21ರಂದು ಜಿಲ್ಲೆಗೆ ಮುಖ್ಯಮಂತ್ರಿ; ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ

7

21ರಂದು ಜಿಲ್ಲೆಗೆ ಮುಖ್ಯಮಂತ್ರಿ; ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ

Published:
Updated:
Deccan Herald

ಹಾಸನ: ಸೆ. 21 ರಂದು ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಚಿವ ಎಚ್.ಡಿ.ರೇವಣ್ಣ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಜತೆ ಪೂರ್ವ ತಯಾರಿ ಸಭೆ ನಡೆಸಿದರು.

ಜಿಲ್ಲೆಯಲ್ಲಿ ಶಂಕುಸ್ಥಾಪನೆ, ಉದ್ಘಾಟನೆಗೆ ಸಿದ್ಧವಿರುವ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆದಿರುವ ಕಾಮಗಾರಿಗಳ ಪಟ್ಟಿ ಮಾಡಿ ಅಗತ್ಯ ಸಿದ್ಧತೆ ಕೈಗೊಳ್ಳುಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ಲೋಕೋಪಯೋಗಿ ರಸ್ತೆಗಳು, ರೈಲ್ವೆ ಮೇಲ್ಸೇತುವೆ, ಹಾಸನಾಂಬ ವೈದಕೀಯ ಕಾಲೇಜಿನ ಕಟ್ಟಡಗಳು, ಗೃಹ ನಿರ್ಮಾಣ ಮಂಡಳಿ ವತಿಯಿಂದ ಹೊಸದಾಗಿ ಬಡಾವಣೆ ನಿರ್ಮಾಣಕ್ಕೆ ಭೂಮಿ ಪಡೆಯುವುದು, ನೀರಾವರಿ ಯೋಜನೆಗಳು, ನಗರ ಸ್ಥಳೀಯ ಸಂಸ್ಥೆಗಳ ಕಾಮಗಾರಿಗಳ ಬಗ್ಗೆ ಚರ್ಚಿಸಿದರು.

ಕೆಲವು ಕಾಮಗಾರಿಗಳನ್ನು ಸ್ಥಳದಲೇ ಉದ್ಘಾಟಿಸಿ, ಶಂಕುಸ್ಥಾಪನೆ ನೆರೆವೇರಿಸಲಾಗುವುದು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಇತರೆ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಪಾಳ್ಯ, ಕುಂದೂರು ಚನ್ನಾಪುರ, ಬಿಕ್ಕೋಡು, ಹಾನುಬಾಳು ರೈತ ಸಂಪರ್ಕ ಕೇಂದ್ರಗಳು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ₹ 7.5 ಕೋಟಿ ವೆಚ್ಚದ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆ ಕಟ್ಟಡ ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಹಾಸನಾಂಬ ವೈದ್ಯಕೀಯ ಕಾಲೇಜಿನಲ್ಲಿ ₹ 1.73 ಕೋಟಿ ವೆಚ್ಚದ ವಿ.ಆರ್.ಡಿ.ಎಲ್. ಪ್ರಯೋಗಾಲಯ, ₹ 81 ಲಕ್ಷ ವೆಚ್ಚದ ಕ್ಷ ಕಿರಣ ಘಟಕ, ₹ 52 ಲಕ್ಷ ವೆಚ್ಚದ ದ್ರವ ಅಮ್ಲಜನಕ ಘಟಕ, ₹ 4.12 ಕೋಟಿ ವೆಚ್ಚದ ಉಪನ್ಯಾಸಕರ ಕೊಠಡಿಗಳು, ₹ 8.7 ಕೋಟಿ ವೆಚ್ಚದಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್ ಘಟಕ ಕಾಮಗಾರಿಗಳು ಪೂರ್ಣಗೊಂಡಿರುವ ಮಾಹಿತಿ ಪಡೆದ ಅವರು, ಇವುಗಳನ್ನು ಉದ್ಘಾಟಿಸಲು ಸಿದ್ಧತೆ ಕೈಗೊಳ್ಳುವಂತೆ ಹಿಮ್ಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರ, ಲೋಕೋಪಯೋಗಿ ರಸ್ತೆ, ಕಟ್ಟಡಗಳು, ತೋಟಗಾರಿಕೆ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆಗೆ ಅಗತ್ಯ ಕ್ರಮ ಜರುಗಿಸುವಂತೆ ತಿಳಿಸಿದರು.

₹ 50 ಲಕ್ಷಕ್ಕಿಂತ ಅಧಿಕ ಮೊತ್ತದ ಕಾಮಗಾರಿ ಮಾತ್ರ ಮುಖ್ಯಮಂತ್ರಿಯಿಂದ ಉದ್ಘಾಟನೆ, ಶಂಕುಸ್ಥಾಪನೆ ಮಾಡಿಸಲಾಗುವುದು. ₹ 50 ಲಕ್ಷಕ್ಕಿಂತ ಕಡಿಮೆ ವೆಚ್ಚದ ಕಾಮಗಾರಿಗಳನ್ನು ಆಯಾ ಕ್ಷೇತ್ರದ ಶಾಸಕರು ಉದ್ಘಾಟಿಸುತ್ತಾರೆ ಎಂದು ವಿವರಿಸಿದರು.

ವಿದ್ಯಾನಗರ, ವಿಜಯನಗರ, ಬೂವನಹಳ್ಳಿ, ಗವೇನಹಳ್ಳಿ, ಮೊದಲಾದ ಬಡಾವಣೆಗಳನ್ನು ನಗರಸಭೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಗರಸಭೆ ಆಯುಕ್ತರಿಗೆ ಸೂಚಿಸಿದರು.

ಶಾಸಕರಾದ ಎ.ಟಿ.ರಾಮಸ್ವಾಮಿ, ಎಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್, ಸಿ.ಎನ್.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಹಾಗೂ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪುಟ್ಟಸ್ವಾಮಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !