ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾಂಟ್‌ ಹಿಂದಿರುಗಿಸದ್ದಕ್ಕೆ ₹2 ಸಾವಿರ ಪರಿಹಾರ ನೀಡುವಂತೆ ಆದೇಶ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶ
Published 27 ಫೆಬ್ರುವರಿ 2024, 14:36 IST
Last Updated 27 ಫೆಬ್ರುವರಿ 2024, 14:36 IST
ಅಕ್ಷರ ಗಾತ್ರ

ಹಾಸನ: ಡ್ರೈ ಕ್ಲೀನಿಂಗ್‌ಗೆ ಕೊಟ್ಟಿದ್ದ ಒಂದು ಪ್ಯಾಂಟ್‌ ಅನ್ನು ಹಿಂದಿರುಗಿಸದೇ ಸೇವಾನ್ಯೂನತೆ ಎಸಗಿದ ನಗರದ ನಂದನ್‌ ಡ್ರೈ ಕ್ಲೀನರ್ಸ್‌ಗೆ ಇಲ್ಲಿನ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ₹2 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.

ನಗರದ ಚಿಕ್ಕಹೊನ್ನೇನಹಳ್ಳಿ ನಿವಾಸಿ ಎ.ಎನ್. ಮಂಜುನಾಥ ಅವರು 2 ಪ್ಯಾಂಟ್ ಹಾಗೂ 3 ಶರ್ಟ್‌ಗಳನ್ನು ಡ್ರೈ ಕ್ಲೀನ್ ಮಾಡಲು ನಂದನ್ ಡ್ರೈ ಕ್ಲೀನರ್ಸ್‌ಗೆ ನೀಡಿದ್ದರು. ಆದರೆ ಡ್ರೈಕ್ಲೀನ್‌ ಮಾಡಿ, 1 ಪ್ಯಾಂಟ್ ಮತ್ತು 3 ಶರ್ಟ್‍ಗಳನ್ನು ಮಾತ್ರ ಮಂಜುನಾಥ ಅವರಿಗೆ ಹಿಂದಿರುಗಿಸಲಾಗಿತ್ತು. ಇನ್ನೊಂದು ಪ್ಯಾಂಟ್ ಹಿಂತಿರುಗಿಸುವಂತೆ ನೋಟೀಸ್ ಕಳುಹಿಸಿದ್ದರೂ ನಂದನ್‌ ಡ್ರೈ ಕ್ಲೀನರ್ಸ್‌ನಿಂದ ವಾಪಸ್‌ ಕೊಟ್ಟಿರಲಿಲ್ಲ.

ಈ ಬಗ್ಗೆ ಮಂಜುನಾಥ ಅವರು ₹ 15ಸಾವಿರ ಪರಿಹಾರವನ್ನು ಕೊಡಿಸುವಂತೆ ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಚಂಚಲಾ ಸಿ.ಎಂ., ಸದಸ್ಯರಾದ ಎಚ್.ವಿ.ಮಹಾದೇವ, ಅನುಪಮಾ ಆರ್. ಅವರನ್ನು ಒಳಗೊಂಡ ಪೀಠವು ವಿಚಾರಣೆ ನಡೆಸಿ, ಮಂಜುನಾಥ ಅವರು ಸಲ್ಲಿಸಿದ್ದ ದಾಖಲಾತಿಗಳನ್ನು ಕೂಲಂಕಶವಾಗಿ ಪರಿಶೀಲಿಸಿತ್ತು.

ವಿಚಾರಣೆಗೆ ಹಾಜರಾಗುವಂತೆ ನಂದನ್ ಡ್ರೈ ಕ್ಲೀನರ್ಸ್‌ಗೆ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ, ಆಯೋಗದ ಮುಂದೆ ಹಾಜರಾಗಿರಲಿಲ್ಲ. ಹೀಗಾಗಿ ಪ್ರಕರಣವನ್ನು ಏಕಪಕ್ಷೀಯವಾಗಿ ಪರಿಗಣಿಸಿದ ಆಯೋಗ, 1 ಪ್ಯಾಂಟ್ ಅನ್ನು ನಂದನ್‌ ಡ್ರೈಕ್ಲೀನರ್ಸ್‌ ಕಳೆದು ಹಾಕಿರಬಹುದು ಎಂದು ಅಭಿಪ್ರಾಯ ಪಟ್ಟಿದೆ.

ಡ್ರೈ ಕ್ಲೀನಿಂಗ್‍ಗಾಗಿ ಕೊಟ್ಟಿದ್ದ ಪ್ಯಾಂಟ್ ಹಿಂತಿರುಗಿಸದೇ ಸೇವಾನ್ಯೂನತೆ ಉಂಟು ಮಾಡಿರುವುದಕ್ಕಾಗಿ ಮಂಜುನಾಥ ಅವರಿಗೆ ಪ್ಯಾಂಟಿನ ಪರಿಹಾರವಾಗಿ ₹2ಸಾವಿರ, ಸೇವಾನ್ಯೂನತೆಗಾಗಿ ₹ 500 ಹಾಗೂ ಖರ್ಚಿಗಾಗಿ ₹ 500 ಅನ್ನು ಆದೇಶವಾದ 45 ದಿನಗಳ ಒಳಗೆ ನೀಡಬೇಕು. ತಪ್ಪಿದ್ದಲ್ಲಿ ಒಟ್ಟು ಮೊತ್ತದ ಮೇಲೆ ವಾರ್ಷಿಕ ಶೇ 9ರಷ್ಟು ಬಡ್ಡಿಯೊಂದಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಅನುಪಮಾ ಆರ್. ಅವರು ಫೆ.22 ರಂದು ಆದೇಶ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT