ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಬೈಲಾ ತಿದ್ದುಪಡಿ: ಹಾಸನದಲ್ಲಿ ಮಹೇಶ ಜೋಶಿ ವಿರುದ್ಧ ಆಕ್ರೋಶ

Published 3 ಸೆಪ್ಟೆಂಬರ್ 2023, 21:29 IST
Last Updated 3 ಸೆಪ್ಟೆಂಬರ್ 2023, 21:29 IST
ಅಕ್ಷರ ಗಾತ್ರ

ಹಾಸನ: ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕಗಳ ನಾಮನಿರ್ದೇಶನ ಸದಸ್ಯರ ನೇಮಕಕ್ಕೆ ಸಂಬಂಧಿಸಿ ಬೈಲಾ ತಿದ್ದುಪಡಿಗೆ ಬೆಂಗಳೂರು ನಗರ ಜಿಲ್ಲಾ ಘಟಕದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೇಲೂರು ತಾಲ್ಲೂಕಿನ ಪುಷ್ಪಗಿರಿ ಮಠದಲ್ಲಿ ಭಾನುವಾರ ನಡೆದ ಪರಿಷತ್‌ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ ಜೋಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪದಾಧಿಕಾರಿಗಳು, ಸಭೆಯಿಂದ ಹೊರನಡೆದರು.

‘ಜಿಲ್ಲಾ ಘಟಕಗಳ ಕಾರ್ಯಕಾರಿ ಸಮಿತಿ ನಾಮನಿರ್ದೇಶನ ಸದಸ್ಯರ ಪಟ್ಟಿಯನ್ನು ಕೇಂದ್ರ ಸಮಿತಿಗೆ ಕಳುಹಿಸುವಲ್ಲಿ ಜಿಲ್ಲಾ ಘಟಕಗಳ ಅಧ್ಯಕ್ಷರು ವಿಫಲರಾದರೆ, ಕೇಂದ್ರ ಸಮಿತಿ ಅಧ್ಯಕ್ಷರೇ ಸ್ವಯಂ ನಿರ್ಣಯ ಕೈಗೊಂಡು ನಾಮನಿರ್ದೇಶನ ಮಾಡಲು ನಿಯಮಾವಳಿ ತಿದ್ದುಪಡಿ ತರಲಾಗುತ್ತಿದೆ. ಇದು ಜಿಲ್ಲಾ ಘಟಕಗಳ ಅಧಿಕಾರ ಮೊಟಕುಗೊಳಿಸುವ ಹುನ್ನಾರ’ ಎಂದು ಆರೋಪಿಸಿದರು.

ಬೆಂಗಳೂರು ನಗರ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಹಂ.ಗು. ರಾಜೇಶ್ ಮಾತನಾಡಿ, ‘ಪರಿಷತ್ತಿನ 108 ವರ್ಷಗಳ ಇತಿಹಾಸದಲ್ಲಿ 2021ರವರೆಗೆ 6 ಬಾರಿ ಬೈಲಾ ತಿದ್ದುಪಡಿ ಮಾಡಲಾಗಿದೆ. ಆದರೆ, ಈ ಅವಧಿ ಪೂರ್ಣಗೊಳ್ಳುವ ಎರಡು ವರ್ಷಕ್ಕೂ ಮೊದಲೇ 2ನೇ ಬಾರಿ ಬೈಲಾ ತಿದ್ದುಪಡಿ ಮಾಡಲು ಜೋಶಿ ಹೊರಟಿದ್ದಾರೆ. ಮೊದಲ ತಿದ್ದುಪಡಿಯೇ ಕ್ರಮಬದ್ಧವಾಗಿಲ್ಲ. ಅದು ಕೋರ್ಟ್‌ನಲ್ಲಿರುವಾಗ ಜಿಲ್ಲಾ ಘಟಕಗಳ ಅಧ್ಯಕ್ಷರು ನಾಮ ನಿರ್ದೇಶನ ಸದಸ್ಯರನ್ನು ಯಾವ ಬೈಲಾದ ಆಧಾರದಲ್ಲಿ ನೇಮಿಸಬೇಕೆಂಬ ಗೊಂದಲವಿದೆ. ಹೀಗಿರುವಾಗ, 2ನೇ ತಿದ್ದುಪಡಿ ಮಾಡುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದರು.

‘ಕಾರ್ಯಕಾರಿ ಸಮಿತಿಯಲ್ಲಿ ತಿದ್ದುಪಡಿ ವಿಷಯ ಸ್ಥಿರೀಕರಣಗೊಳ್ಳುವ ಮುನ್ನವೇ ವಿಶೇಷ ಸಾಮಾನ್ಯ ಸಭೆಯ ಮುಂದೆ ತಂದು ಕ್ರಿಯಾಲೋಪ ಎಸಗಿದ್ದಾರೆ. ಈ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೇ ಅನುಮೋದನೆಯಾಗಿದೆ ಎಂದು ಘೋಷಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಜೋಶಿಯವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಹಾಗೂ ಪರಿಷತ್ತಿನ ಉಳಿವಿಗೆ ಹೋರಾಟದ ಅಗತ್ಯವಿದೆ’ ಎಂದರು.

ಮತ್ತೊಬ್ಬ ಗೌರವ ಕಾರ್ಯದರ್ಶಿ ಎಲ್. ಹರ್ಷ ಮಾತನಾಡಿ, ‘ಸದಸ್ಯರು ಬರಲಾಗದಷ್ಟು ದೂರದಲ್ಲಿರುವ ಪುಷ್ಪಗಿರಿಯಲ್ಲಿ ಸಭೆ ನಡೆಸುತ್ತಿದ್ದಾರೆ. 4.5 ಲಕ್ಷ ಸದಸ್ಯರಿರುವ ಸಾಹಿತ್ಯ ಪರಿಷತ್ತಿನ ವಿಶೇಷ ಸಾಮಾನ್ಯ ಸಭೆಗೆ ಬಂದಿರುವವವರ ಸಂಖ್ಯೆ 250ರಿಂದ ‌300 ಮಾತ್ರ. ಸದಸ್ಯರಿಗೆ ಸರಿಯಾದ ಮಾಹಿತಿ ಇಲ್ಲ. ಗುಪ್ತ ಸಭೆಯಲ್ಲಿ ಸದಸ್ಯರನ್ನು ಕತ್ತಲೆಯಲ್ಲಿಟ್ಟು ತಮಗೆ ಬೇಕಾದ ರೀತಿಯಲ್ಲಿ ಜೋಶಿ ಅವರು ಬೈಲಾ ತಿದ್ದುಪಡಿ ಮಾಡಿಕೊಳ್ಳಲು ಹೊರಟಿದ್ದಾರೆ’ ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಹೇಶ ಜೋಶಿ, ‘ಪರಿಷತ್ತು ಆರಂಭವಾದಾಗ ಆನ್‌ಲೈನ್ ಇರಲಿಲ್ಲ. ಈಗ ಆಗಿರುವ ಬದಲಾವಣೆಗೆ ಹೊಂದಿಕೊಂಡು ಸಾಗಬೇಕಾಗಿದೆ. ಈ ದಿಸೆಯಲ್ಲಿ ತಿದ್ದುಪಡಿ ಅನಿವಾರ್ಯ. ಏಕ ಧ್ವನಿಯಲ್ಲಿ ನಿರ್ಣಯ ಆಗಿದೆ. ಮೂರು ಸದಸ್ಯರು ಮಾತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT