ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 9 ಲಕ್ಷ ನಗದು, ಮೂರು ಕಾರು ವಶಕ್ಕೆ

ಸೌರಗುತ್ತಿಗೆ ಕೊಡಿಸುವುದಾಗಿ ₹ 21ಲಕ್ಷ ವಂಚನೆ: ಇಬ್ಬರ ಬಂಧನ
Last Updated 16 ಫೆಬ್ರುವರಿ 2023, 5:53 IST
ಅಕ್ಷರ ಗಾತ್ರ

ಹಾಸನ: ಹಾವೇರಿಯ ಕಾಗಿನೆಲೆ ಮಠದಲ್ಲಿ ಸೌರ ಯಂತ್ರಗಳ ಅಳವಡಿಕೆ ಗುತ್ತಿಗೆ ಕೊಡಿಸುವುದಾಗಿ ₹21 ಲಕ್ಷ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಹಿರೀಸಾವೆ ಪೊಲೀಸರು, ₹9.19 ಲಕ್ಷ ನಗದು, ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆಯ ಕೆ.ಲಕ್ಕಿಹಳ್ಳಿ ಗ್ರಾಮದ ರಘು, ಚಿಕ್ಕಮಗಳೂರು ಜಿಲ್ಲೆ ಬಿ.ಕೋಡಿಹಳ್ಳಿ ಗ್ರಾಮದ ಶ್ರೀಧರ್ ಬಂಧಿತರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ರಘು ಹಾಗೂ ಶ್ರೀಧರ್, 3 ವರ್ಷಗಳ ಹಿಂದೆ ಬೆಂಗಳೂರಿನ ಸೌರ ಯಂತ್ರಗಳ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಈ ಸಂದರ್ಭದಲ್ಲಿ ವಿಜಯ್ ಟೆಕ್ ಕಂಪನಿಯ ಬಗ್ಗೆ ಸಂಪೂರ್ಣ ವಿಚಾರ ತಿಳಿದುಕೊಂಡಿದ್ದರು. ವಿಜಯ ಟೆಕ್‌ ಕಂಪನಿಯ ವಿಜಯಕುಮಾರ್ ಜೊತೆಗೆ ಆರೋಪಿಗಳು ಮಾತನಾಡಿದ್ದಾರೆ. ಹಾವೇರಿ ಜಿಲ್ಲೆ ಕಾಗಿನೆಲೆ ಮಠದಲ್ಲಿ ಮ್ಯಾನೇಜರ್ ಆಗಿದ್ದು, ಮಠದಲ್ಲಿ ₹ 1.5 ಕೋಟಿ

ಮೊತ್ತದ ಸೌರ ಯಂತ್ರಗಳ ಅಳವಡಿಕೆ ಗುತ್ತಿಗೆಯನ್ನು ನಿಮ್ಮ ವಿಜಯ ಕಂಪನಿಗೆ ಕೊಡಿಸುವುದಾಗಿ ತಿಳಿಸಿದ್ದರು.

ನಂತರ ವಿಜಯಕುಮಾರ್ ತನ್ನ ಸ್ನೇಹಿತರಾದ ಕಾರ್ತಿಕ್ ಮತ್ತು ಮಂಜುನಾಥ್ ಅವರೊಂದಿಗೆ

ಮಾತನಾಡಿಕೊಂಡು, ಡಿ. 4 ರಂದು ಬೆಳಿಗ್ಗೆ 10.30 ಕ್ಕೆ ಕರೆ ಮಾಡಿ, ಹಣ ಕೊಡುವುದಾಗಿ ತಿಳಿಸಿದ್ದಾರೆ. ಚನ್ನರಾಯಪಟ್ಟಣದ ಹೊನ್ನೇಹಳ್ಳಿ ಗ್ರಾಮದ ಬಳಿ ಬಂದ ಆರೋಪಿಗಳಾದ ರಘು ಮತ್ತು ಸಿದ್ದಪ್ಪ, ₹ 21 ಲಕ್ಷ ತೆಗೆದುಕೊಂಡು ಹೋಗಿದ್ದು, ವಿಜಯಕುಮಾರ್ ಅವರಿಗೆ ರಟ್ಟಿನ ಬಾಕ್ಸ್ ನೀಡಿದ್ದರು. ಇದರಲ್ಲಿ ಗುತ್ತಿಗೆಗೆ ಸಂಬಂಧಿಸಿದಂತೆ ದಾಖಲಾತಿಗಳು ಇರುವುದಾಗಿ ನಂಬಿಸಿದ್ದರು.

ಬಾಕ್ಸ್ ತೆರೆದು ನೋಡಿದಾಗ, ಕೇವಲ ದಿನಪತ್ರಿಕೆಗಳು ಇರುವುದನ್ನು ಗಮನಿಸಿದ ವಿಜಯಕುಮಾರ್ ಅವರಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಕೂಡಲೇ ಕರೆ ಮಾಡಿದಾಗ, ಆರೋಪಿಗಳ ಮೊಬೈಲ್‌ ಬಂದ್‌ ಆಗಿದ್ದವು.

ಜ. 20ರಂದು ವಿಜಯಕುಮಾರ್ ಅವರು ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಡಿವೈಎಸ್ಪಿ ಮುರುಳೀಧರ್ ಮಾರ್ಗದರ್ಶನದಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ. ಪ್ರಭಾಕರ್ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹರಿರಾಂ ಶಂಕರ್‌ ವಿವರಿಸಿದರು.

ಆರೋಪಿಗಳಿಂದ ₹ 9.19 ಲಕ್ಷ ನಗದು, ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ ಕಾರು, ದೋಚಿದ್ದ ಹಣದಿಂದ ಖರೀದಿಸಿದ್ದ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಭೇದಿಸಿದ ತಂಡಕ್ಕೆ ₹ 5ಸಾವಿರ ಬಹುಮಾನ ಘೋಷಿಸಿರುವುದಾಗಿ ಎಸ್ಪಿ ತಿಳಿಸಿದರು.

ಅಗ್ನಿ ಅನಾಹುತ:

ತಾಲ್ಲೂಕಿನ ದುದ್ದ ಹೋಬಳಿಯ ಹೊನ್ನಮ್ಮನಹಳ್ಳಿಯ ತೋಟದ ಮನೆಗೆ ಸೋಮವಾರ ತಡರಾತ್ರಿ ಬೆಂಕಿ ತಗುಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ.

ಗ್ರಾಮದ ಮರಿಗೇಗೌಡರ ತೋಟದ ಮನೆಯಲ್ಲಿ ದುರಂತ ಸಂಭವಿಸಿದ್ದು, ಮನೆಯೊಳಗೆ ಸಂಗ್ರಹಿಸಿದ್ದ ನಾಲ್ಕು ಸಾವಿರ ಕೊಬ್ಬರಿ, ನಾಲ್ಕು ಹಸು, ಮೇಕೆಗಳು ಬೆಂಕಿಯಲ್ಲಿ ಸುಟ್ಟಿವೆ.

ಈ ಅಗ್ನಿ ಅವಘಡದಿಂದ ರೈತ ಮರಿಗೇಗೌಡ ಅವರಿಗೆ ತೀವ್ರ ಆಘಾತವಾಗಿದ್ದು, ಅಪಾರ ಆರ್ಥಿಕ ನಷ್ಟ ಉಂಟಾಗಿದೆ. ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಪರಿಹಾರ ಒದಗಿಸುವಂತೆ ಜೆಡಿಎಸ್ ವಕ್ತಾರ ಹೊಂಗೆರೆ ರಘು ಆಗ್ರಹಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

₹25 ಲಕ್ಷ ಮೌಲ್ಯದ ಅಕ್ವಾ ಮರೈನ್‌ ಸ್ಟೋನ್‌ ಕಿತ್ತು ಪರಾರಿ

ಹಾಸನ: ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಣ್ಣಿಗೆ ಖಾರದ ಪುಡಿ ಎರಚಿ ₹ 25ಲಕ್ಷ ಮೌಲ್ಯದ 71 ಅಕ್ವಾ ಮರೈನ್ ಸ್ಟೋನ್ ಕಿತ್ತುಕೊಂಡು ಪರಾರಿಯಾಗಿರುವ ಪ್ರಕರಣ ಅರಸೀಕೆರೆ ತಾಲ್ಲೂಕಿನ ಗಂಡಸಿ ಠಾಣೆಯಲ್ಲಿ ದಾಖಲಾಗಿದೆ.

ಅಕ್ವಾ ಮರೈನ್ ಸ್ಟೋನ್‍ಗಳನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕೊಂಡುಕೊಳ್ಳುವ ಹಾಗೂ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿರುವ ಮಂಡ್ಯದ ಪಿನೆಕ್ಸ್ ಟ್ರೇಟ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಕಾನೂನು ಸಲಹೆಗಾರ ಮನೋಹರ ಈ ಬಗ್ಗೆ ದೂರು ನೀಡಿದ್ದಾರೆ.

ಮನೋಹರ್‌ ಅವರು ತಮ್ಮ ಸ್ನೇಹಿತ ಪ್ರದೀಪ್‌ಕುಮಾರ್‌ ಅವರಿಗೆ ಪರಿಚಿತರಾದ ಬೆಂಗಳೂರಿನ ವನುಜಾ, ವಿಜಯಲಕ್ಷ್ಮಿ ಹಾಗೂ ರಕ್ಷಿತ್‌ ಅವರಿಗೆ ಮಾರಾಟ ಮಾಡಲು ಜನವರಿ 31 ರಂದು 71 ಅಕ್ವಾ ಮರೈನ್‌ ಸ್ಟೋನ್‌ಗಳನ್ನು ತೆಗೆದುಕೊಂಡು ಹಾಸನಕ್ಕೆ ಬಂದಿದ್ದರು.

ನಗರದ ಜ್ಯೂವೆಲ್‍ರಾಕ್ ಹೋಟೆಲ್‍ನಲ್ಲಿ ವನುಜಾ, ವಿಜಯಲಕ್ಷ್ಮೀ ಹಾಗೂ ರಕ್ಷಿತ್ ಅವರನ್ನು ಭೇಟಿ ಮಾಡಿದ ಮನೋಹರ್‌ ಸ್ಟೋನ್‌ಗಳನ್ನು ತೋರಿಸಿದ್ದಾರೆ. ಎಲ್ಲ ಸ್ಟೋನ್‌ಗಳನ್ನು ₹ 25ಲಕ್ಷಕ್ಕೆ ಕೊಂಡುಕೊಳ್ಳುವುದಾಗಿ ಹಾಗೂ ಬಾಸ್ ಫಾರಂಹೌಸ್‍ನಲ್ಲಿ ಇದ್ದು, ಅಲ್ಲಿ ದುಡ್ಡು ಕೊಡುತ್ತೇವೆ ಎಂದು ಹೇಳಿ ಮನೋಹರ್ ಮತ್ತು ಪ್ರದೀಪ್‌ಕುಮಾರ್‌ ಅವರನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ.

ಹಾಸನದಿಂದ ಸುಮಾರು 25ಕಿ.ಮೀ ಅರಸೀಕೆರೆ ರಸ್ತೆಯ ಬಾಗೇಶಪುರ ಗ್ರಾಮದಲ್ಲಿ ಗುಡ್ಡದ ಕಡೆಗೆ ಹೋಗುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ 5-6 ಜನರು, ಮನೋಹರ ಅವರಿದ್ದ ಕಾರನ್ನು ಸುತ್ತುವರಿದು, ಕಣ್ಣಿಗೆ ಖಾರದ ಪುಡಿ ಎರಚಿ, ಕೈಯಲ್ಲಿದ್ದ 71 ಸ್ಟೋನ್‍ಗಳ ಬಾಕ್ಸ್‌ ಕಿತ್ತುಕೊಂಡಿದ್ದಾರೆ. ಮನೋಹರ ಹಾಗೂ ಪ್ರದೀಪಕುಮಾರ್ ಅವರಿಗೆ ಕೈಯಲ್ಲಿದ್ದ ದೊಣ್ಣೆಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ.

ಅವರಿಂದ ಹೇಗೋ ತಪ್ಪಿಸಿಕೊಂಡು ಹೋಗಿದ್ದು, ಸ್ಟೋನ್‌ಗಳನ್ನು ಕದ್ದುಕೊಂಡು ಹೋಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಫೆ. 13 ರಂದು ಮನೋಹರ್‌, ಗಂಡಸಿ ಠಾಣೆಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT