ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ವಾಡಿಕೆಗಿಂತ ಶೇ 54 ರಷ್ಟು ಅಧಿಕ ಮಳೆ

ಜಿಲ್ಲೆಯಲ್ಲಿ ರಸಗೊಬ್ಬರ, ಬಿತ್ತನೆ ಬೀಜಗಳ ಅಗತ್ಯ ದಾಸ್ತಾನು: ಕೆ.ಎಚ್‌. ರವಿ
Last Updated 9 ಜುಲೈ 2022, 6:15 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಕೆಲವೆಡೆ ಬೆಳೆ ಹಾನಿಯಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲಿಯೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌. ರವಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 1142 ಮಿ.ಮೀ, ಇದೆ. ಜನವರಿಯಿಂದ ಇಲ್ಲಿಯವರೆಗೂ 389.5 ಮಿ.ಮೀ. . ವಾಡಿಕೆ ಮಳೆಯಿದ್ದು, ಈಗಾಗಲೇ 601.1 ಮಿ.ಮೀ. ಮಳೆಯಾಗಿದೆ. ಶೇ 54 ರಷ್ಟು ಹೆಚ್ಚು ಮಳೆ ಬಿದ್ದಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ ಎಂದರು.

ಜೂನ್ ತಿಂಗಳಲ್ಲಿ 164 ಎಂ.ಎಂ. ವಾಡಿಕೆ ಮಳೆಯಿದ್ದು, 154 ಮಿ.ಮೀ ಮಳೆ ಸುರಿದಿದೆ. ಜುಲೈನಲ್ಲಿ 57.2 ಮಿ.ಮೀ. ವಾಡಿಕೆ ಇದ್ದು, 99.9 ಮಿ.ಮೀ. ಮಳೆಯಾಗಿದೆ. ಶೇ 75 ರಷ್ಟು ಅಧಿಕ ಮಳೆ ಬಿದ್ದಿದೆ ಎಂದರು.

ಮೇ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿ 91.2 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ₹8.9 ಲಕ್ಷ ನಷ್ಟ ಉಂಟಾಗಿದೆ. ಅರಕಲಗೂಡು ತಾಲ್ಲೂಕಿನಲ್ಲಿ 412 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ₹28.02 ಲಕ್ಷ ನಷ್ಟವಾಗಿದೆ. ಹಾಸನ ತಾಲ್ಲೂಕಿನಲ್ಲಿ 30 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ₹2.31 ಲಕ್ಷ ನಷ್ಟುವಾಗಿದೆ. ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ 44 ಹೆಕ್ಟೇರ್‌ ತಂಬಾಕು ಹಾಗೂ 28 ಹೆಕ್ಟೇರ್‌ ನೆಲಗಡಲೆ ಬೆಳೆಗೆ ಹಾನಿಯಅಗಿದೆ ಎಂದು ಮಾಹಿತಿ ನೀಡಿದರು.

ಬೆಳೆ ಪರಿಸ್ಥಿತಿ: ಈ ವರ್ಷ ಮುಂಗಾರು ಹಂಗಾಮಿನಲ್ಲಿ 2,53,596 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಪ್ರಮುಖವಾಗಿ ಮುಸುಕಿನ ಜೋಳದಲ್ಲಿ 1,05,158 ಹೆಕ್ಟೇರ್, ರಾಗಿ 70,186 ಹೆಕ್ಟೇರ್, ಭತ್ತ 38ಸಾವಿರ ಹೆಕ್ಟೇರ್ ಗುರಿ ನಿಗದಿಪಡಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ 1,04,584 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ 41 ರಷ್ಟು ಪ್ರಗತಿಯಾಗಿದೆ ಎಂದು ಹೇಳಿದರು.

ದ್ವಿದಳ ಧಾನ್ಯಗಳು 15,037 ಹೆಕ್ಟೇರ್‌, ಮುಸುಕಿನ ಜೋಳ 72,403 ಹೆಕ್ಟೇರ್‌, ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ 1235 ಹೆಕ್ಟೇರ್‌, ಎಳ್ಳು 987 ಹೆಕ್ಟೇರ್‌, ನೆಲಗಡಲೆ 240 ಹೆಕ್ಟೇರ್, ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ತಂಬಾಕು 11,397 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ತಿಳಿಸಿದರು.

ರಸಗೊಬ್ಬರ ದಾಸ್ತಾನು: ಜಿಲ್ಲೆಯ ಬೆಳೆ ಪದ್ಧತಿ ಆಧರಿಸಿ ಮುಂಗಾರು ಹಂಗಾಮಿಗೆ 1,51,490 ಟನ್. ರಸಗೊಬ್ಬರದ ಬೇಡಿಕೆಯಿದ್ದು, ಯೂರಿಯಾ 52,085 ಟನ್, ಡಿಎಪಿ. 13,695 ಟನ್, ಎಂಒಪಿ 14,080 ಟನ್. ಎನ್‌ಪಿಕೆ. 68,398 ಟನ್, ಎಸ್ಎಸ್‌ಪಿ 3,232 ಟನ್, ರಸಗೊಬ್ಬರ ಹಂಚಿಕೆಯಾಗಿದೆ ಎಂದು ತಿಳಿಸಿದರು.

ಇಲ್ಲಿಯವರೆಗೆ 96,318 ಟನ್. ರಸಗೊಬ್ಬರ ಸರಬರಾಜಾಗಿದ್ದು, 75,358 ಟನ್ ವಿತರಿಸಲಾಗಿದೆ. ಜಿಲ್ಲೆಯ ಚಿಲ್ಲರೆ ಮತ್ತು ಸಗಟು ಮಾರಾಟಗಾರರಲ್ಲಿ 15,727 ಟನ್, ವಿವಿಧ ರಸಗೊಬ್ಬರ ಸರಬರಾಜುದಾರರ ಉಗ್ರಾಣಗಳಲ್ಲಿ 1.598 ಟನ್. ಹಾಗೂ ಜಿಲ್ಲೆಯ ಕಾಪು ದಾಸ್ತಾನಿನಲ್ಲಿ 3,635 ಟನ್ ಸೇರಿದಂತೆ ಒಟ್ಟಾರೆ 20,960 ಟನ್. ರಸಗೊಬ್ಬರ ದಾಸ್ತಾನಿದೆ. ಯೂರಿಯಾ 5,432 ಟನ್, ಡಿಎಪಿ 470 ಟನ್, ಎನ್‌ಪಿಕೆ ಕಾಂಪ್ಲೆಕ್ಸ್‌ 12,616 ಟನ್, ಎಂಒಪಿ 1,317 ಟನ್, ಎಸ್ಎಸ್‌ಪಿ 1,125 ಟನ್ ರಸಗೊಬ್ಬರಗಳ ದಾಸ್ತಾನಿದೆ ಎಂದರು.

ಬಿತ್ತನೆ ಬೀಜ ಪೂರೈಕೆ: ಜಿಲ್ಲೆಯಲ್ಲಿ ಹೆಸರು, ಉದ್ದು, ಅಲಸಂದೆ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ಮುಸುಕಿನ ಜೋಳ, ಭತ್ತ, ರಾಗಿ, ಇತ್ಯಾದಿ ಬಿತ್ತನೆ ಬೀಜಗಳನ್ನು ರಿಯಾಯತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ರಾಷ್ಟ್ರೀಯ ಬೀಜ ನಿಗಮ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮಗಳಿಂದ 4,822 ಕ್ವಿಂಟಲ್ ಬಿತ್ತನೆ ಬೀಜ ಪಡೆದು, ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗಿದೆ. ಬೇಡಿಕೆಗೆ ಅನುಸಾರ 11,012 ಕ್ವಿಂಟಲ್ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದರು.

ಬೆಳೆ ವಿಮೆ ನೋಂದಣಿ ಮಾಡಿ
ಅತಿವೃಷ್ಟಿ, ಅನಾವೃಷ್ಟಿಯು ಪ್ರತಿವರ್ಷ ಕಾಡುತ್ತಿದ್ದು, ಇದರಿಂದ ಪರಿಹಾರ ಪಡೆಯಲು ರೈತರು ಫಸಲ್‌ ಬಿಮಾ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವಂತೆ ಕೆ.ಎಚ್‌. ರವಿ ಸಲಹೆ ನೀಡಿದರು.

ಬ್ಯಾಂಕ್‌, ಸೇವಾ ಕೇಂದ್ರಗಳ ಜೊತೆಗೆ ಇದೀಗ ಗ್ರಾಮ ಪಂಚಾಯಿತಿಯಲ್ಲಿ ಇರುವ ಗ್ರಾಮ ವನ್‌ ಕೇಂದ್ರದಲ್ಲೂ ರೈತರು ನೋಂದಣಿ ಮಾಡಬಹುದು. ಪ್ರಿಮಿಯಂನಲ್ಲಿ ಶೇ 49 ಕೇಂದ್ರ ಸರ್ಕಾರ, ಶೇ 49 ರಾಜ್ಯ ಸರ್ಕಾರ ಹಾಗೂ ಶೇ 2 ರಷ್ಟು ರೈತರು ಭರಿಸಬೇಕಾಗುತ್ತದೆ. ರೈತರು ಇದರ ಪ್ರಯೋಜನ ಪಡೆಯಬೇಕು ಎಂದರು.

ಕಳೆದ ವರ್ಷ 26 ಸಾವಿರ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿದ್ದು, ಈ ಪೈಕಿ 23 ಸಾವಿರ ರೈತರು ₹26 ಕೋಟಿ ಮೊತ್ತದ ಪರಿಹಾರ ಪಡೆದಿದ್ದಾರೆ ಎಂದರು.

ಬೆಳೆ ವಿಮೆ ನೋಂದಣಿ, ಬಿತ್ತನೆ ಬೀಜ, ರಸಗೊಬ್ಬರಗಳ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ತಾಲ್ಲೂಕು ಕೇಂದ್ರಗಳಲ್ಲಿರುವ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT