ಸೋಮವಾರ, ಜೂನ್ 21, 2021
29 °C
ಜಿಲ್ಲೆಯಲ್ಲಿ ದಿಢೀರ್‌ ಇಳಿದ ಕೊರೊನಾ ಸೋಂಕು ಪ್ರಕರಣ!

170 ಮಂದಿಗೆ ಕೋವಿಡ್‌, 16 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲೆಯಲ್ಲಿ ಎರಡು ವಾರಗಳಿಂದ ನಿತ್ಯ ಸರಾಸರಿ 2 ಸಾವಿರ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದರೂ ಮಂಗಳವಾರ ಕೇವಲ 170 ಪ್ರಕರಣ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.

ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ, ಆಮ್ಲಜನಕ ವ್ಯವಸ್ಥೆ ಮಾಡಲಾಗುತ್ತಿಲ್ಲ. ಹಾಗಾಗಿ ಕೊರೊನಾ ಪರೀಕ್ಷೆಗಳನ್ನೇ ಕಡಿಮೆ ಮಾಡುವಂತೆ ಸರ್ಕಾರವೇ ಸೂಚನೆ ನೀಡಿದೆ ಜಿಲ್ಲೆಯ ಶಾಸಕರು ಆರೋಪಿಸಿದ್ದರು. ಇದಕ್ಕೆ ಇಂಬು ಕೊಡುವಂತೆ ಜಿಲ್ಲೆಯಲ್ಲಿ  170 ಕೊರೊನಾ ಪ್ರಕರಣಗಳು ವರದಿಯಾಗಿದೆ. ಶುಕ್ರವಾರ 2,540, ಶನಿವಾರ 1,288, ಭಾನುವಾರ, 2373, ಸೋಮವಾರ 1797 ಮಂದಿಗೆ ಸೋಂಕು ತಗುಲಿತ್ತು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸೇರಿದಂತೆ ಯಾವ ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸಲಿಲ್ಲ.

ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 170 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ 16 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 56,011 ಕ್ಕೆ ಏರಿಕೆಯಾಗಿದೆ. 16,224 ಸಕ್ರಿಯ ಪ್ರಕರಣಗಳ ಪೈಕಿ 125 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಸನ ತಾಲ್ಲೂಕಿನ 5, ಚನ್ನರಾಯಪಟ್ಟಣ 2, ಅರಕಲಗೂಡು 1, ಸಕಲೇಶಪುರ 1, ಅರಸೀಕೆರೆ 3, ಬೆಲೂರು 1, ಹೊಳೆನರಸೀಪುರ 1 ಹಾಗೂ ಹೊರ ಜಿಲ್ಲೆಯ ಇಬ್ಬರು ವ್ಯಕ್ತಿಗಳು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ರೋಗದಿಂದ ಮೃತಪಟ್ಟವರ ಸಂಖ್ಯೆ 719 ಕ್ಕೆ ಏರಿಕೆಯಾಗಿದೆ. ಮಂಗಳವಾರ ಬಿಡುಗಡೆಯಾದ 318 ಮಂದಿ ಸೇರಿದಂತೆ ಈವರೆಗೆ 39,068 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹೊಸದಾಗಿ ಹಾಸನ ತಾಲ್ಲೂಕಿನ 88, ಅರಕಲಗೂಡು 8, ಅರಸೀಕೆರೆ 27, ಹೊಳೆನರಸೀಪುರ 7, ಚನ್ನರಾಯಪಟ್ಟಣ 11, ಸಕಲೇಶಪುರ 12, ಆಲೂರು 5, ಬೇಲೂರು 8 ಹಾಗೂ ಇತರೆ ಜಿಲ್ಲೆಯ 4 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ. ಸತೀಶ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು