ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಯಿಗಳ ದಾಳಿಗೆ 15 ಮೇಕೆ ಬಲಿ

ಅರಸೀಕೆರೆ ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ
Last Updated 4 ಜನವರಿ 2021, 3:35 IST
ಅಕ್ಷರ ಗಾತ್ರ

ಅರಸೀಕೆರೆ: ನಗರದ ಮಾರುತಿ ನಗರದ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಗಳ ಮೇಲೆ ಹಿಂಡಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಸುಮಾರು 15 ಮೇಕೆಗಳನ್ನು ಕೊಂದು ಹಾಕಿವೆ.

ಬಲಿಯಾದ ಮೇಕೆಗಳು ಮಾರುತಿ ನಗರ ಬಡಾವಣೆಯ ನಿವಾಸಿ ಚಿಕ್ಕಮ್ಮ ಅವರಿಗೆ ಸೇರಿದ್ದವು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಹಾವಳಿ ನಿಯಂತ್ರಿಸಲು ನಗರಸಭೆ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ವಿವಿಧ ಬಡಾವಣೆಗಳಲ್ಲಿ ಹಾಗೂ ರಸ್ತೆಗಳ ಮಧ್ಯೆ ಬೀದಿ ನಾಯಿಗಳು, ಬಿಡಾಡಿ ಹಸುಗಳು, ಹಂದಿಗಳು ಹಿಂಡು ಹಿಂಡಾಗಿ ಓಡಾಡುತ್ತಿದ್ದರೂ, ನಗರಸಭೆ ಅಧಿಕಾರಿಗಳು ಯಾಉದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಪರಿಣಾಮ ವಿವಿಧ ಬಡಾವಣೆಗಳಲ್ಲಿ ಚಿಕ್ಕ ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಓಡಾಡುವುದು ದುಸ್ತರವಾಗಿದೆ.

ಪ್ರತಿಕ್ರಿಯೆ: ‘ನಗರದಲ್ಲಿ ಎಲ್ಲೆಂದರಲ್ಲಿ ಹಾಗೂ ಬೀದಿ ನಾಯಿಗಳು ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳಂತೂ ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಏಕಾಏಕಿ ಎರಗುತ್ತಿವೆ. ಕೂಡಲೇ ನಗರಸಭೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ರಂಗಸ್ವಾಮಿ ಎಚ್ಚರಿಸಿದರು.

‘ಬೀದಿ ನಾಯಿಗಳ ಹಾವಳಿ ನಗರ ವಾಸಿಗಳಿಗಷ್ಟೇ ಅಲ್ಲದೆ ನಗರಸಭೆಗೂ ತಲೆ ನೋವಾಗಿದೆ. ಬೀದಿ ನಾಯಿಗಳನ್ನು ಸಾಯಿಸುವಂತೆಯೂ ಇಲ್ಲ, ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಲು ಒಂದು ನಾಯಿಗೆ ಕನಿಷ್ಠ ₹ 1,500 ಬೇಕು. ನಗರಸಭೆಯಲ್ಲಿ ಅನುದಾನದ ಕೊರತೆ ಇದೆ, ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಕಾಂತರಾಜ್ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT