ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರದ ಸಾಧನೆಗೆ ದೊಡ್ಡಗೌಡರ ಕೊಡುಗೆ ಜತೆಗೆ ದೈವಾನುಗ್ರಹ ಕಾರಣ: ರೇವಣ್ಣ

ಶೇ 100 ಫಲಿತಾಂಶ ಶಾಲೆ ಶಿಕ್ಷಕರಿಗೆ ಸನ್ಮಾನ
Last Updated 1 ಮೇ 2019, 14:32 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ಪಡೆದಿರುವ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

‘ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ್ದರು. ಈ ಬಾರಿ ಶಾಲೆಗಳ ಮೂಲಸೌಲಭ್ಯಕ್ಕೆ ₹ 1500 ಕೋಟಿ ಅನುದಾನ ನೀಡಲಾಗಿದೆ. 9 ತಿಂಗಳಲ್ಲಿ ಎರಡು ಸಭೆ ನಡೆಸಿ, ಬೆಳಿಗ್ಗೆ, ಸಂಜೆ ವಿಶೇಷ ತರಗತಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಅಲ್ಲದೇ ನನ್ನ ಪತ್ನಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಆಗಿರುವ ಭವಾನಿ ಅವರು ಹಲವು ಬಾರಿ ಸಭೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದರ ಪರಿಣಾಮ ಅಗ್ರಸ್ಥಾನ ಪಡೆಯಲು ಸಾಧ್ಯವಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.

ಜಿಲ್ಲೆಯ ಶೇಕಡಾ 100 ರಷ್ಟು ಫಲಿತಾಂಶ ಪಡೆದಿರುವ 86 ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ ಅವರನ್ನು ಕರೆಸಿ ಸನ್ಮಾನ ಮಾಡಿಸಲಾಗವುದು. ಶಿಕ್ಷಣ ಇಲಾಖೆಯಿಂದ ಪ್ರಮಾಣ ಪತ್ರ ಸಹ ಕೊಡಿಸಲಾಗುವುದು ಎಂದು ವಿವರಿಸಿದರು.‌

ಬಿಜೆಪಿಗೆ ವೋಟು ಹಾಕಿದ ದಕ್ಷಿಣ ಕನ್ನಡದವರು ಕೆಳ ಸ್ಥಾನಕ್ಕೆ ಹೋಗಿದ್ದಾರೆ. ಜಾತ್ಯಾತೀತ ಪಕ್ಷಗಳಿಗೆ ಮತ ಹಾಕಿದ್ದರೆ ಅದು ಪ್ರಥಮ ಸ್ಥಾನ ಬರುತ್ತಿತ್ತು. ಬಿಜೆಪಿ ಅಲ್ಲಿ ಶಿಕ್ಷಣಕ್ಕೆ ಒತ್ತು ಕೊಡುವುದಿಲ್ಲ ಎಂದು ವ್ಯಂಗ್ಯವಾಡಿದರು.

ಖಾಸಗಿ ಶಾಲೆಗಳು 90 ಅಂಕ ಪಡೆದವರಿಗೆ ಸೀಟು ನೀಡಿ 96 ಅಂಕ ಪಡೆಯುವಂತೆ ಮಾಡುತ್ತಾರೆ. ಆದರೆ, ಸರ್ಕಾರಿ ಶಾಲೆಗಳು ಬಡ ಮಕ್ಕಳನ್ನು ಸೇರಿಸಿಕೊಂಡು ಉತ್ತಮ ಅಂಕ ಗಳಿಸುವಂತೆ ಮಾಡಿರುವುದು ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬರಲು ದೇವೇಗೌಡರ ಕೊಡುಗೆ ಜತೆಗೆ ಜಿಲ್ಲೆಗೆ ದೈವಾನುಗ್ರಹ ಸಹ ಇದೆ. ಹೊಳೆನರಸೀಪುರ ಕ್ಷೇತ್ರದಲ್ಲಿ ಎಂಟು ಮೊರಾರ್ಜಿ ಶಾಲೆ, ಏಳು ಪ್ರಥಮ ದರ್ಜೆ ಕಾಲೇಜುಗಳಿವೆ. ಯಾವ ಪ್ರಧಾನಿ ಲೋಕಸಭಾ ಕ್ಷೇತ್ರದಲ್ಲೂ ಇಷ್ಟು ಕಾಲೇಜುಗಳು ಇಲ್ಲ. ನಬಾರ್ಡ್ ಯೋಜನೆಯಿಂದ ₹ 1200 ಕೋಟಿ ಪೈಕಿ ಶಿಕ್ಷಣಕ್ಕೆ ₹ 300 ಕೋಟಿ ನೀಡಲಾಗಿದೆ ಎಂದು ವಿವರಿಸಿದರು.

‘ಹಗಲು, ರಾತ್ರಿ ಕೆಲಸ ಮಾಡಿರುವ ಸಿ.ಎಂ. ಪ್ರಕೃತಿ ಚಿಕಿತ್ಸೆ ಪಡೆಯುವುದು ತಪ್ಪಾ?. ಯಡಿಯೂರಪ್ಪಗೆ ಟ್ರೀಟ್‌ಮೆಂಟ್‌ ಮಾಡಲು ಬೇರೆಯವರು ಇದ್ದಾರೆ. ಸಂಸತ್‌ನಲ್ಲಿ ಯಡಿಯೂರಪ್ಪ ಎಷ್ಟು ಬಾರಿ ರಾಜ್ಯದ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದಾರೆ. ಕೇಂದ್ರದಿಂದ ಎಷ್ಟು ಅನುದಾನ ಕೊಡಿಸಿದ್ದಾರೆ’ ಎಂದು ಪ್ರಶ್ನಿಸಿದರು.

ರೈತರ ಸಾಲ ಮನ್ನಾ ಬದಲು, ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎನ್ನುವ ನಟ ದರ್ಶನ ಹೇಳಿಕೆಗೆ ಟಾಂಗ್‌ ನೀಡಿದ ರೇವಣ್ಣ, ‘ಸಿನಿಮಾ ನಟರಿಗೆ ರೈತರ ಕಷ್ಟ ಗೊತ್ತಿಲ್ಲ. ಒಂದು ಸಿನಿಮಾಕ್ಕೆ ಪಡೆಯುವ ಸಂಭಾವಣೆಯ ಅರ್ಧದಷ್ಟು ಹಣವನ್ನು ರೈತರ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ನೀಡಲಿ. ಸಿನಿಮಾಗೆ ಆರು ತಿಂಗಳು ವಿರಾಮ ನೀಡಿ ಕಬ್ಬು, ಇತರೆ ಬೆಳೆಗಳ ಬಗ್ಗೆ ಅಧ್ಯಯನ ನಡೆಸಿ ಬೆಂಬಲ ಬೆಲೆ ಕೊಡಿಸಲಿ’ ಎಂದು ತಿರುಗೇಟು ನೀಡಿದರು.

ಗೋಷ್ಠಿಯಲ್ಲಿ ಮುಖಂಡರಾದ ಪಟೇಲ್‌ ಶಿವರಾಂ, ರಾಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT