ಶನಿವಾರ, ಫೆಬ್ರವರಿ 27, 2021
31 °C
ಅರಸೀಕೆರೆಯಲ್ಲಿ ನಡೆದ ಮಾದಿಗ ಚೈತನ್ಯ ರಥಯಾತ್ರೆ ಮತ್ತು ಪ್ರತಿಭಟನೆ

ಒಳ ಮೀಸಲಾತಿ ಜಾರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಸೀಕೆರೆ: ‘ರಾಜ್ಯದ ಮಾದಿಗ ಸಮುದಾಯಕ್ಕೆ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರ ಶೀಘ್ರವೇ ಒಳ ಮೀಸಲಾತಿ ಜಾರಿಗೊಳಿಸಬೇಕು’ ಎಂದು ಸದಾಶಿವ ವರದಿ ಜಾರಿ ಹೋರಾಟ ಸಮಿತಿ ಸಂಚಾಲಕ ಹೆಣ್ಣೂರು ಲಕ್ಷ್ಮಿನಾರಾಯಣ ಒತ್ತಾಯಿಸಿದರು.

ನಗರದ ಪಿ.ಪಿ.ವೃತ್ತದಲ್ಲಿ ಸೋಮವಾರ ನಡೆದ ಸದಾಶಿವ ಆಯೋಗದ ವರದಿ ಜಾರಿಗಾಗಿ ಮಾದಿಗ ವಿರಾಟ್ ಶಕ್ತಿ ಪ್ರದರ್ಶನ, ಮಾದಿಗ ಚೈತನ್ಯ ರಥಯಾತ್ರೆ ಮತ್ತು ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಸದಾಶಿವ ಆಯೋಗದ ವರದಿ ಜಾರಿಗೆ ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ, ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಸುಮಾರು 40 ವರ್ಷಗಳಿಂದ ಮಾದಿಗ ವಿರೋಧಿ ನೀತಿ ಅನುಸರಿಸುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಪಡೆಯಲು ಸಮುದಾಯಕ್ಕೆ ಒಳ ಮೀಸಲಾತಿ ಇಲ್ಲದೆ ಕೆಲಸ ಸಿಗುತ್ತಿಲ್ಲ. ರಾಜ್ಯದ ಸುಮಾರು 100 ವಿಧಾನಸಭಾ ಕ್ಷೇತ್ರಗಳಲ್ಲಿ ಮಾದಿಗರ ಮತಗಳೇ ನಿರ್ಣಾಯಕ. ಮಾದಿಗರು ಸಂಘಟಿತರಾಗಿ ಹೋರಾಟಕ್ಕೆ ಇಳಿದರೆ ತಡೆಯುವ ಶಕ್ತಿ ಯಾರಿಗೂ ಇಲ್ಲ. ವಿಧಾನಸಭಾ ಅಧಿವೇಶನದಲ್ಲಿ ಯಾವ ಶಾಸಕರು ಮಾದಿಗರ ಒಳ ಮೀಸಲಾತಿ ಬಗ್ಗೆ ಮಾತನಾಡುತ್ತಾರೋ ಅವರ ಪರವಾಗಿ ನಮ್ಮ ಸಮುದಾಯ ನಿಲ್ಲುತ್ತದೆ’ ಎಂದು ಹೇಳಿದರು.

ಕಡೂರು ಮಾರ್ಗವಾಗಿ ಅರಸೀಕೆರೆಗೆ ಬಂದ ಮಾದಿಗ ಚೈತನ್ಯ ರಥಯಾತ್ರೆಯನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ ನಗರ ಹೊರವಲಯದ ಜಾಜೂರು ಗ್ರಾಮದಲ್ಲಿ ಸ್ವಾಗತಿಸಿದರು.

ರಥಯಾತ್ರೆ ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಸಮಾಜದ ಮುಖಂಡರೊಂದಿಗೆ ನಗರದ ಪಿ.ಪಿ. ವೃತ್ತದಲ್ಲಿ ಜಮಾಯಿಸಿತು. ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಸಮುದಾಯದವರು ಘೋಷಣೆ ಕೂಗಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರಥಯಾತ್ರೆ ತಿಪಟೂರಿಗೆ ಸಾಗಿತು.

ಜಾನಪದ ಕಲಾವಿದ ಅಂಬಣ್ಣ ಅರೋಲಿಕರ್, ಜಿಲ್ಲಾ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಎ.ಪಿ. ಚಂದ್ರಯ್ಯ, ಮುಖಂಡರಾದ ಮಂಜುನಾಥ್ ಸಂಕೋಡನಹಳ್ಳಿ, ರಮೇಶ್ ಕರಗುಂದ, ವೆಂಕಟೇಶ್ ಚಿಕ್ಕ ಬಾಣಾವರ, ಅರಕೆರೆ ಕಿರಣ್, ರಂಗನಾಥ್ ಮಾಡಾಳು, ಕೊಂಡೆನಾಳು ಪ್ರಸನ್ನ ಕುಮಾರ್, ಭಾಸ್ಕರ್, ಗುತ್ತಿನಕೆರೆ ಶಿವಮೂರ್ತಿ, ಕರಿಯಪ್ಪ ನಾಗವೇದಿ, ಜಯಕುಮಾರ್, ಹಬ್ಬನಘಟ್ಟ ರುದ್ರಮುನಿ, ಮಂಜುನಾಥ್ ಮಲ್ಲದೇವಿಹಳ್ಳಿ, ಧನಂಜಯ್, ಗುರುಪ್ರಸಾದ್ ಮೈಲನಹಳ್ಳಿ, ಬಾಣಾವರ ಮಹೇಶ್, ಸಮಾಜದ ಮುಖಂಡರು ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.