ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಬಸವಣ್ಣ: ಸಿದ್ದಲಿಂಗ ಸ್ವಾಮೀಜಿ

ಸಕಲೇಶಪುರ: ಅಶ್ವಾರೂಢ ಬಸವಣ್ಣನ ಕಂಚಿನ ಪ್ರತಿಮೆ ಲೋಕಾರ್ಪಣೆ
Published 13 ಜೂನ್ 2024, 14:32 IST
Last Updated 13 ಜೂನ್ 2024, 14:32 IST
ಅಕ್ಷರ ಗಾತ್ರ

ಸಕಲೇಶಪುರ: ಬಸವಣ್ಣನವರ ವಚನಗಳಲ್ಲಿ ಬರುವ ಸಂದೇಶಗಳು ಜಗತ್ತಿನ ಯಾವುದೇ ಸಂದೇಶಗಳಿಗಿಂತ ಕಡಿಮೆ ಇಲ್ಲ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಮಲೆನಾಡು ವೀರಶೈವ ಸಮಾಜ ವತಿಯಿಂದ ಪಟ್ಟಣದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿ ನಿರ್ಮಿಸಿರುವ ಅಶ್ವಾರೂಢ ಬಸವಣ್ಣನ ಕಂಚಿನ ಪ್ರತಿಮೆಯನ್ನು ಗುರುವಾರ ಲೋಕಾರ್ಪಣೆ ಮಾಡಿದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಜಾತಿಯಿಂದ ಮನುಷ್ಯನನ್ನು ಮೇಲು –ಕೀಳು ಎಂದು ನೋಡುವ ಅಶ್ಪೃಶ್ಯತೆ ಉತ್ತುಂಗದಲ್ಲಿದ್ದ 12ನೇ ಶತಮಾನದಲ್ಲಿಯೇ, ಕರ್ನಾಟಕದಲ್ಲೊಂದು ವಚನ ಕ್ರಾಂತಿಯ ಮೂಲಕ ಸಮಾನತೆ ಸಾರಿದ ಬಸವಣ್ಣ, ಜಗತ್ತು ಕಂಡ ಅಪರೂಪದ ವ್ಯಕ್ತಿ ಎಂದರು.

ಪ್ರಪಂಚದಲ್ಲಿಯೇ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಮೊದಲಿಗ ಬಸವಣ್ಣ. ಪ್ರಪಂಚಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಬಸವಣ್ಣ, ಹಲವು ಕಟ್ಟಳೆಗಳೊಂದಿಗೆ ತುಳಿತಕ್ಕೆ ಒಳಗಾಗಿದ್ದ ಸ್ತ್ರೀಯರಿಗೆ ಮೊದಲ ಸಮಾನತೆ ನೀಡಿದರು. ಬಸವಣ್ಣನವರ ವಿಚಾರಧಾರೆಗಳು ಭೂಮಿ ಇರುವವರೆಗೂ ಶಾಶ್ವತ ಎಂದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಮಲೆನಾಡನ್ನು ಕಾಡುತ್ತಿರುವ ಕಾಡಾನೆ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಗಮನ ಸೆಳೆದು, ಶಾಶ್ವತ ಪರಿಹಾರಕ್ಕೆ ಶಕ್ತಿ ಮೀರಿ ಶ್ರಮಿಸುತ್ತೇನೆ. ಅಧಿಕಾರ ಇರುವವರೆಗೂ ಎಲ್ಲ ಶಾಸಕರ ಸಹಕಾರ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಈ ಜಿಲ್ಲೆಯ ಮಗನಂತೆ ಕೆಲಸ ಮಾಡುತ್ತೇನೆ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸಮಸಮಾಜದ ಕನಸು ಕಂಡವರು ಬಸವಣ್ಣನವರು. ಬಸವಣ್ಣನವರು ಇನ್ನೂ ಕೆಲಕಾಲ ಬದುಕಿದ್ದರೆ, ದೇಶದಲ್ಲಿ ಜಾತಿ ಎಂಬುದು ನಾಶವಾಗುತ್ತಿತ್ತು. ಅನಾದಿ ಕಾಲದಿಂದಲೇ ಅನಿಷ್ಟ ಪದ್ಧತಿಗಳ ವಿರುದ್ದ ಹೋರಾಟ ಆರಂಭವಾದರೂ, ಇನ್ನೂ ಕೆಲವೆಡೆ ಮೂಢನಂಬಿಕೆಗಳು ಆಚರಣೆಯಲ್ಲಿ ಇರುವುದು ದುರದೃಷ್ಟಕರ ಎಂದರು.

ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ತೆಂಕಲಗೋಡು ಬೃಹನ್ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೇಲೂರು ಶಾಸಕ ಎಚ್‌.ಕೆ. ಸುರೇಶ್‌, ಮದ್ದೂರು ಶಾಸಕ ಕೆ.ಎಂ. ಉದಯ್‌ಗೌಡ, ಮಾಜಿ ಶಾಸಕರಾದ ಎಚ್‌.ಕೆ. ಕುಮಾರಸ್ವಾಮಿ, ಎಚ್‌.ಎಂ. ವಿಶ್ವನಾಥ್, ಬಿ.ಆರ್‌. ಗುರುದೇವ್‌, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ಕಾಂಗ್ರೆಸ್‌ ಮುಖಂಡ ಮುರುಳಿ ಮೋಹನ್‌, ಮಲೆನಾಡು ವೀರಶೈವ ಸಮಾಜ ಅಧ್ಯಕ್ಷ ಎಚ್‌.ಎನ್‌. ದೇವರಾಜು, ಕಾರ್ಯದರ್ಶಿ ಎಂ.ಎಸ್‌. ಧರ್ಮಪ್ಪ ಮೂಗಲಿ, ಅಖಿಲ ಭಾರತ ವೀರಶೈವ ಸಮಾಜದ ರಾಷ್ಟೀಯ ಮಹಿಳಾ ಘಟಕದ ಅಧ್ಯಕ್ಷೆ ಮಧುರ ಅಶೋಕ್‌ಕುಮಾರ್, ಹುರುಡಿ ಅರುಣ್ ಕುಮಾರ್, ಗಗನ್‌, ಮಸ್ತಾರೆ ಲೋಕೇಶ್‌, ಹುರುಡಿ ಪ್ರಶಾಂತ್, ಮಾಸವಳ್ಳಿ ಸಂಗಪ್ಪ, ಮಠಸಾಗರ ಶ್ರೀಧರ್,  ಶಶಿಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಯಡೇಹಳ್ಳಿ ಆರ್. ಮಂಜುನಾಥ್ ನಿರೂಪಿಸಿದರು. ಅಕ್ಕಮಹಾದೇವಿ ಮಹಿಳಾ ವೇದಿಕೆ ಮಹಿಳೆಯರು ಪ್ರಾರ್ಥಿಸಿದರು.   

ಸಕಲೇಶಪುರದಲ್ಲಿ  ಬಸವೇಶ್ವರ ಕಂಚಿನ ಪ್ರತಿಮ ಲೋಕಾರ್ಪಣೆ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ಇತರರು ದೀಪ ಬೆಳಗಿಸಿದರು
ಸಕಲೇಶಪುರದಲ್ಲಿ  ಬಸವೇಶ್ವರ ಕಂಚಿನ ಪ್ರತಿಮ ಲೋಕಾರ್ಪಣೆ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ಇತರರು ದೀಪ ಬೆಳಗಿಸಿದರು
ಸಕಲೇಶಪುರದಲ್ಲಿ ಗುರುವಾರ ಬಸವೇಶ್ವರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನ
ಸಕಲೇಶಪುರದಲ್ಲಿ ಗುರುವಾರ ಬಸವೇಶ್ವರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನ

Highlights - 2 ಟನ್‌ ತೂಕದ ಆಕರ್ಷಕ ಅಶ್ವಾರೂಢ ಬಸವಣ್ಣನ ಕಂಚಿನ ಪ್ರತಿಮೆಯ ಆಕರ್ಷಣೆ ಪ್ರತಿಮೆಗೆ ₹ 20 ಲಕ್ಷ ದೇಣಿಗೆ ನೀಡಿದ ಪುನೀತ್ ಬನ್ನಳ್ಳಿ, ಜೆ.ಡಿ.ವೀರಪ್ಪಗೆ ಸನ್ಮಾನ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಬಸವೇಶ್ವರ ಪ್ರತಿಮೆವರೆಗೆ ಭಕ್ತರ ಮೆರವಣಿಗೆ

Cut-off box - ಜಗತ್ತು ಕಂಡ ವಿಶೇಷ ಸಂತ ಬಸವಣ್ಣ ಜಗತ್ತಿನ ಸರ್ವಸತ್ವವನ್ನು ಸಾಮಾನ್ಯ ಜನರಿಗೂ ತಿಳಿಸಿಕೊಟ್ಟ ಬಸವಣ್ಣ ಜಗತ್ತು ಕಂಡ ವಿಶೇಷ ಸಂತ ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು. ವೇದ ಉಪನಿಷತ್‌ನಲ್ಲಿರುವ ಎಲ್ಲ ವಿಚಾರಗಳನ್ನು ಸರಳವಾಗಿ ಕನ್ನಡದಲ್ಲಿ ಕಟ್ಟಿಕೊಟ್ಟವರು ಬಸವಣ್ಣನವರು. ಅಧಿಕಾರವನ್ನು ನಿರ್ವಹಿಸುವ ಪರಿಕಲ್ಪನೆಯನ್ನು ರಾಜಕೀಯ ವ್ಯಕ್ತಿಗಳು ಅವರಿಂದ ಕಲಿಯಬೇಕಿದೆ. ಸಮಾಜದ ಮುಖ್ಯ ಸ್ಥಾನದಲ್ಲಿದ್ದ ಬಸವಣ್ಣ ಸತ್ಯ ಧರ್ಮದ ಹಾದಿಗೆ ಚ್ಯುತಿ ಬಂದ ಕ್ಷಣದಲ್ಲೇ ತಮ್ಮ ಅಧಿಕಾರದಿಂದ ಕೆಳಗಿಳಿಯುವ ಮೂಲಕ ಜಗಜ್ಯೋತಿಯಾದರು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT