ಸೋಮವಾರ, ಜೂನ್ 14, 2021
20 °C
ಮೇ 12 ರವರೆಗೆ 204 ಮಿ.ಮೀ ಮಳೆ: ಕೋವಿಡ್ ಸಂಕಷ್ಟದ ಮಧ್ಯೆಯೂ ಕೃಷಿ ಕಾರ್ಯದಲ್ಲಿ ರೈತರು ನಿರತ

ವಾಡಿಕೆಗಿಂತ ಹೆಚ್ಚು ಮಳೆ: ಕೃಷಿ ಚಟುವಟಿಕೆ ಚುರುಕು

ಜಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

ಅರಕಲಗೂಡು: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಅಧಿಕವಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ.

ಜನವರಿಯಿಂದ ಮೇ ವರೆಗಿನ ವಾಡಿಕೆ ಮಳೆ ಪ್ರಮಾಣ 108 ಮಿ.ಮೀ ಇದ್ದು, ಮೇ 12 ರವರೆಗೆ 204 ಮಿ.ಮೀ ಮಳೆಯಾಗಿದೆ. ಕೋವಿಡ್ ಸಂಕಷ್ಟದ ಮಧ್ಯೆಯೂ ರೈತರು ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ರೈತರು ಜಮೀನನ್ನು ಬಿತ್ತನೆ ಕಾರ್ಯಕ್ಕೆ ಸಿದ್ಧಗೊಳಿಸುತ್ತಿದ್ದಾರೆ. ತಂಬಾಕು ನಾಟಿ ಚುರುಕಿನಿಂದ ಸಾಗಿದ್ದರೆ ಆಲೂಗೆಡ್ಡೆ ಬಿತ್ತನೆಗೆ ಭೂಮಿ ಹದಗೊಳಿಸಿರುವ ರೈತರು ಬಿತ್ತನೆ ಬೀಜ ಖರೀದಿಸಿ ಸಂಸ್ಕರಣೆಯಲ್ಲಿ ನಿರತರಾಗಿದ್ದಾರೆ. ಶುಂಠಿ ಬಿತ್ತನೆ ಶೇ 60ರಷ್ಟು ಪೂರ್ಣಗೊಂಡಿದೆ. ಮುಸುಕಿನ ಜೋಳದ ಬಿತ್ತನೆಯೂ ಪ್ರಗತಿಯಲ್ಲಿದೆ.

2021-22ನೇ ಸಾಲಿನ ಮುಂಗಾರು ಹಂಗಾಮಿಗೆ ತಾಲ್ಲೂಕಿನಲ್ಲಿ 33,770 ಹೆಕ್ಟೇರ್‌ ಗುರಿ ನಿಗದಿಯಾಗಿದ್ದು, ಈವರೆಗೆ 3011 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಿದೆ. ಇದರಲ್ಲಿ ಮುಸುಕಿನ ಜೋಳ 535 ಹೆಕ್ಟೇರ್‌, ತಂಬಾಕು 1235 ಹೆಕ್ಟೇರ್‌, ಉದ್ದು 16 ಹೆಕ್ಟೇರ್‌, ಹೆಸರು 10 ಹೆಕ್ಟೇರ್‌, ಅಲಸಂದೆ 1180 ಹೆಕ್ಟೇರ್‌, ನೆಲಗಡಲೆ 30 ಹೆಕ್ಟೇರ್‌, ಕೂಳೆ ಕಬ್ಬು 5 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕೃಷಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದ್ದು, ಕೋವಿಡ್ ಕಾರಣದಿಂದ ಗ್ರಾಮಗಳಿಗೆ ಮರಳಿರುವ ಯುವಕರು ಕೂಡ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಂಗಾರು ಹಂಗಾಮಿಗೆ ಎಲ್ಲ ಕೃಷಿ ಬೆಳೆಗಳಿಗೆ ಸಂಬಂಧಿಸಿದಂತೆ 2,054 ಕ್ವಿಂಟಲ್ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ವಿತರಿಸಲು ಗುರಿ ನಿಗದಿಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು.

5 ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯಕ್ಕೆ ತಕ್ಕಂತೆ ದಾಸ್ತಾನಿದೆ. ಕೃಷಿ ಪರಿಕರಗಳಾದ ಜಿಂಕ್ ಸಲ್ಫೇಟ್, ಲಘು ಪೋಷಕಾಂಶಗಳು, ಸಸ್ಯ ಸಂರಕ್ಷಣಾ ಔಷಧಿಗಳು ಲಭ್ಯವಿದ್ದು, ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು. ಮುಂಗಾರು ಹಂಗಾಮಿಗೆ 23,800 ಟನ್ ರಸಗೊಬ್ಬರದ ಅಗತ್ಯವಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಟಿಎಪಿಸಿಎಂಎಸ್, ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ದಾಸ್ತಾನು ಹಾಗೂ ವಿತರಣೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಏಪ್ರಿಲ್ ಅಂತ್ಯಕ್ಕೆ 3280 ಟನ್ ವಿವಿಧ ರಸಗೊಬ್ಬರಗಳ ದಾಸ್ತಾನಿದೆ. ತಂಬಾಕು ಬೆಳೆಗಾರರಿಗೆ ಮಂಡಲಿ ವತಿಯಿಂದ ರಸಗೊಬ್ಬರ ವಿತರಣೆಯಾಗಲಿದೆ. ಮೇ 24 ರವರೆಗೆ  ರೈತ ಸಂಪರ್ಕ ಕೇಂದ್ರಗಳು ಬೆಳಿಗ್ಗೆ 6 ರಿಂದ 10 ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ಉತ್ತಮ ಮಳೆ ಬಿದ್ದು, ಕೃಷಿ ಚಟುವಟಿಕೆ ಚುರುಕುಗೊಳ್ಳುತ್ತಿದೆ. ಹೊರ ಊರಲ್ಲಿ ನೆಲೆಸಿದ್ದವರು ಗ್ರಾಮಗಳಿಗೆ ಮರಳಿರುವುದರಿಂದ ಕಳೆದ ವರ್ಷ ಶೇ 13ರಷ್ಟು ಕೃಷಿ ಉತ್ಪನ್ನದಲ್ಲಿ ಹೆಚ್ಚಳವಾಗಿತ್ತು. ಈ ಬಾರಿಯೂ ಇದು ಮುಂದುವರಿಯುವ ನಿರೀಕ್ಷೆ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಎಚ್.ರಮೇಶ್ ಕುಮಾರ್ ಹೇಳಿದರು.

ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ವಾತಾವರಣ ಪೂರಕವಾಗಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದೇವೆ. ರೈತರ ಆರ್ಥಿಕ ಸಂಕಷ್ಟಕ್ಕೆ ಸರ್ಕಾರ ನೆರವಾಗಬೇಕು ಎಂದು ಪ್ರಗತಿಪರ ಕೃಷಿಕ ದೊಡ್ಡಮಗ್ಗೆ ಜಗದೀಶ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು