ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

414 ಪ್ರಕರಣ: ಕ್ರಿಮಿನಲ್ ಕೇಸ್ ದಾಖಲು

ಎಚ್ಆರ್‌ಪಿಯಲ್ಲಿ 1654 ಎಕರೆ ಅಕ್ರಮ ಮಂಜೂರಾತಿ: ಎಸ್‌ಎಲ್ಓ ಶ್ರೀನಿವಾಸ ಗೌಡ
Last Updated 25 ಅಕ್ಟೋಬರ್ 2019, 14:54 IST
ಅಕ್ಷರ ಗಾತ್ರ

ಹಾಸನ: ‘ಹೇಮಾವತಿ, ವಾಟೆಹೊಳೆ, ಯಗಚಿ ಜಲಾಶಯ ಯೋಜನೆಯ (ಎಚ್‍ಆರ್‌ಪಿ) ಮುಳುಗಡೆ ಸಂತ್ರಸ್ತರಿಗೆ ಮೀಸಲಿರಿಸಿದ್ದ ಭೂ ಮಂಜೂರಾತಿಯಲ್ಲಿ ಅಕ್ರಮವೆಸಗಿರುವ ತಪ್ಪಿತಸ್ಥರ ವಿರುದ್ಧ ನಗರ ಠಾಣೆಯಲ್ಲಿ ಕ್ರಿಮಿನಲ್‌ ಕೇಸ್‌ ದಾಖಲಾಗಿದೆ’ ಎಂದು ಹೇಮಾವತಿ ಜಲಾಶಯ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ಶ್ರೀನಿವಾಸ್‌ ಗೌಡ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಮುಳುಗಡೆ ಸಂತ್ರಸ್ತರಿಗೆ ಭೂಮಿ ಮಂಜೂರಾದ 979 ಪ್ರಕರಣಗಳ ದಾಖಲೆ ಪರಿಶೀಲನೆ ನಡೆಸಿದಾಗ 414 ದಾಖಲೆಗಳು ಬೋಗಸ್‌ ಆಗಿದ್ದು, 1654 ಎಕರೆ ಭೂಮಿ ಮಂಜೂರು ಆಗಿದೆ. ಈ ಪ್ರಕರಣಗಳಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ (ಎಸ್‌ಎಲ್‌ಓ) ಯಲ್ಲಿ ಆದೇಶ ಸಿದ್ಧಗೊಳ್ಳದೆ ತಹಶೀಲ್ದಾರ್ ಕಚೇರಿಯಲ್ಲಿ ಮಂಜೂರಾತಿ ಹೊರಡಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ 2015ರ ಜ.1 ರಿಂದ 2018ರ ನ.30ರವರೆಗೆ ಭೂ ಮಂಜೂರಾತಿ ಪಡೆದವರು, ಪ್ರಕರಣದಲ್ಲಿ ಭಾಗಿಯಾಗಿರುವ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಗುರುವಾರ ಠಾಣೆಗೆ ದೂರು ನೀಡಲಾಗಿತ್ತು’ ಎಂದು ಸಭೆ ಗಮನಕ್ಕೆ ತಂದರು.

ಇದಕ್ಕೂ ಮುನ್ನ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಭೂಮಿ ಕಬಳಿಕೆ ಮಾಡಿರುವ ಕುರಿತು ಶಾಸಕ ಎಚ್‌.ಡಿ.ರೇವಣ್ಣ ವಿಷಯ ಪ್ರಸ್ತಾಪಿಸಿ,
‘ ಸಂತ್ರಸ್ತರಿಗೆ ವಿವಿಧೆಡೆ 80 ಸಾವಿರ ಎಕರೆ ಜಮೀನು ಮೀಸಲಿರಿಸಲಾಗಿದೆ, ಆದರೆ 414 ಪ್ರಕರಣಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 1654 ಎಕರೆ ಜಮೀನು ಅಕ್ರಮ ಮಂಜೂರಾತಿ ಮಾಡಲಾಗಿದೆ. ಇದನ್ನು ಸಮಗ್ರ ತನಿಖೆ ಮಾಡಿದರೆ ಇನ್ನೂ ನೂರಾರು ಪ್ರಕರಣಗಳು ಬೆಳಕಿಗೆ ಬರಲಿವೆ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಸುಮಾರು 40 ವರ್ಷಗಳಿಂದ ಇದು ನಡೆದು ಬಂದಿದೆ. ಹೊಸ ಮಂಜೂರಾತಿ ತಡೆ ಹಿಡಿದು ಪರಿಶೀಲಿಸಿ ನಂತರ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

‘ಬೋಗಸ್‌ ದಾಖಲೆ ಸೃಷ್ಟಿಸಿ ಅಂದಾಜು 20 ಸಾವಿರ ಎಕರೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಹಾಸನ–ಚನ್ನರಾಯಪಟ್ಟಣ ರಸ್ತೆಯ ಕೃಷಿ ಕಾಲೇಜು ಎದುರು ಬೆಂಗಳೂರಿನ ಲಾರಿ ಕಚೇರಿಗೆ 10 ಎಕರೆ ಎಚ್‌ಆರ್‌ಪಿ ಭೂಮಿ ನೀಡಲಾಗಿದೆ. ಒಂದೊಂದು ಎಕರೆ ₹ 50 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದ್ದು, ಭೂಮಿ ಮಾರಾಟದ ದಂಧೆಯೇ ನಡೆದಿದೆ’ ಎಂದು ಆರೋಪಿಸಿದರು.

ಇದಕ್ಕೆ ದಿನಗೂಡಿಸಿದ ಶಾಸಕರಾದ ಎ.ಟಿ.ರಾಮಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ, ‘ಒಂದೇ ಸರ್ಟಿಫಿಕೇಟ್‌ನಲ್ಲಿ 3–4 ಕಡೆ ಮಂಜೂರಾತಿ ಆಗಿದೆ. ಆರು ಲಕ್ಷ ರೂಪಾಯಿ ಪ್ಯಾಕೇಜ್‌ ಕೊಟ್ಟರೆ ಎಲ್ಲ ಕೆಲಸವನ್ನು ಅಧಿಕಾರಿ, ಸಿಬ್ಬಂದಿ, ಮಧ್ಯವರ್ತಿಗಳು ಮಾಡಿಕೊಡುತ್ತಾರೆ. ಈ ನಡೆಸಿರುವ ತನಿಖೆ ಒಂದು ತುಣುಕು ಅಷ್ಟೆ. ದೊಡ್ಡ ಬ್ರಹ್ಮಾಂಡವೇ ಇದೆ. ಇದನ್ನು ಪತ್ತೆ ಹಚ್ಚಬೇಕು’ ಎಂದು ಆಗ್ರಹಿಸಿದರು.

ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿ ಈಗಾಗಲೇ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಅಕ್ರಮ ಎಸಗಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದರು.

‘2017ರ ಡಿ.30ಕ್ಕೆ ಅಂತಿಮಗೊಂಡಂತೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅರ್ಜಿಗಳ ಪರಿಶೀಲನೆ ನಡೆಸಿ, ಭೂಮಿ ಮಂಜೂರು ಮಾಡಲು ಸಮಿತಿ ರಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಉತ್ತರಿಸಿದರು.

ಒಳನೋಟದ ಫಲ

ಹೇಮಾವತಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಕ್ರಮ ಸರ್ಕಾರಿ ಭೂಮಿ ಮಂಜೂರು ಮಾಡಿರುವ ಕುರಿತು ‘ಪ್ರಜಾವಾಣಿ’ಯ ಆ. 25ರ ಸಂಚಿಕೆಯ ಒಳನೋಟದಲ್ಲಿ ವಿಸ್ತ್ರತವಾಗಿ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT