ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತಹೀನತೆ ನಿವಾರಣಾ ಕಾರ್ಯಕ್ರಮ

Last Updated 3 ಡಿಸೆಂಬರ್ 2011, 10:35 IST
ಅಕ್ಷರ ಗಾತ್ರ

ಗದಗ: ಮಕ್ಕಳಲ್ಲಿ ರಕ್ತಹೀನತೆ ನಿವಾರಣೆ ಮಾಡಲು, ಆಯುರ್ವೇದ ಹಾಗೂ ಅಲೋಪತಿ ಔಷಧಿಯ ಪ್ರಭಾವ ಮತ್ತು ಹೋಲಿಕೆ ಅರಿಯುವ ದೃಷ್ಟಿಯಿಂದ `ರಕ್ತಹೀನತೆ ನಿವಾರಣಾ ಕಾರ್ಯಕ್ರಮ~ ಯೋಜನೆಯು ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿ ಅನುಷ್ಠಾನಗೊಳ್ಳುತ್ತಿದೆ.

ಆಯುಷ್ ಇಲಾಖೆಯ ಪೈಲಟ್ ಯೋಜನೆಯಾದ ಈ ಕಾರ್ಯಕ್ರಮವೂ ರಾಜ್ಯದ ಬೆಂಗಳೂರು, ಮೈಸೂರು, ಬಳ್ಳಾರಿ ಹಾಗೂ ಹಾಸನ ಜಿಲ್ಲೆಗಳಲ್ಲೂ ಅನುಷ್ಠಾನವಾಗುತ್ತಿದೆ. ನಿಗದಿಪಡಿಸಿದ ಜಿಲ್ಲೆಯಲ್ಲಿ ಈ ಯೋಜನೆಗೆ ಒಂದು ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಮುಂಡರಗಿ ತಾಲ್ಲೂಕಿನಲ್ಲಿ ಕಾರ್ಯಕ್ರಮ ಪ್ರಾರಂಭಿಸಲು ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳ ಎರಡು ಸುತ್ತಿನ ಸಭೆ ನಡೆದಿದೆ. 6 ತಿಂಗಳ ಅವಧಿಯ ಈ ಯೋಜನೆಯ ವ್ಯಾಪ್ತಿಗೆ ತಾಲ್ಲೂಕಿನ 10 ಸರ್ಕಾರಿ ಪ್ರೌಢಶಾಲೆಯನ್ನು ಒಳಪಡಿಸಿಕೊಳ್ಳಲಾಗಿದೆ. ಇನ್ನು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಯೋಜನೆಯಲ್ಲಿ ಭಾಗವಹಿಸುವ ವೈದ್ಯರು, ನರ್ಸ್, ತಾಂತ್ರಿಕ ಸಿಬ್ಬಂದಿಗಳಿಗೆ ತರಬೇತಿ ನೀಡಬೇಕಾಗಿದೆ.

ಯೋಜನೆಗೆ ಒಳಪಡುವ 10 ಪ್ರೌಢಶಾಲೆಗಳಲ್ಲಿ ವೈದ್ಯರು ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲ ಶಾಲೆಗಳಿಂದ ಒಟ್ಟು 600  ವಿದ್ಯಾರ್ಥಿಗಳನ್ನು ತಗೆದುಕೊಳ್ಳಲು ಅವಕಾಶ ಇದೆ. ಇವರಲ್ಲಿ 300 ವಿದ್ಯಾರ್ಥಿಗಳಿಗೆ ಆಯುರ್ವೇದ ಔಷಧಿ, ಉಳಿದ 300 ಜನರಿಗೆ ಅಲೋಪತಿ ಔಷಧಿ ನೀಡಲಾಗುತ್ತದೆ.

ಆಯುರ್ವೇದ ಔಷಧಿಯ ಗುಂಪಿನ ವಿದ್ಯಾರ್ಥಿಗಳಿಗೆ ಮೊದಲ 5 ದಿನ, ದಿನಕ್ಕೆ ಎರಡು ಬಾರಿಯಂತೆ `ಕ್ರಿಮಿಘ್ನವಟಿ~ ಔಷಧಿ ನೀಡಲಾಗುತ್ತದೆ. ನಂತರದ ದಿನದಲ್ಲಿ `ಧಾತ್ರಿಲೋಹ~ವನ್ನು ದಿನಕ್ಕೆ ಎರಡರಂತೆ ನೀಡಲಾಗುತ್ತದೆ. ಇದೇ ರೀತಿ ಅಲೋಪತಿ ಗುಂಪಿನ ವಿದ್ಯಾರ್ಥಿಗಳಿಗೆ ಮೊದಲ ದಿನ `ಅಲ್‌ಬೆಂಡಾ ಜೋಲ್~ ಮಾತ್ರೆಯನ್ನು ಕೊಡಲಾಗುತ್ತದೆ.
 
ನಂತರದ ದಿನ, ದಿನಕ್ಕೆ ಒಂದರಂತೆ `ಐಎಫ್‌ಎಸ್~ ಮಾತ್ರೆಯನ್ನು ನೀಡಲಾಗುತ್ತದೆ ಎಂದು ಕಾರ್ಯಕ್ರಮದ ಮುಖ್ಯಸ್ಥ ಡಾ.ಜಿ.ಬಿ.ಪಾಟೀಲ `ಪ್ರಜಾವಾಣಿ~ಗೆ ತಿಳಿಸಿದರು. ಪ್ರತಿ ತಿಂಗಳು ವಿದ್ಯಾರ್ಥಿಗಳ ರಕ್ತ ಪರೀಕ್ಷೆ ಮಾಡಲಾಗುತ್ತದೆ.

ಮಕ್ಕಳಲ್ಲಿ ಯಾವ ರೀತಿ ಬದಲಾವಣೆಯಾಗುತ್ತಿದೆ, ಹಿಮೋಗ್ಲೋಬಿನ್ ಪ್ರಮಾಣ ಯಾವ ರೀತಿ ಹೆಚ್ಚಾಗುತ್ತಿದೆ ಎನ್ನುವುದನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಹೀಗೆ ಆರು ತಿಂಗಳವರೆಗೆ ಆಧ್ಯಯನ ನಡೆಸಿ, ಕೊನೆಗೆ ಮಕ್ಕಳಲ್ಲಿ ರಕ್ತಹೀನತೆ ನಿವಾರಣೆಗೆ ಯಾವ ರೀತಿ ಕಾರ್ಯಕ್ರಮ ಕೈಗೊಂಡರೆ ಪರಿಣಾಮಕಾರಿಯಾಗುತ್ತದೆ ಎನ್ನುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಿ.ಬಿ.ಚನ್ನಶೆಟ್ಟಿ ತಿಳಿಸಿದರು.

ಯೋಜನೆಯ ಉದ್ದೇಶ ಕೇವಲ ಔಷಧಿಯ ಹೋಲಿಕೆ ಮಾತ್ರವಲ್ಲದೆ ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಪ್ರಭಾವ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎನ್ನುವುದನ್ನು ತಿಳಿಯಲಾಗುತ್ತದೆ. 10ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ಎಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಜಿ.ಪಾಟೀಲ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT