ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತು ನಿಯಂತ್ರಣ ಕಾರ್ಯಾಗಾರ: ದುಶ್ಚಟಗಳಿಂದ ಭವಿಷ್ಯದ ಮೇಲೆ ಕರಿನೆರಳು

Published 2 ಜೂನ್ 2023, 13:41 IST
Last Updated 2 ಜೂನ್ 2023, 13:41 IST
ಅಕ್ಷರ ಗಾತ್ರ

ಹಾಸನ: ನಗರದ ಕೆಐಎಡಿಬಿ ಕೈಗಾರಿಕಾ ಪ್ರದೇಶ ಬಳಿ ಇರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಕರ್ನಾಟಕ, ಭುವನೇಶ್ವರಿ ಮದ್ಯವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರಗಳ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುವಿನ ನಿಯಂತ್ರಣ ಕುರಿತು ಒಂದು ದಿನದ ಕಾರ್ಯಾಗಾರವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅನುಪಮಾ ಕೆ.ಆರ್., ಮತ್ತು ಬರಿಸುವ ವಸ್ತುಗಳು ಮಾದಕ ವಸ್ತುಗಳಾಗಿದ್ದು, ಸಹವಾಸದಿಂದ ಶುರುವಾಗಿಸುವ ಅಭ್ಯಾಸದಿಂದ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಓದಬೇಕು. ಓದುವ ವಯಸ್ಸಿನಲ್ಲಿ ಶೋಕಿ ಮಾಡಿದರೆ, ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬಹೇಳಿದರು.

ಮಕ್ಕಳು ವಿದ್ಯಾಭ್ಯಾಸವನ್ನು ಒಂದು ತಪಸ್ಸಾಗಿ ಸ್ವೀಕರಿಸಬೇಕು. ಪೋಷಕರು ಮಕ್ಕಳಿಗೆ ಸಂಸ್ಕಾರ, ಜೀವನದ ಮೌಲ್ಯಗಳನ್ನು ಕಲಿಸಬೇಕು. ಇವು ಮಕ್ಕಳನ್ನು ಒಂದು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ. ವಿದ್ಯಾರ್ಥಿಗಳು ನೈತಿಕ ಜೀವನ ನಡೆಸುವುದಕ್ಕೆ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲ ಬಸವರಾಜ ಮಠಪತಿ ಮಾತನಾಡಿ, 1972 ರಲ್ಲಿ ರಾಜ್ಯ ಸರ್ಕಾರ ಈ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಇಲ್ಲಿಯವರೆಗೆ 33 ಶಾಖೆಗಳನ್ನು ಹೊಂದಿದೆ ಎಂದರು.

ವಿದ್ಯಾರ್ಥಿಗಳ ಈ ವಯಸ್ಸು, ಹಕ್ಕಿಗಳಿಗೆ ರೆಕ್ಕೆ ಮೂಡುವ ಹಾಗೆ. ಈ ಸುವರ್ಣ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಮಾದಕ ವಸ್ತುಗಳಿಗೆ ದಾಸರಾಗದೇ, ಜೀವನವನ್ನು ಉಜ್ವಲಗೊಳಿಸಬೇಕು ಎಂದರು.

ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ಸಂಯೋಜಕಿ ಶೈಲಶ್ರೀ ಮಾತನಾಡಿ, ಶಾಲಾ-ಕಾಲೇಜು, ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ, ಸಮುದಾಯಗಳಿಗೆ ಅರಿವು ಮೂಡಿಸುವ ಕೆಲಸ ಎಸ್ಎಲ್‌ಸಿಎ ಮಾಡುತ್ತಿದೆ ಎಂದರು.

ಸಮೀಕ್ಷೆಯ ಪ್ರಕಾರ ದೇಶದಲ್ಲಿ 16 ಕೋಟಿ ಜನ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ 7 ರಿಂದ 21 ವಯಸ್ಸಿನ ಮಕ್ಕಳು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಕಾಲೇಜಿನ ಮಕ್ಕಳಿಗೂ ಹಾಗೂ ಪೋಷಕರಿಗೂ ಇದರ ಬಗ್ಗೆ ತಿಳಿದುಕೊಳ್ಳುವುದು ಮಹತ್ವದ್ದಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಜಿಲ್ಲಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಯು.ಜೆ. ಮಾತನಾಡಿ, ವಿದ್ಯಾರ್ಥಿಗಳು 5 ವರ್ಷ ಕಷ್ಟಪಟ್ಟು ಅಭ್ಯಾಸ ಮಾಡಿದರೆ, ಭವಿಷ್ಯದಲ್ಲಿ 50 ವರ್ಷಗಳ ಕಾಲ ಸುಖಕರವಾದ ಜೀವನ ನಡೆಸಲು ಸಹಾಯವಾಗುತ್ತದೆ ಎಂದರು.

ಮೊಬೈಲ್ ಅನ್ನು ನಾವು ತಲೆ ತಗ್ಗಿಸಿ ನೋಡುತ್ತೇವೆ. ಆದರೆ ಅದು ಕೊನೆಗೆ ತಲೆ ಎತ್ತಲು ಆಗದಂತೆ ಮಾಡುತ್ತದೆ. ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಮುಂದೆ ಅದು ನಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ ಎಂದು ಹೇಳಿದರು.

ಭುವನೇಶ್ವರಿ ಮದ್ಯಪಾನ ಸೇವನಿಗಳ ಸಮಗ್ರ ಪುನರ್ವಸತಿ ಕೇಂದ್ರದ ಯೋಜನಾ ನಿರ್ದೇಶಕಿ ಅಂಜಲಿ ಗೋವಿಂದ ರಾಜು ವೇದಿಕೆಯಲ್ಲಿದ್ದರು. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಸಿಬ್ಬಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT