ಮೊಸಳೆ ಹೊಸಳ್ಳಿ ಸರ್ಕಾರಿ ಶಾಲೆ ದತ್ತು

ಹಾಸನ: ಜಿಲ್ಲೆಯಲ್ಲಿರುವ ಕೈಗಾರಿಕೆಗಳ ಸಿಎಸ್‌ಆರ್ ಹಣವನ್ನು ಬಡವರ ಮಕ್ಕಳು ವ್ಯಾಸಂಗ ಮಾಡುವ ಶಾಲೆ, ಕಾಲೇಜುಗಳಿಗೆ ಮೂಲ ಸೌಕರ್ಯ ನೀಡಲು ಬಳಸಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಕೂಡಲೇ ಜಿಲ್ಲೆಯ ಕೈಗಾರಿಕೆಗಳ ಮಾಲೀಕರ ಸಭೆ ಕರೆದು ಸಿಎಸ್‌ಆರ್ ನಿಧಿಯಲ್ಲಿ ಎಷ್ಟು ಹಣವನ್ನು ಶಾಲಾ, ಕಾಲೇಜು ಮೂಲಸೌಲಭ್ಯಕ್ಕೆ ನೀಡಲಾಗಿದೆ ಎಂಬ ಮಾಹಿತಿ ಪಡೆಯಬೇಕು. ಕೈಗಾರಿಕಾ ಪ್ರದೇಶದಲ್ಲಿರುವ ಹಿಮತ್ ಸಿಂಗ್ ಕಾ ಕಂಪನಿ ಕಾರ್ಮಿಕರಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರ ₹500 ಕೋಟಿ ನೀಡಿದೆ. ಇಲ್ಲಿನ ನೀರು ಮತ್ತು ಭೂಮಿ ಬಳಸಿಕೊಂಡು ಸಿಎಸ್‌ಆರ್ ನಿಧಿ ಅಡಿ ಸರ್ಕಾರಿ ಶಾಲೆಗಳಿಗೆ ಅನುದಾನ ನೀಡಲು ಏನು ಸಮಸ್ಯೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಮೊಸಳೆಹೊಸಳ್ಳಿ ಸರ್ಕಾರಿ ಶಾಲೆಯನ್ನು ದುತ್ತು ಪಡೆದು, ವಿದ್ಯಾರ್ಥಿಗಳಿಗೆ ಸಮವಸ್ತ್ರ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು. ಜಿಲ್ಲೆಯ ಜೆಡಿಎಸ್ ಶಾಸಕರು ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ವಿದ್ಯೆ ಇಂದು ದಾನವಾಗಿ ಉಳಿಯದೆ, ಮಾರಾಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರೂ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ಕಾಲೇಜುಗಳಲ್ಲಿ ಮೂಲ ಸೌಕರ್ಯ ಕೊರತೆ ಇದೆ. ಶೇಕಡಾ 80ರಷ್ಟು ಕಾಲೇಜುಗಳಲ್ಲಿ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್, ಕುರ್ಚಿ, ಡೆಸ್ಕ್‌ಗಳು ಇಲ್ಲ. ಬಡವರ ಮಕ್ಕಳಿಗೆ ಶಿಕ್ಷಣ ನೀಡಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ ಎಂದರು.
ಜಿಲ್ಲೆಯ ಕೈಗಾರಿಕೆಗಳಿಗೆ ಅಗತ್ಯ ಸೌಕರ್ಯಗಳನ್ನು ನೀಡಲಾಗಿದೆ. ಕೈಗಾರಿಕೆ ಉದ್ದೇಶಕ್ಕೆ ಪಡೆದ ಜಮೀನನ್ನು ಇನ್ನೂ ಸರಿಯಾದ ರೀತಿಯಲ್ಲಿ ಬಳಕೆ ಮಾಡುತ್ತಿಲ್ಲ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುಳ್ಳು ಹೇಳುತ್ತಾರೆ. ಬಡವರ ಮಕ್ಕಳ ಬಗ್ಗೆ ಅವರಿಗೆ ಯಾವುದೇ ಚಿಂತನೆ ಇಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ನಿರ್ಧರಿಸಲಾಗಿತ್ತು. ಅಷ್ಟರಲ್ಲಿ ಸರ್ಕಾರ ಪತನವಾಯಿತು ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.