ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿರುವರಿಗೆ ನೆರವಿನ ಪ್ಯಾಕೇಜ್‌ ಘೋಷಿಸಿ

ಸೋಂಕಿತರ ಮರಣದ ಸಂಖ್ಯೆ ಮುಚ್ಚಿಡಬೇಡಿ: ಶಾಸಕ ರೇವಣ್ಣ
Last Updated 17 ಮೇ 2021, 13:14 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಹೂವು ಬೆಳೆಗಾರರು, ಆಟೊ,ಟಾಂಗಾವಾಲಾಗಳಿಗೆ ರಾಜ್ಯ ಸರ್ಕಾರ ಕೂಡಲೇ ಪ್ಯಾಕೇಜ್‌ ಘೋಷಣೆ ಮಾಡಬೇಕು
ಎಂದು ಶಾಸಕ ಎಚ್‌.ಡಿ. ರೇವಣ್ಣ ಆಗ್ರಹಿಸಿದರು.

ನೆರೆಯ ಆಂದ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಈಗಾಗಲೇ ಬಡವರಿಗೆ ಆರ್ಥಿಕ ಸಹಾಯ ಹಾಗೂ ಆಹಾರ ಧಾನ್ಯಗಳ ಕಿಟ್‌ ವಿತರಿಸಲಾಗಿದೆ. ಅದೇ ರೀತಿರಾಜ್ಯದಲ್ಲಿಯೂ ವಿತರಣೆ ಮಾಡಬೇಕು. ಇಲ್ಲದಿದ್ದರೆ ತರಕಾರಿ ವ್ಯಾಪಾರಿಗಳು,ರೈತರು, ಬಡವರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದೊದಗಲಿದೆ ಎಂದು
ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಮತ್ತು ಸೋಂಕಿತರ ಮರಣದ ಅಂಕಿ ಅಂಶವನ್ನು ಅಧಿಕಾರಿಗಳು ಮರೆಮಾಚದೆ ನಿಖರವಾದ ಮಾಹಿತಿ ನೀಡಬೇಕು. ಹತ್ತುದಿನಗಳಿಂದ ಜಿಲ್ಲೆಯಲ್ಲಿ ನಿತ್ಯ ಸರಾಸರಿ 25 ಜನ ಮೃತಪಡುತ್ತಿದ್ದು, ಇದರಲ್ಲಿ ಶೇಕಡಾ 50ರಷ್ಟು ರೋಗಿಗಳು ಆಮ್ಲಜನಕಕೊರತೆಯಿಂದಲೇ ಮೃತರಾಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸೇರಿ ನಿತ್ಯ 1,500 ಸಿಲಿಂಡರ್‌ಆಮ್ಲಜನಕ ಬೇಕು. ಆದರೆ ಲಭ್ಯ ಇರುವುದು1 ಸಾವಿರ ಸಿಲಿಂಡರ್ ಮಾತ್ರ. ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಗೆ ಅಗತ್ಯವಿರುವ ಆಮ್ಲಜನಕ ನೀಡಬೇಕು ಎಂದು ಒತ್ತಾಯಿಸಿದರು.

ನಿತ್ಯ ಸರಾಸರಿ 2 ಸಾವಿರ ಕೊರೊನಾ ಪಾಸಿಟಿವ್ ಪ‍್ರಕರಣಗಳು ಪತ್ತೆಯಾಗುತ್ತಿವೆ.ನಿಖರವಾಗಿ ಪರೀಕ್ಷೆ ಮಾಡಿದರೆ ಅಂದಾಜು 50 ಸಾವಿರ ಸೋಂಕಿತರುಪತ್ತೆಯಾಗಬಹುದು. ಸರ್ಕಾರ ಕೋವಿಡ್ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದೆ.
ಕಳೆದ ಕೆಲವು ದಿನಗಳಿಂದ ಸೋಂಕು ಇಳಿಮುಖವಾಗುತ್ತಿದೆ ಎಂದುಹೇಳಲಾಗುತ್ತಿದೆ. ಆದರೆ ಪರೀಕ್ಷೆ ಪ್ರಮಾಣವೇ ತಗ್ಗಿದೆ. ತಜ್ಞರು ಹೇಳುವಂತೆ ಹೆಚ್ಟುಟೆಸ್ಟ್‌ ಮಾಡಿ, ಸೋಂಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು ಎಂದು ಸಲಹೆ
ನೀಡಿದರು.

ರಾಜ್ಯ ಸರ್ಕಾರ ಜನ ಸಾಮಾನ್ಯರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಮೃತರಾದವರ ಲೆಕ್ಕ ಮಾತ್ರ ಸಿಗುತ್ತಿದೆ. ಹಳ್ಳಿಗಳಲ್ಲಿನ ಸಾವು ಲೆಕ್ಕಕ್ಕೆ ಇಲ್ಲ.ಜಿಲ್ಲೆಯಲ್ಲಿ ಖಾಲಿ ಇರುವ 59 ವೈದ್ಯರ ಹುದ್ದೆಯನ್ನು ಭರ್ತಿ ಮಾಡುವಂತೆ ಅನೇಕ ಬಾರಿ ಪತ್ರ ಬರೆದರೂ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಿ ಆರು ದಿನದ ನಂತರ ವರದಿ‌ ಬರುತ್ತಿದೆ. ಕೋವಿಡ್‌ ನಿರ್ವಹಣೆ ಹೊತ್ತಿರುವ ಪಂಚ ಸಚಿವರು ದಿಕ್ಕಾಪಾಲಾಗಿದ್ದಾರೆ ಎಂದು ದೂರಿದರು.

ಕೋವಿಡ್‌ನಿಂದ ಮೃತಪಟ್ಟ ಚನ್ನರಾಯಪಟ್ಟಣದ ಪತ್ರಕರ್ತ ಸ್ವಾಮಿಗೌಡ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ‌ ನೀಡಬೇಕು ಹಾಗೂ ಎಲ್ಲಾ ಪತ್ರಕರ್ತರಿಗೂ ಆರೋಗ್ಯ ವಿಮೆ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT