ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆ: ಕಲುಷಿತ ನೀರು ಸೇವಿಸಿ 35 ಮಂದಿ ಅಸ್ವಸ್ಥ

Last Updated 13 ಸೆಪ್ಟೆಂಬರ್ 2020, 6:40 IST
ಅಕ್ಷರ ಗಾತ್ರ

ಅರಸೀಕೆರೆ/ ಜಾವಗಲ್‌: ತಾಲ್ಲೂಕಿನ ಬಂದೂರು ಬೋವಿಕಾಲೊನಿಯಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮದ ಸುಮಾರು 35 ಮಂದಿ ಅಸ್ವಸ್ಥರಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬಂದೂರು ಬೋವಿಕಾಲೊನಿಯಲ್ಲಿ ಸುಮಾರು 95 ಕುಟುಂಬಗಳು ವಾಸಿಸುತ್ತಿದ್ದು, ಕೆಲವು ವಾರಗಳಿಂದ ಗ್ರಾಮಕ್ಕೆ ಪೂರೈಕೆಯಾಗುವ ಕುಡಿ ಯುವ ನೀರಿನಲ್ಲಿ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ. ಅದೇ ನೀರನ್ನು ಕುಡಿಯಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದು.

ಗ್ರಾಮದಲ್ಲಿರುವ ಕೆರೆಯ ಪಕ್ಕ ದಲ್ಲಿ ಕುಡಿಯುವ ನೀರಿನ ಕೊಳವೆ ಬಾವಿ ಇದ್ದು, ಈ ಕೆರೆಗೆ ಕಲುಷಿತ ನೀರು ಸೇರುತ್ತಿದೆ. ಕಲುಷಿತ ನೀರು ಕೊಳವೆಬಾವಿ ಮೂಲಕ ಗ್ರಾಮದೊಳಗೆ ಪೂರೈಕೆಯಾಗುತ್ತಿದೆ. ಕುಡಿಯುವ ನೀರು ಸರಬರಾಜಾಗುವ ಪೈಪಿನ ಮೇಲ್ಭಾ ಗದಲ್ಲಿ ಚರಂಡಿ ಇದೆ. ಪೈಪ್ ಒಡೆದು ಹೋಗಿ ಕಲುಷಿತ ನೀರು ಕುಡಿಯುವ ನೀರಿನಲ್ಲಿ ಸೇರಿ ಕೊಳ್ಳುತ್ತಿದೆ. ಈ ನೀರು ಕುಡಿದು ಗ್ರಾಮದಲ್ಲಿ ಕೆಲವರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಇದನ್ನು ಸರಿಪಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಗ್ರಾಮದ 10 ಮನೆಗಳನ್ನು ಹೊರತುಪಡಿಸಿ ಉಳಿದ ಮನೆಗಳಲ್ಲಿ ಶೌಚಾಲಯ ಇಲ್ಲ. ಬಯಲು ಶೌಚಾಲಯ ಆಶ್ರಯಿಸಿರುವುದೂ ಸಮಸ್ಯೆಗೆ ಕಾರಣ. ಹಳೇಬೀಡು– ಜಾವಗಲ್ ಮಧ್ಯದ ಗ್ರಾಮದ ದೇವಸ್ಥಾನವೊಂದರಲ್ಲಿ ಈಚೆಗೆ ಊಟ ಮಾಡಿ ಬಂದವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸಂತೋಷ್ ಕುಮಾರ್, ಗ್ರಾಮದಲ್ಲಿ ಕೆಲವರು ಅಸ್ವಸ್ಥರಾಗಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಗ್ರಾಮದಲ್ಲಿರುವ ಕುಡಿಯುವ ನೀರಿನಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ತಿಳಿಯಲು ಕುಡಿಯುವ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅಸ್ವಸ್ಥತೆಗೆ ಕಾರಣ ಖಚಿತಪಡಿಸಿಕೊಂಡು ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT