ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು | ಜಲಜೀವನ್‌ ಮಿಷನ್‌ ಕಳಪೆ ಕಾಮಗಾರಿ: ಗ್ರಾಮಸ್ಥರ ದೂರು

Published 20 ಮೇ 2024, 8:50 IST
Last Updated 20 ಮೇ 2024, 8:50 IST
ಅಕ್ಷರ ಗಾತ್ರ

ಹಳೇಬೀಡು: ಪ್ರತಿ ಮನೆಗೂ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ, ಸಿದ್ದಾಪುರ ಗ್ರಾಮದಲ್ಲಿ ಹಳ್ಳ ಹಿಡಿಯುತ್ತಿದೆ. ಕಾಮಗಾರಿ ಕಳಪೆ ಆಗಿರುವುದರಿಂದ ಮನೆಗಳಿಗೆ ನೀರು ತಲುಪುತ್ತದೆಯೇ ಎಂಬ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದೆ.

ಮೂರು ಅಡಿ ಆಳದ ಕಾಲುವೆ ತೆಗೆದು, ಪೈಪ್ ಲೈನ್ ಹಾಕಬೇಕು ಎಂದು ಅಂದಾಜು ಮಾಡಲಾಗಿದೆ. ಕೇವಲ 1 ರಿಂದ 1.5 ಅಡಿ ಆಳ ಮಣ್ಣು ತೆಗೆದು ಪೈಪ್ ಹಾಕಲಾಗುತ್ತಿದೆ. ರಸ್ತೆ ಪಕ್ಕದಲ್ಲಿಯೇ ಪೈಪ್‌ಲೈನ್ ಮಾಡಲಾಗುತ್ತಿದ್ದು, ಟ್ಯಾಂಕರ್, ಟಿಪ್ಪರ್ ಮೊದಲಾದ ದೊಡ್ಡ ವಾಹನಗಳು ಸಿದ್ದಾಪುರ ರಸ್ತೆಯಲ್ಲಿ ಚಲಿಸುತ್ತವೆ. ಹೀಗಾಗಿ ಪೈಪ್‌ಲೈನ್‌ಗೆ ಹಾನಿ ಆಗುವ ಸಾಧ್ಯತೆ ಇದೆ ಎಂಬ ಅಸಮಾಧಾನದ ಸಿದ್ದಾಪುರ ಜನರಿಂದ ಕೇಳಿ ಬರುತ್ತಿದೆ. 

‘ಬಂಡೆ ಸಿಕ್ಕಿದ ಜಾಗದಲ್ಲಿ ಕೊರೆದು, ಆಳದಲ್ಲಿ ಪೈಪ್‌ಲೈನ್ ಮಾಡಿಸಲು ಗುತ್ತಿಗೆದಾರರು ಕ್ರಮ ಕೈಗೊಂಡಿಲ್ಲ. ಬಂಡೆ ಮೇಲ್ಬಾಗದ ಮಣ್ಣು ತೆಗೆದು ಪೈಪ್ ಜೋಡಿಸಲಾಗುತ್ತಿದೆ. ಮಣ್ಣು ಸಡಿಲವಾದ ಜಾಗದಲ್ಲಿಯೂ ಪೈಪ್‌ಲೈನ್ ಆಳಕ್ಕೆ ಇಳಿಯುತ್ತಿಲ್ಲ. ಗುತ್ತಿಗೆದಾರರ ಕಡೆಯ ಕೆಲಸಗಾರರು ಗ್ರಾಮಸ್ಥರ ಮಾತಿಗೆ ಕಿವಿಗೊಡದೇ ಬೇಕಾಬಿಟ್ಟಿ ಕಾಮಗಾರಿ ಕೈಗೊಂಡಿದ್ದಾರೆ’ ಎಂದು ಗ್ರಾಮಸ್ಥ ಜಿ.ಎನ್. ರಾಜಶೇಖರ್ ಆರೋಪಿಸಿದ್ದಾರೆ. 

‘ಕೃಷಿ ಪಂಪ್‌ಸೆಟ್‌ನ ಪೈಪ್ ಲೈನ್‌ನ ಅಡಿಯಲ್ಲಿ ಜಲಜೀವನ್ ಮಿಷನ್ ಪೈಪ್ ಹಾಕಬೇಕು. ಕೆಲವು ಕಡೆ ಪಂಪ್‌ಸೆಟ್‌ನ ಪೈಪ್ ಲೈನ್‌ಗಿಂತ ಮೇಲ್ಬಾಗದಲ್ಲಿ ಜೆಜೆಎಂ ಪೈಪ್ ಹಾಕಲಾಗಿದೆ. ರೈತರ ಪೈಪ್‌ಲೈನ್ ಜಖಂ ಆದರೆ ಸರಿಪಡಿಸಲು ಕಷ್ಟವಾಗುತ್ತದೆ. ರೈತರು ಪೈಪ್‌ಲೈನ್ ಸರಿಪಡಿಸುವ ಸಂದರ್ಭದಲ್ಲಿ ಜೆಜೆಎಂ ಪೈಪ್ ಲೈನ್‌ಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ’ ಎಂಬ ಮಾತು ರೈತ ರಂಗಸ್ವಾಮಿ ಅವರಿಂದ ಕೇಳಿ ಬಂತು. 

ಕಟ್ಟೆಸೋಮನಹಳ್ಳಿ ರಸ್ತೆಯಲ್ಲಿ ಬೇಕಾಬಿಟ್ಟಿ ಪೈಪ್ ಹಾಕಿರುವುದರಿಂದ ರಸ್ತೆಯಲ್ಲಿ ತಗ್ಗು ದಿಣ್ಣೆ ಹೆಚ್ಚಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಮಾತ್ರವಲ್ಲದೇ, ಜನರೂ ನಡೆದುಕೊಂಡು ಹೋಗುವುದು ಕಷ್ಟವಾಗಿದೆ. ಮಳೆ ಬಂದಿರುವುದರಿಂದ ರಸ್ತೆ ಕೆಸರು ಗದ್ದೆಯಾಗಿದೆ. ರೈತರು ಎತ್ತಿನ ಗಾಡಿ ಕಟ್ಟಿಕೊಂಡು ಕೃಷಿ ಕಾಯಕ ಮಾಡುವುದು ಕಷ್ಟವಾಗಿದೆ.

‘ಪ್ರವಾಸಿ ತಾಣದ ಜೊತೆಗೆ ಯಾತ್ರಾ ಸ್ಥಳವಾಗಿರುವ ಪುಷ್ಪಗಿರಿ ಬೆಟ್ಟದ ಮುಂಭಾಗ ರಸ್ತೆ ಹಾಗೂ ಬೆಟ್ಟದ ತಿರುವಿನಲ್ಲಿ ಪೈಪ್‌ಲೈನ್‌ ಕಾಲುವೆ ನಿರ್ಮಾಣ ಮಾಡಲು ತೆಗೆದ ಮಣ್ಣು ರಸ್ತೆಗೆ ಬಿದ್ದಿದೆ. ಇದರಿಂದ ಪುಷ್ಪಗಿರಿಗೆ ತೆರಳುವವರಿಗೆ ತೊಂದರೆಯಾಗಿದೆ. ಇಲ್ಲಿ ವಾಹನ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಊರಾಚೆ ದೂರದಲ್ಲಿರುವ ಮನೆಗಳಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸುತ್ತಿಲ್ಲ. ಗುತ್ತಿಗೆದಾರರ ಸಿಬ್ಬಂದಿಯನ್ನು ವಿಚಾರಿಸಿದರೆ, ಗ್ರಾಮ ಪಂಚಾಯಿತಿಗೆ ಅರ್ಜಿ ಕೊಡಿ ಎನ್ನುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ನೀರಿಗೆ ಹಣ ಕೊಡುವುದು ಸುಲಭವಲ್ಲ. ಮೀಟರ್ ಅಳವಡಿಸಿ ನೀರು ಕೊಡುವ ವ್ಯವಸ್ಥೆ ಹಳ್ಳಿ ಜನರಿಗೆ ಹೊರೆಯಾಗುತ್ತದೆ. ಮೀಟರ್ ಅಳವಡಿಸುವ ವ್ಯವಸ್ಥೆ ಕೈಬಿಟ್ಟು ಹಳ್ಳಿಗರ ಕೈಗೆಟುಕುವಂತೆ ವಾರ್ಷಿಕ ನಿರ್ವಹಣಾ ವೆಚ್ಚವನ್ನು ಮಾತ್ರ ಪಡೆದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ರಾಜಶೇಖರ್.

ಗುತ್ತಿಗೆದಾರರು ಜೆಜೆಎಂ ಕಾಮಗಾರಿಯನ್ನು ಸರಿಡಿಸದಿದ್ದರೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಸಿದ್ದಾಪುರ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಹಳೇಬೀಡು ಸಮೀಪದ ಸಿದ್ದಾಪುರ ಗ್ರಾಮದ ಮುಂಭಾಗದಲ್ಲಿಯೇ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಅಸಮರ್ಪಕವಾಗಿದೆ. 
ಹಳೇಬೀಡು ಸಮೀಪದ ಸಿದ್ದಾಪುರ ಗ್ರಾಮದ ಮುಂಭಾಗದಲ್ಲಿಯೇ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಅಸಮರ್ಪಕವಾಗಿದೆ. 
ಹಳೇಬೀಡು ಸಮೀಪದ ಪುಷ್ಪಗಿರಿ ಬೆಟ್ಟದ ತಿರುವಿನಲ್ಲಿ ಪೈಪ್‌ಲೈನ್‌ಗೆ ತೆಗೆದ ಗುಂಡಿ ಮುಚ್ಚದೇ ಓಡಾಟಕ್ಕೆ ತೊಂದರೆಯಾಗಿದೆ.
ಹಳೇಬೀಡು ಸಮೀಪದ ಪುಷ್ಪಗಿರಿ ಬೆಟ್ಟದ ತಿರುವಿನಲ್ಲಿ ಪೈಪ್‌ಲೈನ್‌ಗೆ ತೆಗೆದ ಗುಂಡಿ ಮುಚ್ಚದೇ ಓಡಾಟಕ್ಕೆ ತೊಂದರೆಯಾಗಿದೆ.
ಹಳೇಬೀಡು ಸಮೀಪದ ಸಿದ್ದಾಪುರದಲ್ಲಿ ಬಂಡೆಕಲ್ಲುಗಳನ್ನು ಕೊರೆಯದೇ ಹಾಕುತ್ತಿರುವ ಪೈಪ್ ಲೈನ್.
ಹಳೇಬೀಡು ಸಮೀಪದ ಸಿದ್ದಾಪುರದಲ್ಲಿ ಬಂಡೆಕಲ್ಲುಗಳನ್ನು ಕೊರೆಯದೇ ಹಾಕುತ್ತಿರುವ ಪೈಪ್ ಲೈನ್.
ಬಂಡೆ ಕೊರೆಯದೇ ಭೂಮಿಯ ಮೇಲೆ ಅಳವಡಿಸುತ್ತಿರುವ ಪೈಪ್‌ಲೈನ್ ಮಣ್ಣು ಸರಿಯಾಗಿ ಮುಚ್ಚದೇ ವಾಹನ ಸಂಚಾರಕ್ಕೆ ತೊಡಕು ಅಪಪೂರ್ಣ ಕಾಮಗಾರಿಯಿಂದ ಪುಷ್ಪಗಿರಿ ಕ್ಷೇತ್ರಕ್ಕೆ ತೆರಳಲು ತೊಂದರೆ
ಸಿದ್ದಾಪುರದಲ್ಲಿ ಜೆಜೆಎಂ ಪೈಪ್‌ಲೈನ್‌ ತೆರವು ಮಾಡಿ ಹೊಸದಾಗಿ ವ್ಯವಸ್ಥಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಗುತ್ತಿಗೆದಾರರ ಮೇಸ್ತ್ರಿ ಕಾಮಗಾರಿ ಮುಂದುವರಿಸಿದ್ದರೆ ಕ್ರಮ ಕೈಗೊಳ್ಳುತ್ತೇವೆ.
ರಂಜಿತಾ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ಎಇಇ
ಪೈಪ್‌ಲೈನ್ ಕಾಮಗಾರಿಯ ಅವ್ಯವಸ್ಥೆ ನೋಡಿದರೆ ಮನೆ ನಲ್ಲಿಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಮನೆ ನಲ್ಲಿಗಳ ಕೆಲಸದಲ್ಲಿಯೂ ಗುಣಮಟ್ಟ ಕಾಣುತ್ತಿಲ್ಲ.
ಜಿ.ಎನ್.ರಾಜಶೇಖರ್ ಸಿದ್ದಾಪುರ ಗ್ರಾಮಸ್ಥ
‘ಕಾಮಗಾರಿಗೆ ಒಪ್ಪಿಗೆ ಸೂಚಿಸಿಲ್ಲ’
‘ಮಾರ್ಚ್ 8 ರಂದು ಸಿದ್ದಾಪುರದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಪರಿಶೀಲನೆ ನಡೆಸಿದ್ದೇವೆ. ಪೈಪ್ ಲೈನ್ ಆಳಕ್ಕೆ ಇಳಿಯದಿರುವುದು ಗಮನಕ್ಕೆ ಬಂತು. ಒಂದೆರೆಡು ಕಡೆ ಮಾತ್ರವಲ್ಲದೇ ಗ್ರಾಮದ ಸುತ್ತ ಸಂಪೂರ್ಣ ಪೈಪ್‌ಲೈನ್ ಕೆಲಸ ಸಮರ್ಪಕವಾಗಿ ನಿರ್ವಹಣೆಯಾಗಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಂಜಿತಾ ಹೇಳಿದ್ದಾರೆ. ‘ಕಾಮಗಾರಿ ನಿಲ್ಲಿಸಲು ಕೆಲಸಗಾರರಿಗೆ ಸೂಚಿಸಿದೆವು. ಗುತ್ತಿಗೆದಾರರ ಮೇಸ್ತ್ರಿ ಮಾತಿಗೆ ಕಿವಿಗೊಡದೇ ಯಥಾಸ್ಥಿತಿಯಲ್ಲಿ ಕೆಲಸ ಮುಂದುವರಿಸಿದ್ದಾರೆ. ಹಾಲಿ ನಡೆದಿರುವ ಅಸಮರ್ಪಕ ಕಾಮಗಾರಿಗೆ ನಮ್ಮ ಒಪ್ಪಿಗೆ ಸೂಚಿಸಿಲ್ಲ’ ಎಂದು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಂಜಿತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT