ಭಾನುವಾರ, ಸೆಪ್ಟೆಂಬರ್ 26, 2021
28 °C
30 ಕ್ಕೆ ಮೆಗಾ ಲೋಕ ಅದಾಲತ್: ನ್ಯಾ. ಶಿವಣ್ಣ

ಹಾಸನ: 5 ಸಾವಿರ ಪ್ರಕರಣ ಇತ್ಯರ್ಥ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ಸೆ. 30 ರಂದು ನಡೆಸುವ ‘ಮೆಗಾ ಲೋಕ ಅದಾಲತ್' ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಶಿವಣ್ಣ ತಿಳಿಸಿದರು.

ರಾಜಿ ಸಂಧಾನದ ಪ್ರಕರಣಗಳಿಗೆ ಶೀಘ್ರ ನ್ಯಾಯ ಪಡೆಯಲು ಲೋಕ್ ಅದಾಲತ್ ಸಹಕಾರಿಯಾಗಿದೆ. ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 78,158 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು, ರಾಜಿ ಸಂಧಾನಕ್ಕೆ ಐದು ಸಾವಿರಕ್ಕೂ ಅಧಿಕ ಪ್ರಕರಣಗಳು ಲಭ್ಯ ಇದೆ. ಈಗಾಗಲೇ ಒಂದು ಸಾವಿರ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಳೆದ ಬಾರಿ ನಡೆದ ಅದಾಲತ್ ನಲ್ಲಿ 9,900 ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿತ್ತು. ವಕೀಲರ, ಕಕ್ಷಿಗಾರರ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಸುಮಾರು 5 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ಬಾಕಿ ಇರುವ ಎಲ್ಲಾ ವಿಧದ ಸಿವಿಲ್ ವ್ಯಾಜ್ಯಗಳು, ಬಗೆಹರಿಸಬಹುದಾದ ಕ್ರಿಮಿನಲ್, ಚೆಕ್ ಬೌನ್ಸ್, ಬ್ಯಾಂಕ್ ವಸೂಲಾತಿ, ಮೋಟಾರು ವಾಹನ, ಕೌಟುಂಬಿಕ, ಭೂಸ್ವಾಧೀನ, ಕಂದಾಯ, ಜನನ ಮತ್ತು ಮರಣ ನೋಂದಣಿ, ಜೀವನಾಂಶ ಹಾಗೂ ಇತರೆ ಲಘು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತು ವ್ಯಾಜ್ಯಪೂರ್ವ ಬ್ಯಾಂಕ್ ಸಾಲ ಮರುಪಾವತಿ ಪ್ರಕರಣಗಳನ್ನು ಅದಾಲತ್‍ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.

ಕಕ್ಷಿದಾರರು ವಕೀಲರ ಮೂಲಕ ಅಥವಾ ನೇರವಾಗಿ ರಾಜೀ ಸಂಧಾನದದಲ್ಲಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಇಲ್ಲಿ ರಾಜೀ ತೀರ್ಮಾನವಾಗಿರುವ ಪ್ರಕರಣಗಳ ಬಗ್ಗೆ ಮತ್ತೆ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಿ ಪ್ರಕ್ರಿಯೆಯಿಂದ ಕೋರ್ಟ್‌ ಸಮಯ, ಹಣ ಉಳಿಸಬಹುದಾಗಿದ್ದು, ಉಭಯ ಕಕ್ಷಿದಾರರ ನಡುವಿನ ಬಾಂಧವ್ಯವು ವೃದ್ಧಿಸುವುದು. ತೀರ್ಪು ತ್ವರಿತವಾಗಿ ದೊರೆಯುತ್ತದೆ ಎಂದರು.

ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಎಸ್ ಮಂಜುನಾಥಮೂರ್ತಿ ಮಾತನಾಡಿ, ಲೋಕ ಅದಾಲತ್ ಯಶಸ್ಸಿಗೆ ವಕೀಲರು ಕೈ ಜೋಡಿಸಿದ್ದಾರೆ. ಹೆಚ್ಚು ಪ್ರಕಕರಣಗಳು ವಿಲೇವಾರಿಯಾದಷ್ಟು ಕಕ್ಷಿದಾರರು ವಕೀಲರಿಗೂ ಅನುಕೂಲವಾಗುತ್ತದೆ. ಹಾಗಾಗಿ ಸಾರ್ವಜನಿಕರು ಆತಂಕವಿಲ್ಲದೆ ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಿವಿಲ್ ನ್ಯಾಯಾಧೀಶ ಬಿ.ಕೆ.ರವಿಕಾಂತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.