ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರಿಗೆ 6ನೇ ವೇತನ ಜಾರಿ ಮಾಡಿ

ಶಾಸಕ ಪ್ರೀತಂ ಜೆ.ಗೌಡ ವಿರುದ್ಧ ಪ್ರತಿಭಟನೆ
Last Updated 16 ಏಪ್ರಿಲ್ 2021, 14:11 IST
ಅಕ್ಷರ ಗಾತ್ರ

ಹಾಸನ: ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಬೆಂಬಲಿಸಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ರೈತ ಸಂಘದ ಆಶ್ರಯದಲ್ಲಿ ಶಾಸಕ ಪ್ರೀತಂ ಜೆ.ಗೌಡ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕಳೆದ 10 ದಿನಗಳಿಂದ ಸಾರಿಗೆ ನೌಕರರು 6ನೇ ವೇತನ ಆಯೋಗ ವರದಿ ಜಾರಿ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಾಂತಿಯುತ ಮುಷ್ಕರ ನಡೆಸುತ್ತಿದ್ದಾರೆ. ಆದರೆ, ಸರ್ಕಾರದ ಹಠಮಾರಿ ಧೋರಣೆ ಹಾಗೂ ಅಮಾನವೀಯ ನಿರ್ಧಾರದಿಂದಾಗಿ ಸಾರಿಗೆ ನೌಕರರು ಬೀದಿಗೆ ಬಿದ್ದಿದ್ದಾರೆ. ತಾವು ಕೆಲಸ ಮಾಡುತ್ತಿರುವ ನಿಗಮಕ್ಕೆ ಮತ್ತು ಸರ್ಕಾರಕ್ಕೆ ಆದಾಯ ತಂದು ಕೊಡುವ ನೌಕರರನ್ನು ಭೀಕ್ಷುಕರಂತೆ ನೋಡುವ ರೀತಿಯಲ್ಲಿ ಸರ್ಕಾರ ಪರಿಗಣಿಸಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 4-5 ತಿಂಗಳ ಹಿಂದೆಸರ್ಕಾರದ ಜೊತೆ ಮಾತುಕತೆಯಾದ ಸಂದರ್ಭದಲ್ಲಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಲಿಖಿತ ಭರವಸೆ ನೀಡಿತ್ತು. ಆದರೂ ಅದನ್ನು ಅನುಷ್ಟಾನಗೊಳಿಸುವ ಬದಲು ನೌಕರರನ್ನು ಸಮಾಜದ ಕಳನಾಯಕರಂತೆ ಸರ್ಕಾರ ಬಿಂಬಿಸುತ್ತಿದೆ ಎಂದು ದೂರಿದರು.

ಬೇಡಿಕೆ ಈಡೇರಿಕೆಗೆ ಮುಷ್ಕರ ಮಾರ್ಗವನ್ನಲ್ಲದೆ ಬೇರೆ ಯಾವ ಮಾರ್ಗವನ್ನು ಅನುಸರಿಸಬೇಕು? ಸರ್ಕಾರಿ ನೌಕರರು ಮತ್ತು ನಿಗಮ ಮಂಡಳಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು 6ನೇ ವೇತನ ಪಡೆಯಲು ಅರ್ಹರಾಗಿದ್ದರೆ. ಸರ್ಕಾರ ಕೂಡಲೇ ಎಚ್ಚೆತ್ತು ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸ ಬೇಕು ಎಂದು ಆಗ್ರಹಿಸಿದರು.

ಪರಿಸ್ಥಿತಿ ಕೈಮೀರಿ ಹೋಗುವ ಮುನ್ನವ ಕೆ.ಎಸ್.ಆರ್.ಟಿ.ಸಿ. ನೌಕರರನ್ನು ಮಾತುಕತೆಗೆ ಕರೆದು ಅವರ ಮನವೊಲಿಸುವ ಮೂಲಕ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಕೆ. ಸಂದೇಶ್, ರಾಜ್ಯ ಸಂಚಾಲಕ ಕೆ. ಈರಪ್ಪ, ಛಲವಾದಿ ಮಹಾ ಸಭಾ ಜಿಲ್ಲಾಧ್ಯಕ್ಷ ಎಚ್.ಪಿ. ಪುಟ್ಟರಾಜು, ಮುಖಂಡರಾದ ಎಚ್‌.ಎಸ್‌. ನಾಗರಾಜು, ಕೃಷ್ಣದಾಸ್, ಚೌಡುವಳ್ಳಿ ಜಗದೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, ರವಿತೇಜ, ಸಾರಿಗೆ ನೌಕರರ ಒಕ್ಕೂಟದ ರಾಜ್ಯ
ಉಪಾಧ್ಯಕ್ಷ ಆರ್. ಆನಂದ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT