ಭಾನುವಾರ, ಡಿಸೆಂಬರ್ 5, 2021
25 °C
ಯಂಗ್‌ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಆರ್‌.ಗೋವಿಂದಗೌಡ್ರ

ಭಿಕ್ಷಾಟನೆ ಮಾಡಿ ರಸ್ತೆ ದುರಸ್ತಿಗೆ ಹಣ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಲೋಕೋಪಯೋಗಿ ಇಲಾಖೆ ಸಚಿವರು ಜಿಲ್ಲೆಯವರೇ ಆಗಿದ್ದದು ಕೂಡ ಗದಗ- ಬೆಟಗೇರಿಯ ಒಳರಸ್ತೆಗಳು ಒತ್ತಟ್ಟಿಗಿರಲಿ, ಮುಖ್ಯರಸ್ತೆಗಳೂ ಮಳೆ ಬಂದಾಗ ಕೆರೆಯಂತಾಗುತ್ತವೆ. ತಾತ್ಕಾಲಿಕ ದುರಸ್ತಿಗೂ ಕ್ರಮವಹಿಸಿಲ್ಲ. ಹೀಗಾಗಿ ಅವಳಿ ನಗರದ ಮುಖ್ಯರಸ್ತೆಗಳ ತಗ್ಗು-ದಿಣ್ಣೆ ಮುಚ್ಚಿಸಲು ಭಿಕ್ಷೆ ಎತ್ತಿ ಹಣ ಸಂಗ್ರಹಿಸಲು ಮುಂದಾಗಿದ್ದೇವೆ’ ಎಂದು ಯಂಗ್‌ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಆರ್‌.ಗೋವಿಂದಗೌಡ್ರ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನ. 25ರಿಂದ 28ರವರೆಗೆ ನಾಲ್ಕು ದಿನ ನಗರದಲ್ಲಿ ಭಿಕ್ಷಾಟನೆ ಮಾಡಿ, ಬಂದ ಹಣದಿಂದಲೇ ರಸ್ತೆ ದುರಸ್ತಿ ಮಾಡಿಸುತ್ತೇವೆ. ಮೊದಲ ಹಂತದಲ್ಲಿ ಭೂಮರಡ್ಡಿ ವೃತ್ತದಿಂದ ಹೊಸ ಬಸ್ ನಿಲ್ದಾಣವರೆಗೆ ದುರಸ್ತಿ ಮಾಡುತ್ತಿದ್ದು, ಸಾರ್ವಜನಿಕರು ಕೈ ಜೋಡಿಸಬೇಕು’ ಎಂದು ಅವರು ಮನವಿ ಮಾಡಿದರು.

‘ನಗರಸಭೆಯಲ್ಲಿ ಪೂರ್ಣ ಪ್ರಮಾಣದ ಪೌರಾಯುಕ್ತರಿಲ್ಲ. ಕಂದಾಯ ಅಧಿಕಾರಿ, ಎಇಇ ಸಹ ಇಲ್ಲ. ರಸ್ತೆ ದುರಸ್ತಿ ಬಗ್ಗೆ ಕೇಳಿದರೆ ಅನುದಾನ ಇಲ್ಲ ಎಂದು ಪ್ರಭಾರ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾರೆ’ ಎಂದು ಹೇಳಿದರು.

‘ಕಳೆದ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗದಗ ನಗರಕ್ಕೆ ಬಂದಿದ್ದಾಗ ಕಾಟಾಚಾರಕ್ಕೆ ರಸ್ತೆಗೆ ತೇಪೆ ಹಚ್ಚಿ, ಕೈ ತೊಳೆದುಕೊಂಡಿದ್ದರು. ಆದರೆ, ಹೊಸ ಬಸ್ ನಿಲ್ದಾಣದಿಂದ ಪಾಲಾಬಾದಾಮಿ ರಸ್ತೆಯ ಮೂಲಕ ರಸ್ತೆಯಲ್ಲಿ ಓಡಾಡಲೂ ಆಗುತ್ತಿಲ್ಲ. ಮಳೆ ಬಂದಾಗ ಹಳ್ಳ ದಿಣ್ಣೆಗಳು ಕಾಣಿಸದೆ ಸಾಕಷ್ಟು ಮಂದಿ ಬೈಕ್ ಸವಾರರು ಬಿದ್ದು, ಗಾಯ ಮಾಡಿಕೊಂಡಿದ್ದಾರೆ. ಆದರೂ ರಸ್ತೆ ದುರಸ್ತಿಗೆ ಕ್ರಮವಹಿಸಿಲ್ಲ’ ಎಂದು ಅವರು ಕಿಡಿಕಾರಿದರು.

ಗುರುವಾರ ಬೆಳಿಗ್ಗೆ 11ಕ್ಕೆ ನಗರದ ಹತ್ತಿಕಾಳ ಕೂಟದಿಂದ ಭಿಕ್ಷಾಟನೆ ನಡೆಯಲಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. ಮುಖ್ಯರಸ್ತೆಗಳ ದುಸ್ಥಿತಿ ಬಗ್ಗೆ ಸಾರ್ವಜನಿಕರು ವಾಟ್ಸ್‌ಆ್ಯಪ್‌ (96205 73777) ಮಾಡಿದರೆ ಅದರ ಬಗ್ಗೆಯೂ ಗಮನ ಹರಿಸುತ್ತೇವೆ ಎಂದು ಹೇಳಿದರು.

ಯಂಗ್ ಇಂಡಿಯಾ ಪರಿವಾರ ಸಂಘಟನೆಯ ಅಧ್ಯಕ್ಷ ರವಿ ಕರಿಬಸಣ್ಣವರ, ಅಮರೇಶ ಅಂಗಡಿ, ಖಾಜಾಸಾಬ ಸೊನ್ನದ, ಮಹೇಶ ಮುತಗಾರ, ಹನಮಂತ ಕೊಳಗನವರ, ರಾಜೇಶ ಜುಮ್ಮನಾಳ ಇದ್ದರು.

‘ತೆರಿಗೆ ತುಂಬದಂತೆ ತಿಳಿವಳಿಕೆ’

‘ಆಟೊದವರು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊಸ ಬಸ್ ನಿಲ್ದಾಣ ಮಾರ್ಗದಲ್ಲಿ ಹೋಗಿ ಬರುವಾಗ ರಿಕ್ಷಾದ ಯಾವುದಾದರೊಂದು ಭಾಗಕ್ಕೆ ಹಾನಿಯಾಗುತ್ತದೆ. ಮೈಲೇಜ್ ಸಹ ಸಿಗುವುದಿಲ್ಲ. ಬಾಡಿಗೆ ಹಣವನ್ನೆಲ್ಲ ರಿಪೇರಿಗೆ ಇಡುವ ಪರಿಸ್ಥಿತಿ ಇದೆ’ ಎಂದು ವೆಂಕನಗೌಡ ಆರ್‌.ಗೋವಿಂದಗೌಡ್ರ ಹೇಳಿದರು.

‘ಆದ್ದರಿಂದ, ನಗರಸಭೆಯವರು ರಸ್ತೆ ದುರಸ್ತಿ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದರೆ ನಗರಸಭೆಗೆ ತೆರಿಗೆ ತುಂಬದಂತೆ ಜನರಿಗೆ ತಿಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಭಿಕ್ಷಾಟನೆಯಿಂದ ಬಂದ ಹಣದಲ್ಲಿ ಮೊದಲು ಭೂಮರಡ್ಡಿ ವೃತ್ತದಿಂದ ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿನ ಹಳ್ಳ ದಿಣ್ಣೆಗಳನ್ನು ಮುಚ್ಚಲಾಗುವುದು

ವೆಂಕನಗೌಡಗೋವಿಂದಗೌಡ್ರ, ಯಂಗ್‌ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.