ಹಾಸನ: ನಾಫೆಡ್ ಮೂಲಕ ಕೊಬ್ಬರಿ ಮಾರಾಟ ಮಾಡಿರುವ ಜಿಲ್ಲೆಯ ರೈತರು ₹ 94 ಕೋಟಿ ಬಾಕಿ ಹಣಕ್ಕಾಗಿ ಕಾಯುತ್ತಿದ್ದಾರೆ.
ಪ್ರತಿ ಕ್ವಿಂಟಲ್‌ಗೆ ರಾಜ್ಯ ಸರ್ಕಾರದ ₹1,500 ಪ್ರೋತ್ಸಾಹ ಧನ ಹಾಗೂ ಕೇಂದ್ರ ಸರ್ಕಾರದ ₹12ಸಾವಿರ ಬೆಂಬಲ ಬೆಲೆ ಸೇರಿ ಒಟ್ಟು ₹13,500 ಬೆಲೆ ನಿಗದಿಯಾಗಿತ್ತು. ಪ್ರತಿಯೊಬ್ಬರಿಂದ ಎಕರೆಗೆ ಆರು ಕ್ವಿಂಟಲ್‌ನಂತೆ ಗರಿಷ್ಠ 15 ಕ್ವಿಂಟಲ್‌ವರೆಗೂ ಉಂಡೆ ಕೊಬ್ಬರಿ ಖರೀದಿಸಲಾಗಿತ್ತು. ಮಾರ್ಚ್ 4 ರಿಂದ ಖರೀದಿ ಪ್ರಕ್ರಿಯೆ ನಡೆದಿತ್ತು.
ಈಗ ಹಲವು ತಿಂಗಳಾದರೂ ಎಲ್ಲ ರೈತರಿಗೆ ಹಣ ಪಾವತಿಯಾಗಿಲ್ಲ. ನೆರೆಯ ತುಮಕೂರು ಜಿಲ್ಲೆಯ ಒಂದೆರಡು ಖರೀದಿ ಕೇಂದ್ರದಲ್ಲಿ ಮಾತ್ರ ಕೆಲ ರೈತರಿಗೆ ಪಾವತಿಸಲಾಗಿತ್ತು. ಬಾಕಿ ಪಾವತಿಗಾಗಿ ಜಿಲ್ಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದ ನಂತರ ಕೆಲವರಿಗೆ ಹಣ ಪಾವತಿಸಲಾಗಿತ್ತು.
‘ಜಿಲ್ಲೆಯ ರೈತರಿಂದ ಖರೀದಿಸಿದ ಕೊಬ್ಬರಿಗೆ ಪಾವತಿಸಬೇಕಿದ್ದ ಒಟ್ಟು ₹291.83 ಕೋಟಿ ಪೈಕಿ ₹197.40 ಕೋಟಿ ಪಾವತಿಸಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆ ಆಗುತ್ತಿದ್ದಂತೆಯೇ ಉಳಿದ ₹ 94.42 ಕೋಟಿಯನ್ನು ಪಾವತಿಸಲಾಗುವುದು’ ಎಂದು ನಾಫೆಡ್ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
‘ಈಗಾಗಲೇ ಧಾರಾಕಾರ ಮಳೆ ಸುರಿದು, ಬೆಳೆಗಳೆಲ್ಲವೂ ಹಾಳಾಗಿವೆ. ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಬಾಕಿ ಉಳಿದಿರುವ ಕೊಬ್ಬರಿ ಹಣವನ್ನಾದರೂ ಪಾವತಿ ಮಾಡಿದರೆ ಅನುಕೂಲ ಆಗಲಿದೆ’ ಎನ್ನುತ್ತಾರೆ ಹೊಳೆನರಸೀಪುರದ ರೈತ ದರ್ಶನ್.
ನಾಫೆಡ್ ಮೂಲಕ ಖರೀದಿ ಪ್ರಾರಂಭ ಮಾಡಿರುವುದರಿಂದ ನಮಗೆ ಉತ್ತಮ ದರ ದೊರಕುತ್ತಿದೆ. ವರ್ಷ ಪೂರ್ತಿ ಕೊಬ್ಬರಿ ಖರೀದಿಗೆ ಕ್ರಮ ಕೈಗೊಂಡರೆ ಅನುಕೂಲ.- ಸಿ.ಎ. ನಟರಾಜ್ ಚನ್ನರಾಯಪಟ್ಟಣದ ತೆಂಗು ಬೆಳೆಗಾರ
ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಿದ್ದರೂ ಹಣ ಪಾವತಿ ವಿಳಂಬವಾಗುತ್ತಿದೆ. ಹಲವು ರೈತರು ತೊಂದರೆ ಅನುಭವಿಸುವಂತಾಗಿದೆ.- ಸಂತೋಷ್ ದಿಂಡಗೂರು ತೆಂಗು ಬೆಳೆಗಾರ
ಕೊಬ್ಬರಿಯ ಬಾಕಿ ಹಣವನ್ನು ಶೀಘ್ರ ಬಿಡುಗಡೆ ಮಾಡಲು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಇದರಿಂದ 5718 ರೈತರಿಗೆ ಅನುಕೂಲ ಆಗಲಿದೆ.- ಶ್ರೇಯಸ್ ಪಟೇಲ್ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.