ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ

7
ವಿವಿಧೆಡೆ ಮೂರ್ತಿಗಳ ಪ್ರತಿಷ್ಠಾಪನೆ: ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ

Published:
Updated:
Deccan Herald

ರಾಮನಗರ: ಗುರುವಾರದಿಂದ ಜಿಲ್ಲೆಯಾದ್ಯಂತ ಗಣೇಶ ಹಬ್ಬವನ್ನು ಸಂಭ್ರಮ, ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.

ನಗರ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ, ಗ್ರಾಮೀಣ ಪ್ರದೇಶದ ಕೇರಿಗಳಲ್ಲಿ, ಪಟ್ಟಣ ಪ್ರದೇಶಗಳಲ್ಲಿ ಹೀಗೆ ವಿವಿಧೆಡೆ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಗಳಿಗೆ ಪ್ರತಿನಿತ್ಯ ಬಗೆಬಗೆಯ ಪೂಜೆಗಳು ನಡೆಯುತ್ತಿವೆ. ನಾನಾ ಆಕಾರ, ಅವತಾರಗಳಲ್ಲಿ ಮೂಡಿಬಂದಿರುವ ಮೂರ್ತಿಗಳು ಎಲ್ಲರ ಗಮನ ಸೆಳೆಯುತ್ತಿವೆ.

ಕೆಲವು ಸಮಿತಿಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಬ್ಬಕ್ಕೆ ಮೆರಗು ತುಂಬುತ್ತಿವೆ.
ನಗರ ಹಾಗೂ ಗ್ರಾಮೀಣ ಪ್ರದೇಶದ ಮನೆ ಮನೆಗಳಲ್ಲಿ ಕೂಡ ವಿನಾಯಕನ ಆರಾಧನೆ ಬಹು ಜೋರಿನಿಂದಲೇ ನಡೆದಿದ್ದು, ಬಗೆ ಬಗೆಯಲ್ಲಿ ಮಂಟಪವನ್ನು ನಿರ್ಮಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮೋದಕ, ಕಡುಬು ಮಾಡಿ ನೈವೇದ್ಯ ಅರ್ಪಿಸುವ ಜತೆಗೆ ರಜೆಯ ಮೋಜಿನಲ್ಲಿ ಜನರು ಹಬ್ಬದೂಟವನ್ನು ಸವಿದರು.

ನಾಗರಿಕರು ರಾತ್ರಿ ವೇಳೆ ಕುಟುಂಬ ಸಮೇತ ನಗರದ ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ವೈವಿಧ್ಯಮಯ ಲಂಬೋದರ ಮೂರ್ತಿಗಳ ದರ್ಶನ ಪಡೆಯಲು ಪ್ರದಕ್ಷಿಣೆ ಹಾಕುತ್ತಿದ್ದರು. ಅನೇಕ ಗಣೇಶೋತ್ಸವ ಸಮಿತಿಗಳು ಪ್ರಸಾದದ ವ್ಯವಸ್ಥೆ ಮಾಡಿದ್ದವು.

ದರ್ಬಾರ್‌ ಗಣಪತಿ

ಶ್ರೀ ವಿದ್ಯಾಗಣಪತಿ ಸೇವಾ ಸಂಘದ ವತಿಯಿಂದ ಇಲ್ಲಿನ ಮುಖ್ಯರಸ್ತೆಯಲ್ಲಿ 51ನೇ ವರ್ಷದ ಅಂಗವಾಗಿ 7 ಅಡಿ ಅಗಲ, 11 ಅಡಿ ಎತ್ತರದ ‘ದರ್ಬಾರ್‌ ಗಣಪತಿ’ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಈ ಮೂರ್ತಿಗೆ ಪ್ರತಿ ದಿನ ಪ್ರಾಂತಃಕಾಲ ಪೂಜೆ, ಮಹಾಮಂಗಳಾರತಿ ನಡೆಯುತ್ತದೆ. ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ನಿತ್ಯ ಸಂಜೆ 7 ಗಂಟೆಗೆ ಸಂಗೀತ ಕಛೇರಿ, ಸುಗಮ ಸಂಗೀತ, ವೀಣಾ ವಾದನ, ಭಜನೆ ಭಕ್ತಿಗೀತೆಗಳು, ಕರ್ನಾಟಕ ಶಾಸ್ತ್ರೀಯ ಸಂಗೀತದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಗಜವದನ ಗಣಪ: ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಮತ್ತು ಅರಳೀಕಟ್ಟೆ ಗೆಳೆಯರ ಬಳಗದ ವತಿಯಿಂದ 34ನೇ ವರ್ಷದ ಅಂಗವಾಗಿ ಇಲ್ಲಿನ ಛತ್ರದ ಬೀದಿಯಲ್ಲಿ ‘ಗಜವದನ ಗಣಪತಿ’ಯನ್ನು ಪ್ರತಿಷ್ಠಾಪಿಸಲಾಗಿದೆ.

ಇಲ್ಲಿ ನಿರ್ಮಿಸಿರುವ ಮಂಟಪ ಮನಮೋಹಕವಾಗಿದ್ದು, ರಾತ್ರಿ ವೇಳೆ ಭಕ್ತರನ್ನು ಸೆಳೆಯುತ್ತಿದೆ. ಅದ್ಧೂರಿ ಅಲಂಕಾರವನ್ನು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !