ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ ತಹಶೀಲ್ದಾರ್‌ ವಿರುದ್ಧ ಕ್ರಮಕ್ಕೆ ಆಗ್ರಹ

ಜೀತ ವಿಮುಕ್ತ ಪರಿಶಿಷ್ಟ ಜಾತಿಯವರಿಗೆ ಜಮೀನು ಬಿಟ್ಟು ಕೊಡಲು ಬೆದರಿಕೆ: ಆರೋಪ
Last Updated 4 ಸೆಪ್ಟೆಂಬರ್ 2020, 12:58 IST
ಅಕ್ಷರ ಗಾತ್ರ

ಹಾಸನ: ‘ಜೀತ ವಿಮುಕ್ತ ಪರಿಶಿಷ್ಟ ಜಾತಿಯವರ ಹಿಡುವಳಿ ಜಮೀನನ್ನು ಕಿತ್ತುಕೊಂಡು ಮಿಲಿಟರಿ ಕ್ಯಾಂಪ್‌ಗೆ ಮಂಜೂರು
ಮಾಡಿಸಲು ಮುಂದಾಗಿರುವ ಸಕಲೇಶಪುರ ತಹಶೀಲ್ದಾರ್‌ ಮಂಜುನಾಥ್‌ ಮತ್ತು ಮಿಲಿಟರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಜೀತ ವಿಮುಕ್ತಿ ಕರ್ನಾಟಕ ಕೃಷಿ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.

‘ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದ ಸರ್ವೆ ನಂ. 330 ರಲ್ಲಿ ಕಾಳಯ್ಯ ಬಿನ್ ಕೆಂಚಯ್ಯ ಎಂಬ ಜೀತ ವಿಮುಕ್ತರಿಗೆ 1976ರಲ್ಲಿ 3 ಎಕರೆ ಮಂಜೂರಾಗಿ ಸಾಗುವಳಿ ಚೀಟಿ, ಒಎಂ ದಾಖಲಾತಿ ಹಾಗೂ ಪಹಣಿಯಲ್ಲೂ ನಮೂದಾಗಿದೆ. ಈ ಜಮೀನು ಬಸವನಹಳ್ಳಿ ಮಿಲಿಟರಿ ಕ್ಯಾಂಪ್‌ಗೆ ಹೊಂದಿಕೊಂಡಂತೆ ಇರುವುದರಿಂದ ನಾವು ಬೆಳೆದಿದ್ದ ಬಾಳೆ, ಸಿಲ್ವರ್‌ ಗಿಡಗಳನ್ನು ಪ್ರತಿ ಬಾರಿಯೂ ಕಿತ್ತು ಹಾಕಿ ಮಿಲಿಟರಿಯವರು ತೊಂದರೆ ಕೊಡುತ್ತಲೇ ಬಂದಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ತಹಶೀಲ್ದಾರ್‌ ಅವರು ಮಿಲಿಟರಿ ಅಧಿಕಾರಿಗಳನ್ನು ನಮ್ಮ ವಿರುದ್ಧ ಎತ್ತಿ ಕಟ್ಟಿ, ಜಮೀನಿಗೆ ಹೋಗಲು ಬಿಡುತ್ತಿಲ್ಲ. ಸ್ವಂತ ಜಮೀನಿನಲ್ಲಿ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ. ಸರ್ಕಾರಕ್ಕೆ ಈ ಜಮೀನನ್ನು ಬರೆದು ಕೊಡಿ ಎಂಬ ಬೆದರಿಕೆ ಹಾಕುತ್ತಿದ್ದಾರೆ’ ಎಂದು ದೂರಿದರು.

‘ಜೀತ ವಿಮುಕ್ತ ಕುಟುಂಬದವರಿಗೆ ವಾಸಿಸಲು ಸ್ವಂತ ಮನೆಯಿಲ್ಲದೆ ಮತ್ತೊಬ್ಬರ ಜಮೀನಿನಲ್ಲಿ ವಾಸಿಸುವಂತಾಗಿದೆ.
ಆದ್ದರಿಂದ ಜಿಲ್ಲಾಧಿಕಾರಿ ಆದೇಶದಂತೆ ಮಳಲಿ ಗ್ರಾಮ ಸರ್ವೆ ನಂ. 330ರ ಜಮೀನನ್ನು ಬಿಟ್ಟು ಉಳಿದ ಬಸವನಹಳ್ಳಿ
ಜಾಗವನ್ನು ಮಿಲಿಟರಿ ಕ್ಯಾಂಪ್‌ಗೆ ಮಂಜೂರು ಮಾಡಬೇಕು. 1976 ರಿಂದಲೂ ತೊಂದರೆ ನೀಡುತ್ತಿರುವ ಮಿಲಿಟರಿ
ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು’ ಎಂದು
ಸಂತ್ರಸ್ತರಾದ ಹರೀಶ್‌, ದೇವರಾಜು, ಗಂಗಮ್ಮ, ಶಾರದಮ್ಮ ಆಗ್ರಹಿಸಿದರು.

ಬೆಳಗೋಡು ಹೋಬಳಿ ಮೂಗಲಿ (ಶಿಡಿಗಳಲೆ) ಗ್ರಾಮದ ಜೀತ ವಿಮುಕ್ತರಿಗೆ ಬದಲಿ ಭೂಮಿ ನೀಡಬೇಕು. ಹೆಬ್ಬನಹಳ್ಳಿ
ಗ್ರಾಮದ ಸರ್ವೆ ನಂ.30 ರ ಜಮೀನನ್ನು ಜೀತ ವಿಮುಕ್ತರಿಗೆ ಖಾತೆ ಮಾಡದೆ ಹೇಮಾವತಿ ಜಲಾಶಯ ಯೋಜನೆಯ
ಮುಳುಗಡೆ ಸಂತ್ರಸ್ತರಿಗೆ ಮಂಜೂರು ಮಾಡಿರುವುದು ಸರಿಯಲ್ಲ. ಒಂದೇ ಜಮೀನನ್ನು ಇಬ್ಬರಿಗೆ ಸಾಗುವಳಿ ನೀಡಿರುವ
ತಹಶೀಲ್ದಾರ್‌ ಅವರ ಕ್ರಮ ಖಂಡನೀಯ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ
ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾ ಸಂಚಾಲಕ ಬೈರಪ್ಪ, ಮಳಲಿ ಗ್ರಾಮದ ಹರೀಶ್‌, ದೇವರಾಜ್‌, ಗಂಗಮ್ಮ, ಶಾರದಾ ಇದ್ದರು.

ವೈಯಕ್ತಿಕ ದ್ವೇಷದಿಂದ ಆರೋಪ
‘ಮಳಲಿ ಗ್ರಾಮದ ಈ ವಿಷಯದ ಬಗ್ಗೆ ಯಾರೂ ನನ್ನ ಗಮನಕ್ಕೆ ತಂದಿಲ್ಲ. ಜೀತ ವಿಮುಕ್ತ ಪರಿಶಿಷ್ಟ ಜಾತಿಯ ಕುಟುಂಬಕ್ಕೆ ಸಮಸ್ಯೆ ಆಗಿದ್ದರೆ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಬಗೆಹರಿಸಿಕೊಳ್ಳಬಹುದಿತ್ತು. ಮಳಲಿ ಗ್ರಾಮದ ಸರ್ವೆ ನಂ. 330ರ 3 ಎಕರೆ ಜಾಗ 1974ರಲ್ಲಿಯೇ ಮಿಲಿಟರಿಗೆ ಮಂಜೂರಾಗಿದೆ. ಸಂತ್ರಸ್ತರು ದುರಸ್ತಿಗೆ ಅರ್ಜಿ ಸಲ್ಲಿಸಿದರೆ ಮತ್ತೊಮ್ಮೆ ಪರಿಶೀಲಿಸಿ, ಯಾರ ಯಾರ ಜಮೀನು ಎಲ್ಲಿದೆ ಎಂದು ಅಳತೆ ಮಾಡಿಕೊಡುತ್ತೇವೆ. ವೈಯಕ್ತಿಕ ದ್ವೇಷದಿಂದ ನನ್ನ ವಿರುದ್ಧ ಆರೋಪ ಮಾಡಿರಬಹುದು’ಎಂದು ಸಕಲೇಶಪುರ ತಹಶೀಲ್ದಾರ್‌ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT