿ ಉತ್ತಮ ಮಳೆಯಾದ್ದರಿಂದ, ತಾಲ್ಲೂಕಿನ ಹಮ್ಮಿಗೆಯಲ್ಲಿ ತುಂಗಭದ್ರಾ ನದಿಗೆ ಅಡ್ಡವಾಗಿ ನಿರ್ಮಿಸಿರುವ ಸಿಂಗಟಾಲೂರು ಏತನೀರಾವರಿ ಯೋಜನೆಯ ಬ್ಯಾರೇಜ್‌ ಎರಡು ಬಾರಿ ಸಂಪೂರ್ಣ ಭರ್ತಿಯಾಗಿತ್ತು. ಈಗಲೂ ನದಿಯಲ್ಲಿ ನೀರು ಹರಿಯುತ್ತಿದೆ. ಸ್ವಚ್ಛವಾಗಿ, ಸುಂದರವಾಗಿ ಹರಿಯುತ್ತಾ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.

‘ಒಂದು ತಿಂಗಳಿನಿಂದ ತುಂಗಭದ್ರಾ ನದಿಯಲ್ಲಿ ಮರಳು ಗಣಿಗಾರಿಕೆ ನಿಂತಿದೆ. ಇದರಿಂದ ನದಿಯಲ್ಲಿ ಸದಾ ಸ್ವಚ್ಛವಾದ ನೀರು ಹರಿಯುತ್ತಿದೆ’ ಎನ್ನುತ್ತಾರೆ ನದಿ ದಂಡೆಯ ಗ್ರಾಮವಾದ ಹಮ್ಮಿಗೆಯ ನಿವಾಸಿ ಶಂಕ್ರಪ್ಪ ಕರ್ಜಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT