ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ವಿತರಣೆಯಲ್ಲಿ ಲೋಪ ಸಲ್ಲದು

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ್‌ ಕತ್ತಿ
Last Updated 27 ಆಗಸ್ಟ್ 2022, 3:47 IST
ಅಕ್ಷರ ಗಾತ್ರ

ಗದಗ: ‘ಬಡಜನರಿಗೆ ಆಹಾರಧಾನ್ಯ ವಿತರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ಕ್ರಮವಹಿಸಬೇಕು. ಸರ್ಕಾರದ ನಿರ್ದೇಶನದನ್ವಯ ಅರ್ಹರಿಗೆ ನಿಗದಿತ ಪ್ರಮಾಣದ ಆಹಾರಧಾನ್ಯವನ್ನು ತಪ್ಪದೇ ವಿತರಿಸಬೇಕು’ ಎಂದು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ್‌ ಕತ್ತಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಈವರೆಗೆ ಶೇ 93ರಷ್ಟು ಇ- ಕೆವೈಸಿ ಪೂರ್ಣಗೊಳಿಸಲಾಗಿದ್ದು, ಜಿಲ್ಲೆಗೆ ನಿಗದಿಪಡಿಸಿದ ಗುರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ ವಿತರಿಸಲಾಗಿರುವ ಬಿಪಿಎಲ್ ಕಾರ್ಡ್‌ಗಳ ಫಲಾನುಭವಿಗಳ ಸಮೀಕ್ಷೆ ನಡೆಸಬೇಕು. ಮೂರು ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿ ಭೂಮಿ, ಸರ್ಕಾರಿ ನೌಕರಿ ಹಾಗೂ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅಂತವರ ಪಡಿತರ ಚೀಟಿಗಳನ್ನು ರದ್ದುಗೊಳಿಸಬೇಕು’ ಎಂದು ಸೂಚಿಸಿದರು.

‘ಪೆಟ್ರೋಲ್ ಬಂಕ್‌ಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪೆಟ್ರೋಲ್‌ ತುಂಬಿಸುವ ಗನ್‍ಗಳನ್ನು ಪರಿಶೀಲಿಸಬೇಕು. ಇದರಲ್ಲಿ ಲೋಪ ಕಂಡುಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸಬೇಕು’ ಎಂದು ಸೂಚಿಸಿದರು.

‘ಅರಣ್ಯ ಇಲಾಖೆ ವತಿಯಿಂದ ನೆಡಲಾಗುವ ಮರಗಳ ಪೋಷಣೆಗೆ ಹೆಚ್ಚಿನ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಹಸಿರೀಕರಣಕ್ಕೆ ಒತ್ತು ನೀಡಿ, ಬೇಡಿಕೆಗೆ ಅನುಗುಣವಾಗಿ ಸಸಿಗಳನ್ನು ವಿತರಿಸಬೇಕು’ ಎಂದು ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಗಂಗಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ 345 ನ್ಯಾಯಬೆಲೆ ಅಂಗಡಿಗಳು, 7 ಉಗ್ರಾಣಗಳು, 20 ಗ್ಯಾಸ್‌ ಏಜೆನ್ಸಿಗಳು ಹಾಗೂ 115 ಪೆಟ್ರೋಲ್‌ ಬಂಕ್‌ಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 2,92,214 ಪಡಿತರಚೀಟಿಗಳನ್ನು ವಿತರಿಸಲಾಗಿದ್ದು ಇದರಲ್ಲಿ 28,669 ಅಂತ್ಯೋದಯ, 2,25,734 ಬಿಪಿಎಲ್ ಹಾಗೂ 37,811 ಎಪಿಎಲ್ ಕಾರ್ಡ್‌ಗಳಲ್ಲಿ ಒಟ್ಟು 9,62,650 ಸದಸ್ಯರು ಪಡಿತರ ಪಡೆಯುತ್ತಿದ್ದಾರೆ. 136 ಹೊಸ ನ್ಯಾಯಬೆಲೆ ಅಂಗಡಿಗಳಿಗೆ ಬೇಡಿಕೆ ಇದ್ದು, 261 ಅರ್ಜಿಗಳು ಸ್ವೀಕೃತಗೊಂಡಿವೆ’ ಎಂದು ತಿಳಿಸಿದರು.

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಡಿಸಿಎಫ್‌ ದೀಪಿಕಾ ಬಾಜಪೇಯಿ, ಪ್ರಭಾರ ಎಡಿಸಿ ಅನ್ನಪೂರ್ಣ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ಇದ್ದರು.

‘ಅಕ್ಕಿ ಅಕ್ರಮ ಸಾಗಣೆ ದಂಧೆ; ಸಂಪೂರ್ಣ ಮಟ್ಟಹಾಕಿ’

‘ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ‌ಸಾಗಣೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದನ್ನು ಮಟ್ಟಹಾಕಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಸೂಚಿಸಿದರು.

‘ಅಕ್ರಮ ದಂಧೆಕೋರರ ಕುರಿತು ಮಾಹಿತಿ ಸಂಗ್ರಹಿಸಿ, ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದಾಗ ತಕ್ಷಣ ಕಾರ್ಯಾಚರಣೆ ನಡೆಸಬೇಕು. ದಾಳಿ ವೇಳೆ ಸ್ಥಳೀಯ ಪೊಲೀಸರ ಸಹಕಾರ ಪಡೆಯುವ ಮೂಲಕ ಅಕ್ರಮ ಅಕ್ಕಿ ಮಾರಾಟ ದಂಧೆಯನ್ನು ಸಂಪೂರ್ಣ ನಾಶ ಮಾಡಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿನ ವೇ ಬ್ರಿಡ್ಜ್‌ಗಳ ಕುರಿತು ದೂರುಗಳು ಬಂದಿದ್ದು, ಈ ಕುರಿತು ಪರಿಶೀಲಿಸಿ ಅಗತ್ಯದ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಖಾಲಿ ಹುದ್ದೆಗಳ ಭರ್ತಿಗೆ ಕ್ರಮವಹಿಸಿ: ಸಂಕನೂರ

‘ಆಹಾರ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ ಒತ್ತಾಯಿಸಿದರು.

‘ಕಪ್ಪತಗುಡ್ಡದಲ್ಲಿ ಅನೇಕ ಔಷಧೀಯ ಸಸ್ಯಗಳಿದ್ದು, ಬೇಸಿಗೆಯಲ್ಲಿ ಮೇಲಿಂದ ಮೇಲೆ ಬೆಂಕಿ ಬೀಳುತ್ತಿದೆ. ಇದರಿಂದಾಗಿ ಅಮೂಲ್ಯ ಔಷಧೀಯ ಸಸ್ಯ ಸಂಪತ್ತು ನಾಶವಾಗುತ್ತಿದೆ. ಹಾಗಾಗಿ, ಕಪ್ಪತಗುಡ್ಡದಲ್ಲಿರುವ ಔಷಧೀಯ ಸಸ್ಯಗಳನ್ನು ಪ್ರತ್ಯೇಕವಾಗಿ ಪೋಷಣೆ ಮಾಡಲು ಅಗತ್ಯದ ಕ್ರಮ ಕೈಗೊಳ್ಳಬೇಕು. ಜತೆಗೆ ಕಪ್ಪತಗುಡ್ಡದಲ್ಲಿ ಸಂಶೋಧನಾ ಕೇಂದ್ರ ತೆರೆಯಲು ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT