ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಂದ ಮಕ್ಕಳ ಮನೆ-ಮನೆಗೆ ಭೇಟಿ

Last Updated 20 ಸೆಪ್ಟೆಂಬರ್ 2011, 8:05 IST
ಅಕ್ಷರ ಗಾತ್ರ

 ಮುಂಡರಗಿ: ಸರಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಶಿಕ್ಷಕರು ಶಾಲಾ ಅವಧಿಯಲ್ಲಿ ತಮ್ಮ ತರಗತಿಯ ಮಕ್ಕಳಿಗೆ ಪಾಠ ಹೇಳಿ, ನೋಟ್ಸ್ ಕೊಟ್ಟುಬಿಟ್ಟರೆ ತಮ್ಮ ಕೆಲಸವಾಯಿತು ಎಂದು ಭಾವಿಸುತ್ತಾರೆ. ಅಂಥವರ ಮಧ್ಯದಲ್ಲಿ, `ಕಲಿಕೆ ಎನ್ನುವುದು ಕೇವಲ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ವ್ಯವಹಾರವಲ್ಲ, ಅದರಲ್ಲಿ ಪಾಲಕರ ಪಾತ್ರವೂ ಬಹುಮುಖ್ಯವಾಗಿರುತ್ತದೆ~ ಎನ್ನುವುದನ್ನು ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ವೀರಭದ್ರೇಶ್ವರ ಸರಕಾರಿ ಪ್ರೌಢಶಾಲೆಯ ಸಿಬ್ಬಂದಿ ತೋರಿಸಿದ್ದಾರೆ.

 ಶಿಕ್ಷಕ -ಪಾಲಕ - ಬಾಲಕ(ಕಿ)ರ ನಡುವೆ ನೇರ ಸಂಪರ್ಕ ಕಲ್ಪಿಸಿ ಕಲಿಕೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ಶಾಲಾ ಮುಖ್ಯಶಿಕ್ಷಕ ಗಂಗಾಧರ ಅಣ್ಣಿಗೇರಿ ಹಾಗೂ ಸಿಬ್ಬಂದಿ ಶುಕ್ರವಾರದಿಂದ `ಮಕ್ಕಳ ಮನೆ ಮನೆ ಭೇಟಿ~ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

 ತಾಲ್ಲೂಕಿನ ಶಿಂಗಟಾಲೂರ ಈರಣ್ಣನ ಗುಡ್ಡದ ಹೊರವಲಯದಲ್ಲಿರುವ ವೀರಭದ್ರೇಶ್ವರ ಸರಕಾರಿ ಪ್ರೌಢಶಾಲೆಗೆ ಗುಮ್ಮಗೋಳ, ಹಮ್ಮಿಗಿ, ಶಿಂಗಟಾಲೂರ, ಶೀರನಹಳ್ಳಿ, ಗಂಗಾಪುರ, ಬೀಡನಾಳ ಮೊದಲಾದ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಶಾಲೆಯು ಭಾಗಶಃ ಅಡವಿಯಲ್ಲಿ ಇರುವುದರಿಂದ ಮತ್ತು ಬಹುತೇಕ ಪಾಲಕರು ಕೃಷಿ ಹಾಗೂ ಕೂಲಿ ಕಾರ್ಮಿಕರಾಗಿರುವುದರಿಂದ ಅವರು ಶಾಲೆಗೆ ಭೇಟಿ ನೀಡುವುದು ಅಪರೂಪ. ಆ ಕಾರಣದಿಂದ ತಮ್ಮ ಮಗುವಿನ ಕಲಿಕೆ ಕುರಿತಂತೆ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

 ತಮ್ಮ ಮಕ್ಕಳು ತಪ್ಪದೇ ಶಾಲೆಗೆ ಹೋಗಿ ಬರುತ್ತಾರೆ ಎನ್ನುವುದನ್ನು ಬಿಟ್ಟರೆ ತಮ್ಮ ಮಗು ಯಾವ ವಿಷಯದಲ್ಲಿ ಹಿಂದುಳಿದಿದ್ದಾನೆ. ಯಾವ ವಿಷಯದಲ್ಲಿ ಮುಂದಿದ್ದಾನೆ? ಅದಕ್ಕೆ ಕಾರಣಗಳೇನು? ಎನ್ನುವುದನ್ನು ಕುರಿತು ಪಾಲಕರು ಚಿಂತಿಸುವುದಿಲ್ಲ. ಅದನ್ನೆಲ್ಲ ಅರಿತಿರುವ ಶಾಲಾ ಸಿಬ್ಬಂದಿ ಶಾಲಾ ಅವಧಿಗೆ ಮತ್ತು ಮಕ್ಕಳ ಪಾಠ ಪ್ರವಚನಕ್ಕೆ ಧಕ್ಕೆ ಬಾರದಂತೆ `ಮಕ್ಕಳ ಮನೆ ಮನೆ ಭೇಟಿ~ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 

 ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ತಲಾ ನಾಲ್ಕು ಜನ ಶಿಕ್ಷಕರ ತಂಡವನ್ನು ರಚಿಸಿಕೊಂಡು ಬೆಳಿಗ್ಗೆ 8ರಿಂದ 10ರವರೆಗೆ ಹಾಗೂ ಸಂಜೆ 5ರಿಂದ 6.30ಗಂಟೆಯವರೆಗೆ ಮಕ್ಕಳ ಮನೆ, ಮನೆಗಳಿಗೆ ಭೇಟಿ ನೀಡುತ್ತಾರೆ.

ಮಗು ಮತ್ತು ಪಾಲಕರ ಸಮಕ್ಷಮದಲ್ಲಿ ಮಗುವಿನ ಸಮಗ್ರ ಕಲಿಕೆಯ ಚಿತ್ರಣವನ್ನು ಪಾಲಕರೆದುರು ಬಿಡಿಸಿಡುತ್ತಾರೆ. ತಮ್ಮ ಮಗು ಯಾವ ವಿಷಯದಲ್ಲಿ ಹಿಂದುಳಿದಿದ್ದಾನೆ. ಅದನ್ನು ಸರಿಪಡಿಸುವ ಮಾರ್ಗ ಮೊದಲಾದವುಗಳ ಕುರಿತು ಪಾಲಕರಿಗೆ ವಿವರಣೆ ನೀಡುತ್ತಾರೆ. ಪಾಲಕರ ಹಾಗೂ ಶಿಕ್ಷಕರ ಎದುರಿನಲ್ಲಿಯೇ ಮಗುವಿನ ಕೌನ್ಸೆಲಿಂಗ್ ನಡೆಯುವುದರಿಂದ ಮಗುವಿನ ಕಲಿಕೆಯ ಸಮಗ್ರ ಚಿತ್ರಣ ಪಾಲಕರಿಗೆ ದೊರೆಯುತ್ತದೆ.

ಎರಡು ವರ್ಷಗಳ ಹಿಂದೆ ಕೇವಲ ಶೇ 46ರಷ್ಟಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ `ಮಕ್ಕಳ ಮನೆಮನೆ ಭೇಟಿ~ ಕಾರ್ಯಕ್ರಮದ ಫಲವಾಗಿ ಕಳೆದ ವರ್ಷದ ಫಲಿತಾಂಶ ಶೇ 82 ಆಗಿದೆ.  ಶಾಲಾ ಸಿಬ್ಬಂದಿ ಈ ವರ್ಷ ಶೇ 100ಫಲಿತಾಂಶ ನೀಡುವ ಗುರಿ ಹೊಂದಿದ್ದಾರೆ.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮುಖ್ಯ ಶಿಕ್ಷಕ ಗಂಗಾಧರ ಅಣ್ಣಿಗೇರಿ, `ಕಳೆದ ವರ್ಷ ನಾವು ಆರಂಭಿಸಿದ `ಮಕ್ಕಳ ಮನೆಮನೆ ಭೇಟಿ~ ಕಾರ್ಯಕ್ರಮಕ್ಕೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲ ಗ್ರಾಮಸ್ಥರು ಹಾಗೂ ಸಿಬ್ಬಂದಿ ಸಲಹೆ, ಸಹಕಾರದಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.
 
ಕಲಿಕೆ ಎನ್ನುವುದು ಕೇವಲ ಮಗು ಮತ್ತು ಶಿಕ್ಷಕರಿಗೆ ಮಾತ್ರ ಸಂಬಂಧಿಸಿದ್ದಲ್ಲ; ಪಾಲಕರ ಪಾತ್ರವೂ ಇರುತ್ತದೆ ಎಂಬುದನ್ನು ಪಾಲಕರು ಅರ್ಥಮಾಡಿಕೊಳ್ಳಬೇಕು. ಈ ಉದ್ದೇಶದಿಂದ `ಮಕ್ಕಳ ಮನೆಮನೆ ಭೇಟಿ~ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ~ ಎಂದು ತಿಳಿಸಿದರು.

ಮುಖ್ಯಶಿಕ್ಷಕ ಗಂಗಾಧರ ಅಣ್ಣಿಗೇರಿ, ಭಾಗ್ಯಲಕ್ಷ್ಮಿ ಇನಾಮತಿ, ಬಿ.ಜೆ. ಲಮಾಣಿ, ಮಹೇಶ ಮೇಟಿ, ಉಮೇಶ ಬೂದಿಹಾಳ, ಚಿದಾನಂದ ವಡ್ಡರ, ಟಿ.ಎಲ್. ಮಳವಳ್ಳಿ, ಉಮಾದೇವಿ ಎಸ್, ನಂದಾ ಪೈಲ್ ಮೊದಲಾದ ಶಿಕ್ಷಕ ಸಿಬ್ಬಂದಿ ವಿವಿಧ ಗ್ರಾಮಗಳ ಮನೆಮನೆ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT